ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರು ಆತ್ಮಸಾಕ್ಷಿಯಿಂದ ಕಾರ್ಯನಿರ್ವಹಿಸಲಿ

ಮಾಧ್ಯಮ ಅಕಾಡೆಮಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಕಿವಿಮಾತು
Last Updated 11 ಫೆಬ್ರುವರಿ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಪತ್ರಕರ್ತರು ಯಾರನ್ನೋ ಮೆಚ್ಚಿಸಲು, ಸಮಾಧಾನಪಡಿಸಲು ಅಥವಾ ಹಳಿಯಲು ಕೆಲಸ ಮಾಡಬಾರದು. ಆತ್ಮಸಾಕ್ಷಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ‘ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕಗಳ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪತ್ರಿಕಾ ರಂಗದವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ನೈತಿಕ ಮೌಲ್ಯಗಳ ಪಾಲನೆ ಮಾಡಬೇಕು. ಏನೂ ಇಲ್ಲದೇ, ಡಂ, ಡಮಾ, ಡಮಾರ್‌ ಅಂತ ಬ್ರೇಕಿಂಗ್‌ ಹೊಡೆದು, ವ್ಯಕ್ತಿಯ ವ್ಯಕಿತ್ವ ಹೊಡೆಯುತ್ತೀರಾ. ಬರೀ, ನಕಾರಾತ್ಮಕ ವಿಷಯಗಳನ್ನೇ ತೋರಿಸಿದರೆ, ಯಾವ ವ್ಯಕ್ತಿ ಬೆಳೆಯುತ್ತಾನೆ, ಯಾವ ಸಮಾಜ ಉಳಿಯುತ್ತದೆ’ ಎಂದು ಪ್ರಶ್ನಿಸಿದರು.

‘ವ್ಯಕ್ತಿಯೊಬ್ಬ 30–40 ವರ್ಷಗಳ ತ್ಯಾಗ, ಪರಿಶ್ರಮದಿಂದ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಬೆಳೆಯುತ್ತಾನೆ. ನಿಮಿಷಾರ್ಧದಲ್ಲೇ ನೀವು ನಾಯಕನ ವ್ಯಕ್ತಿತ್ವವನ್ನು ಸಾಯಿಸಿಬಿಡುತ್ತೀರಾ’ ಎಂದು ಬೇಸರಿಸಿದರು.

‘ನನ್ನ ಮನೆ ಮೇಲೆ ಜಾರಿ ನಿರ್ದೇಶನಾಲಯದ ದಾಳಿಯಾದಾಗ, ನಾನು ಅನುಭವಿಸಿದ್ದೇನೆ. ನಾನೇನೋ ತಡೆದುಕೊಂಡೆ. ತಡೆದುಕೊಳ್ಳಲಾಗದವರು ಸತ್ತೇ ಹೋಗುತ್ತಾರಲ್ಲ? ಸುದ್ದಿ ಮಾಧ್ಯಮಗಳಿಂದಾಗಿಯೇ ನಮ್ಮ ನಾಯಕರಾದ ವಿಲಾಸ್‌ ರಾವ್‌ ದೇಶ್‌ಮುಖ್‌, ಶಿವರಾಜ ಪಾಟೀಲ ಅಧಿಕಾರವನ್ನೇ ಕಳೆದುಕೊಂಡರು’ ಎಂದು ಅಸಮಾಧಾನ ಹೊರಹಾಕಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ‘ಈಗ ಶಾಸಕರು ಖರೀದಿಯಾಗುತ್ತಾರೆ. ಈ ಪ್ರವೃತ್ತಿ ಮಾಧ್ಯಮಕ್ಕೂ ಅಂಟಿಕೊಂಡಿದೆ. ಹಾಗಾಗಿ ಮಾಧ್ಯಮಗಳಿಗೆ ಕಡಿವಾಣ ಹಾಕಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಹಸಿವಿನಿಂದ ಬಳಲುತ್ತ, ಸೇವೆ ಸಲ್ಲಿಸಿದ ಪ್ರಾಮಾಣಿಕ ಪತ್ರಕರ್ತರನ್ನು ಕಂಡಿದ್ದೇನೆ. ಬಹಳ ಬೇಗ ದೊಡ್ಡವರಾಗಬೇಕು ಎಂಬುವವರನ್ನು ನೋಡುತ್ತಿದ್ದೇನೆ. ಪತ್ರಿಕೆ, ಸುದ್ದಿವಾಹಿನಿಗಳನ್ನು ನಡೆಸುವ ಕಂಪನಿಗಳು ಲಾಭಾಂಶಕ್ಕೆ ಆದ್ಯತೆ ನೀಡುತ್ತಿವೆ. ಇದರಿಂದಾಗಿಯೇ ಮಾಧ್ಯಮ ಕಲುಷಿತವಾಗಿದೆ’ ಎಂದು ಹೇಳಿದರು.

ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT