ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲಿ ಪತ್ನಿ ಶವ ಹೂತಿಟ್ಟು ಎಳ್ಳಿನ ಪೈರು ನಾಟಿ ಮಾಡಿದ್ದ ಪತಿ

Last Updated 11 ಜೂನ್ 2021, 22:46 IST
ಅಕ್ಷರ ಗಾತ್ರ

ಕನಕಪುರ: ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ಪತಿಯನ್ನು ಶುಕ್ರವಾರ ಬಂಧಿಸಲಾಗಿದೆ.

ತಾಲ್ಲೂಕಿನ ಸಾತನೂರು ಹೋಬಳಿಯ ಯಲವಳ್ಳಿಯ ಕುಸುಮಾ ಅಲಿಯಾಸ್‌ ಗೀತಾ (25) ಕೊಲೆಯಾದವರು. ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್‌ ಕಂ ಕಂಡಕ್ಟರ್‌ ಆಗಿದ್ದ ಲೋಕೇಶ್‌ (30) ಬಂಧಿತ.

ಲೋಕೇಶ್‌ ಕನಕಪುರನಗರದ ಗೋಪಾಲಕೃಷ್ಣ ಟೆಂಟ್‌ ಏರಿಯಾದ ನಿವಾಸಿ. ವಿವಾಹವಾದ ನಂತರ ಯಲವಳ್ಳಿಯ ಅಜ್ಜಿ ಮನೆಯಲ್ಲಿ ಪತ್ನಿ ಜೊತೆಗೆ ವಾಸವಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ.

ಗೀತಾ ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಹೊಂಕಣ ಗ್ರಾಮದವರು. ಆರೋಪಿಗೆ ಆಕೆಯುನೆಲಮಂಗಲದ ಮಾದನಾಯನಹಳ್ಳಿಯ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿತ್ತು. ಆಕೆಯನ್ನು ಪ್ರೇಮಿಸಿ ನಾಲ್ಕು ವರ್ಷದ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ.

ಜೂನ್‌ 1ರಂದು ಪತ್ನಿಯನ್ನು ಕೊಲೆ ಮಾಡಿರುವ ಲೋಕೇಶ್‌ ಶವವನ್ನು ಯೂರಿಯಾ ಚೀಲದಲ್ಲಿ ತುಂಬಿ ಬೈಕ್‌ನಲ್ಲಿ ಜಮೀನಿಗೆ ಸಾಗಿಸಿದ್ದಾನೆ. ಎಳ್ಳು ಬೆಳೆಯಿದ್ದ ಜಾಗದಲ್ಲಿ ಗುಂಡಿ ತೆಗೆದು ಹೂತಿದ್ದಾನೆ. ಜಮೀನನ್ನು ಮಟ್ಟ ಮಾಡಿ ಎಳ್ಳಿನ ಪೈರುಗಳನ್ನು ಶವ ಹೂತಿಟ್ಟ ಜಾಗದ ಮೇಲೆ ನಾಟಿ ಮಾಡಿದ್ದಾನೆ. ಬಳಿಕಮನೆಯಿಂದ ಹೊರಹೋದ ಪತ್ನಿ ವಾಪಸ್‌ ಬಂದಿಲ್ಲ ಎಂದು ದೂರು ಕೊಟ್ಟಿದ್ದ. ಆತನ ಮೊಬೈಲ್‌ ಕರೆ ವಿವರ ಪರಿಶೀಲಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಇಬ್ಬರ ನಡುವೆ ಜಗಳ ನಡೆದಿದೆ. ಪತ್ನಿಯ ಕಪಾಳಕ್ಕೆ ಹೊಡೆದಾಗ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಭಯದಿಂದ ಬೈಕ್‌ನಲ್ಲಿ ಶವ ಸಾಗಿಸಿ ಮುಚ್ಚಿ ಹಾಕಿ ಅನುಮಾನ ಬರಬಾರದೆಂದು ದೂರು ಕೊಟ್ಟೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಉಪ ವಿಭಾಗಾಧಿಕಾರಿ ಮಂಜುನಾಥ್‌, ಡಿವೈಎಸ್‌ಪಿ ರಮೇಶ್‌, ತಹಶೀಲ್ದಾರ್‌ ವಿಶ್ವನಾಥ್‌ ವಿ.ಆರ್‌. ಸಮ್ಮುಖದಲ್ಲಿ ಗುಂಡಿಯಿಂದ ಶವ ತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ, ಸಾತನೂರು ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌, ಎಎಸ್‌ಐ ದುರ್ಗೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT