ಸೋಮವಾರ, ಜನವರಿ 20, 2020
26 °C
ಚಿಕ್ಕ ಬಾಣಾವರದಲ್ಲಿ ಸ್ಫೋಟಕ ಪತ್ತೆ ಪ್ರಕರಣ

ಜೆಂಎಂಬಿ ಮತ್ತೊಬ್ಬ ಉಗ್ರನ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲಿನ ಸೋಲದೇವನಹಳ್ಳಿಯ ಚಿಕ್ಕಬಾಣಾವರದ ಮನೆಯೊಂದರಲ್ಲಿ ಸ್ಫೋಟಕಗಳು ಹಾಗೂ ಬಳಸದೆ ಇದ್ದ ಗುಂಡುಗಳನ್ನು ವಶಪಡಿಸಿಕೊಂಡಿದ್ದ ಪ್ರಕರಣದಲ್ಲಿ ಜೆಎಂಬಿ ಮತ್ತೊಬ್ಬ ಶಂಕಿತ ಉಗ್ರನನ್ನು ಪಶ್ಚಿಮ ಬಂಗಾಳದ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತನನ್ನು ಜೆಎಂಬಿ ಸಕ್ರಿಯ ಸದಸ್ಯ ಮುಷರಫ್‌ ಹುಸೇನ್‌ ಅಲಿಯಾಸ್‌ ಹುಸೇನ್‌ ಅಲಿಯಾಸ್‌ ಮೂಸಾ (22) ಎಂದು ಗುರುತಿಸಲಾಗಿದೆ. ಈತ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ರಘುನಾಥ್‌ಗಂಜ್‌ನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

2018ರ ಮಾರ್ಚ್‌ ಮೊದಲ ವಾರ ಪ್ರಕರಣದ ಮೂರನೇ ಆರೋಪಿ ಆಸಿಫ್‌ ಇಕ್ಬಾಲ್‌ ಅಲಿಯಾಸ್‌ ನದೀಂ ಎಂಬಾತನ ಜೊತೆ ಬೆಂಗಳೂರಿಗೆ ಬಂದಿದ್ದ ಈತ ಭಾರತದ ಮೇಲೆ ಸಮರ ಸಾರುವ ಉದ್ದೇಶದಿಂದ ಹಣ ಸಂಗ್ರಹಿಸಲು ಬೆಂಗಳೂರಿನಲ್ಲಿ ನಡೆದಿದ್ದ ಎರಡು ಡಕಾಯಿತಿಗಳಲ್ಲಿ ಉಳಿದ ಶಂಕಿತ ಉಗ್ರರ ಜೊತೆ ಭಾಗಿಯಾಗಿದ್ದ ಎಂದು ಎನ್‌ಐಎ ತಿಳಿಸಿದೆ.

ಚಿಕ್ಕಬಾಣಾವರದ ಮನೆಯೊಂದರ ಮೇಲೆ 2019ರ ಜುಲೈ 8ರಂದು ಎನ್‌ಐಎ ಸ್ಥಳೀಯ ಪೊಲೀಸರ ಜೊತೆ ನಡೆಸಿದ ದಾಳಿ ಸಮಯದಲ್ಲಿ ಅಪಾರ ಪ್ರಮಾಣದ ಸ್ಫೋಟಕ, ಬಳಸದೆ ಇದ್ದ ಗುಂಡುಗಳು ಪತ್ತೆಯಾಗಿತ್ತು. ತಲೆ ಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು