ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಖಂಡನೆ: ಉಗ್ರಪ್ಪ ಸಮಿತಿ ವರದಿ ಜಾರಿಗೆ ಒತ್ತಾಯ

Published 10 ಮೇ 2024, 15:31 IST
Last Updated 10 ಮೇ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು ಜಿಲ್ಲೆಯ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿರುವ ಬಾಲಕಿ ಕೊಲೆ ಪ್ರಕರಣವನ್ನು ಅಖಿಲ ಭಾರತ ಜನವಾದಿ‌ ಮಹಿಳಾ ಸಂಘಟನೆ ಖಂಡಿಸಿದೆ.

16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೀನಾಳನ್ನು ಪ್ರಕಾಶ್ ಅಲಿಯಾಸ್ ಓಂಪ್ರಕಾಶ್ ಎಂಬಾತ ಹತ್ಯೆ ಮಾಡಿದ್ದಾನೆ. ಇದು ಅತ್ಯಂತ ಹೇಯ ಕೃತ್ಯ. ಕೊಲೆಗಾರ ಆ ಪುಟ್ಟ ಬಾಲಕಿಯ ರುಂಡ ಕತ್ತರಿಸಿ ಹಾಕಿದ್ದಾನೆ. ಬಾಲಕಿಯನ್ನು 35 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಪೋಷಕರು ಹೊರಟಿದ್ದರು. ಮದುವೆ ಮಾಹಿತಿ ತಿಳಿದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹ ಕಾನೂನು ಬಾಹಿರವೆಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ನಂತರ, ಮದುವೆ ಮುಂದೂಡಲಾಗಿತ್ತು. ಮದುವೆ ಆಗಬೇಕಿದ್ದ ವ್ಯಕ್ತಿಯೇ ರೋಷದಿಂದ ಬಾಲಕಿಯನ್ನು ಕೊಲೆ ಮಾಡಿದ್ದಾನೆ. ಈ ರೀತಿಯ ಘಟನೆಗಳು ಆತಂಕ ಹುಟ್ಟಿಸುತ್ತಿವೆ ಎಂದು ಸಂಘಟನೆ ಅಧ್ಯ‍ಕ್ಷರಾದ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಹೇಳಿದ್ದಾರೆ.

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಖುಷಿಯಲ್ಲಿ ಬಾಲಕಿಯಿದ್ದಳು. ಮಗು ಸಂತೋಷದಲ್ಲಿರುವಾಗಲೇ ವಿಕೃತ ಮನಸ್ಸಿನ ಓಂಕಾರಪ್ಪ ಅವಳನ್ನು ಎಳೆದೊಯ್ದು ನಿರ್ದಯವಾಗಿ ರುಂಡ  ಕತ್ತರಿಸಿ ಮುಂಡವನ್ನು ಬೇರೆ ಮಾಡಿ ಅಕ್ಷರಶಃ ರಾಕ್ಷಸನಂತೆ ಅಟ್ಟಹಾಸಗೈದಿದ್ದಾನೆ. ಈ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಕರ್ನಾಟಕವೇ ತಲೆತಗ್ಗಿಸುವಂತೆ ಆಗಿದೆ. ಸಂಸದ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ನಲುಗುತ್ತಿರುವಾಗಲೇ ಕೊಡಗಿನಲ್ಲಿ ಈ ರೀತಿಯ ಕೃತ್ಯ ನಡೆದಿದೆ. ರಾಜ್ಯದಲ್ಲಿ ಹಿಂಸೆ, ದೌರ್ಜನ್ಯಗಳು ಅನಿಯಂತ್ರಿತವಾಗಿ ನಡೆಯುತ್ತಿದ್ದು, ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಮಹಿಳೆಯರ ವಿರುದ್ದ ನಡೆಯುತ್ತಿರುವ ಹಿಂಸೆ, ದೌರ್ಜನ್ಯಗಳನ್ನು ತಡೆಗಟ್ಟಲು ಉಗ್ರಪ್ಪ ಸಮಿತಿ ನೀಡಿದ ವರದಿಯನ್ನು ತಕ್ಷಣವೇ ಜಾರಿಗೆ ತರಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT