ಭಾನುವಾರ, ಏಪ್ರಿಲ್ 2, 2023
23 °C
ದಾಖಲಾಗದ ಎಫ್‌ಐಆರ್

ಇನ್‌ಸ್ಪೆಕ್ಟರ್‌ ನಂದೀಶ್ ಸಾವು ಪ್ರಕರಣ: ಸಚಿವರು ಸೇರಿ 6 ಮಂದಿ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ಪುರ: ಕರ್ತವ್ಯ ಲೋಪ ಆರೋಪದ ಅಡಿ ಅಮಾನತುಗೊಂಡಿದ್ದ ಕೆ.ಆರ್.ಪುರ ಇನ್‌ಸ್ಪೆಕ್ಟರ್‌ ಎಚ್.ಎಲ್.ನಂದೀಶ್ ಹೃದಯಾಘಾತದಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಇಬ್ಬರು ಸಚಿವರು ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 6 ಜನರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ದೂರು ನೀಡಿದ್ದಾರೆ.

ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ನಗರ ಪೊಲೀಸ್ ಅಯುಕ್ತ ಪ್ರತಾಪ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಬೈರತಿ ಬಸವರಾಜ ಸಹೋದರ ಗಣೇಶ್ ಮತ್ತು ಸಂಬಂಧಿ ಚಂದ್ರಪ್ಪ ವಿರುದ್ಧ ಸೆಕ್ಷನ್ 304 (ಎ) ಮತ್ತು 107 ಅಡಿಯಲ್ಲಿ ಎಫ್.ಐ.ಆರ್ ದಾಖಲಿಸುವಂತೆ ದೂರು ನೀಡಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿಲ್ಲ. 

ನಂದೀಶ್ ಅವರು ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಬೈರತಿ ಬಸವರಾಜ ಅವರ ಸಂಬಂಧಿಗಳ ಕಿರುಕುಳವೇ ಇನ್‌ಸ್ಪೆಕ್ಟರ್‌ ನಂದೀಶ್ ಹೃದಯಾಘಾತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

‘ಬೈರತಿ ಬಸವರಾಜ ಸಹೋದರ ಗಣೇಶ ಮತ್ತು ಸಂಬಂಧಿಕ ಚಂದ್ರಪ್ಪ ಅವರು ಹೇಳಿದಂತೆ ಕೇಳಲಿಲ್ಲ. ಆಕ್ರಮಗಳಿಗೆ ಸಹಕಾರ ನೀಡಲಿಲ್ಲ ಎಂಬ ಉದ್ದೇಶದಿಂದ ನಂದೀಶ್ ಅವರನ್ನು ಗುರಿಯಾಗಿಸಿದ್ದರು. ಗಣೇಶ್ ಮತ್ತು ಚಂದ್ರಪ್ಪ ಕ್ಷೇತ್ರದಲ್ಲಿ ಖಾಲಿ ಸೈಟ್‌ನಲ್ಲಿ ಬೇಲಿ ಹಾಕಿಸಿ ಹಣ ವಸೂಲಿ, ಸರ್ಕಾರಿ ಅಧಿಕಾರಿಗಳಿಂದ ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ದಂಧೆ, ಕ್ಷೇತ್ರದ ಠಾಣೆಗಳಲ್ಲಿ ಯಾವುದಾದರೂ ಹುದ್ದೆಗೆ ಇವರ ಅನುಮತಿ ಪಡೆಯಬೇಕಿದೆ’ ಎಂದು ಅಬ್ರಾಹಂ ಆರೋಪಿಸಿದ್ದಾರೆ.

‘ಉಪ್ಪಾರಪೇಟೆಯಿಂದ ದಾಳಿ ನಡೆಸಲು ಬರುವ ಸಿಸಿಬಿ ಅಧಿಕಾರಿಗಳಿಗೆ ಮೆಜೆಸ್ಟಿಕ್, ಹೈಗ್ರೌಂಡ್ಸ್‌ ಪೊಲೀಸ್ ಠಾಣೆ, ಇಂದ್ರಾನಗರದಲ್ಲಿರುವ ಪಬ್‌ಗಳು ಕಾಣಲಿಲ್ಲವೆ? ಗಣೇಶ್ ಮತ್ತು ಚಂದ್ರಪ್ಪ ಕುಮ್ಮಕ್ಕಿನಿಂದ ಸಿಸಿಬಿ ಸಿಬ್ಬಂದಿ ಬಂದಿದ್ದಾರೆ. ಉದ್ದೇಶಪೂರ್ವಕವಾಗಿ ಸಿಸಿಬಿಗೆ ಮಾಹಿತಿ ನೀಡಿ ದಾಳಿ ನಡೆಸುವಂತೆ ಮಾಡಿದ್ದಾರೆ. ನಂದೀಶ್ ಅವರನ್ನು ಕೆಲಸದಿಂದ ಅಮಾನತು ಮಾಡುವಂತೆ ಒತ್ತಡ ಹಾಕಿದ್ದರು. ಹೀಗಾಗಿ, ಬೈರತಿ ಬಸವರಾಜ ಅವರು ಗೃಹ ಸಚಿವರಿಗೆ ಒತ್ತಡ ತಂದು ಕಮಿಷನರ್ ಮೂಲಕ ಅಮಾನತು ಮಾಡುವಂತೆ ಮಾಡಿದ್ದಾರೆ. ಅಲ್ಲದೇ ಪೋಸ್ಟಿಂಗ್‌ಗಾಗಿ ಬೈರತಿ ಬಸವರಾಜ ಅವರಿಗೆ ₹ 50 ಲಕ್ಷ ಹಾಗೂ ಗೃಹ ಸಚಿವರಿಗೆ ₹20 ಲಕ್ಷ ನೀಡಿರುವ ಮಾಹಿತಿ ಇದೆ’ ಎಂದು ದೂರಿದ್ದಾರೆ. 

ಅಮಾನತು ಮಾಡುವ ಮೊದಲು ನಂದೀಶ್ ಕಡೆಯಿಂದ ಮಾಹಿತಿ ಕೇಳಲಿಲ್ಲ. ಇದೆಲ್ಲವೂ ನಂದೀಶ್ ಸಾವಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅಬ್ರಾಹಂ ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು