ಬುಧವಾರ, ಜನವರಿ 29, 2020
30 °C

ಅಕ್ಕಾ ಒಂದು, ಅಣ್ಣಾ ಎರಡು, ಅಮ್ಮಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ಕಾ ಒಂದು, ಅಣ್ಣಾ ಎರಡು, ಅಮ್ಮಾ ಮೂರು... ಇದು ಸಿಟಿ ಮಾರುಕಟ್ಟೆಯಲ್ಲಿ ಕೇಳಿದ ಕೂಗಲ್ಲ. ‌ಗುರುವಾರ ನಡೆದ ಉಪಚುನಾವಣೆಯಲ್ಲಿ ಮತಗಟ್ಟೆಗಳ ಮುಂದೆ ಅಭ್ಯರ್ಥಿಗಳ ಬೆಂಬಲಿಗರು ಮತದಾರರ ಬಳಿ ಗೋಗರೆದ ಬಗೆ ಇದು.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಸಾಗಿತ್ತು. ಮತಗಟ್ಟೆಯ ಬಳಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ಕಾರ್ಯಕರ್ತರು ಅಭ್ಯರ್ಥಿಗಳ ಪರವಾಗಿ ಅಂತಿಮ ಹಂತದ ಮತ ಯಾಚಿಸಿದರು. ಮತಗಟ್ಟೆಗಳ ಬಳಿ ಮೂರು ಪಕ್ಷದವರು ರಸ್ತೆಯ ಎರಡೂ ಬದಿಯಲ್ಲಿ ಮತದಾರರ ಪಟ್ಟಿಯೊಂದಿಗೆ ಕುಳಿತಿದ್ದರು. ಕೆಲವೆಡೆ ಕಾರ್ಯಕರ್ತರ ದಂಡು ದೊಡ್ಡದಾಗಿಯೇ ಸೇರಿತ್ತು.

ಮಾರಪ್ಪನಪಾಳ್ಯ ಮತ್ತು ಭೋವಿಪಾಳ್ಯದಲ್ಲಿ ಮೂರು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲೇ ಸೇರಿದ್ದರು. ಮತಗಟ್ಟೆಗೆ ತೆರಳುವ ಎಲ್ಲಾ ಮತದಾರರಿಗೂ ಕೈಮುಗಿದು ಬೇಡಿಕೊಳ್ಳುತ್ತಿದ್ದರು. ಅಭ್ಯರ್ಥಿ ಅಥವಾ ಪಕ್ಷದ ಹೆಸರು ಹೇಳುವುದಕ್ಕಿಂತ ಹೆಚ್ಚಿನದಾಗಿ ಕ್ರಮ ಸಂಖ್ಯೆಗಳನ್ನು ಮಾತ್ರ ಹೇಳಿ ಮತ ಯಾಚಿಸುತ್ತಿದ್ದರು.

ಮತಗಟ್ಟೆಗೆ ಹೊರಟಿರುವ ಮತದಾರರಿಗೆ ಕೈಮುಗಿದು ಅತ್ಯಂತ ಗೌರವದಿಂದ ಮತ ಹಾಕುವಂತೆ ಬೇಡಿಕೊಳ್ಳುತ್ತಿದ್ದರು. ಅಂಗವಿಕಲರು, ವೃದ್ಧರನ್ನು ಜೋಪಾನವಾಗಿ ಕೈ ಹಿಡಿದು ಮತಗಟ್ಟೆ ಕಡೆಗೆ ಕರೆದೊಯ್ಯುತ್ತಿದ್ದರು. ಆದರೆ, ಮತದಾನ ಮುಗಿಸಿ ವಾಪಸ್ ಬರುವಾಗ ಅವರ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ‘ಮತ ಹಾಕುತ ತನಕವಷ್ಟೇ ನಮಗೆ ಗೌರವ, ಆ ನಂತರ ನಮ್ಮನ್ನು ಯಾರು ಕೇಳ್ತಾರೆ ಸಾರ್’ ಎಂದು ಮಾರಪ್ಪನಪಾಳ್ಯದಲ್ಲಿ ರೇಣುಕಾ ಎಂಬುವರು ಹೇಳಿದರು.

ಇಡೀ ಕ್ಷೇತ್ರದಲ್ಲಿ ಮತಗಟ್ಟೆ ಬಳಿ ಇದ್ದ ಬಿಜೆಪಿ ಕಾರ್ಯಕರ್ತರು ಕೇಸರಿ ಬಣ್ಣದ ಶರ್ಟ್ ಧರಿಸಿ ಮತ ಯಾಚಿಸಿದರು. ಜೆಡಿಎಸ್ ಕಾರ್ಯಕರ್ತರು ಅಲ್ಲಲ್ಲಿ ಹಸಿರು ಮತ್ತು ಬಿಳಿ ಬಣ್ಣದ ಶಲ್ಯ ಧರಿಸಿದ್ದು ಕಂಡು ಬಂತು.

ಯಶವಂತಪುರ: ತುಮಕೂರು ರಸ್ತೆ ಬಳಿಯ ದೊಡ್ಡಬಿದರಕಲ್ಲು ಬಳಿಯಿಂದ ಮೈಸೂರು ರಸ್ತೆ ಪಕ್ಕದ ಹೆಮ್ಮೆಗೆಪುರದ ತನಕ ಇದರ ವ್ಯಾಪ್ತಿ ಇದೆ. ಈ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಮತದಾನ ಪ್ರಮಾಣ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಚುರುಕು ಪಡೆದುಕೊಂಡಿತು.

ನೆಲಗೆದರನಹಳ್ಳಿ, ಅಂದ್ರಹಳ್ಳಿ, ಹೇರೋಹಳ್ಳಿ ಮೂಲಕ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮತಗಟ್ಟೆಗಳಿದ್ದವು. ದೂಳಿನ ನಡುವೆಯೇ ರಸ್ತೆಯಲ್ಲಿ ಅಲ್ಲಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು ದಿನವಿಡೀ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು. ಕೆಲವೆಡೆ ರಸ್ತೆಗೆ ನೀರು ಹಾಕಿ ದೂಳನ್ನು ಅಡಗಿಸಲಾಗಿತ್ತು. ಈ ಕ್ಷೇತ್ರದಲ್ಲೂ ಅಭ್ಯರ್ಥಿಯ ಹೆಸರು ಹೇಳದೆ ಕ್ರಮ ಸಂಖ್ಯೆಗಳನ್ನೇ ಹೇಳಿ ಅಭ್ಯರ್ಥಿಗಳ ಬೆಂಬಲಿಗರು ಮತ ಯಾಚಿಸುತ್ತಿದ್ದರು.

***

ಮೊದಲು ಮತದಾನ ಮಾಡಿದ್ದು ಖುಷಿ ಇದೆ. ಗೆದ್ದವರು ಸರ್ಕಾರದ ಸವಲತ್ತುಗಳನ್ನು ತಮ್ಮ ಬೆಂಬಲಿಗರಿಗೆ ಮಾತ್ರವಲ್ಲ ಎಲ್ಲರಿಗೂ ತಲುಪುವಂತೆ ಮಾಡಬೇಕು

- ಎನ್.ಜೀವಿತಾ, ಮಹಾಲಕ್ಷ್ಮೀ ಲೇಔಟ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು