ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ವರ್ಗದ ಕೈಗಾರಿಕೆ | 3 ತಿಂಗಳಲ್ಲಿ ಎನ್‌ಒಸಿ: ಸಚಿವ ಈಶ್ವರ ಖಂಡ್ರೆ

ವಸತಿ ಸಮುಚ್ಚಯಗಳಿಗೆ ದಂಡ: ₹ 200 ಕೋಟಿ ವಸೂಲಿ ಬಾಕಿ
Published 16 ಅಕ್ಟೋಬರ್ 2023, 16:05 IST
Last Updated 16 ಅಕ್ಟೋಬರ್ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕೆಗಳ ಆರಂಭಿಸಲು ನಿರಾಕ್ಷೇಪಣಾ ಪತ್ರಕ್ಕಾಗಿ (ಎನ್‌ಒಸಿ) 1,400ಕ್ಕೂ ಅರ್ಜಿಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಕೆಯಾಗಿದ್ದು ಅವುಗಳ ವಿಲೇವಾರಿಗೆ ಸಮಿತಿ ರಚಿಸಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

‘ನಿಯಮಾನುಸಾರ ಅರ್ಜಿಗಳ ವಿಲೇವಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಮಂಡಳಿಯ ಸದಸ್ಯ ಕಾರ್ಯದರ್ಶಿ, ಮುಖ್ಯ ಪರಿಸರ ಅಧಿಕಾರಿ ಹಾಗೂ ತಾಂತ್ರಿಕ ಪರಿಣತರ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲಾಗುವುದು. ಹಸಿರು ಪ್ರವರ್ಗದ ಕೈಗಾರಿಕಾ ಘಟಕಗಳ ಸ್ಥಾಪನೆಯ ಅರ್ಜಿಗಳನ್ನು 30 ದಿನ, ಆರೆಂಜ್ ಪ್ರವರ್ಗದ ಕೈಗಾರಿಕೆಗಳ ಅರ್ಜಿಗಳನ್ನು 45 ದಿನಗಳ ಒಳಗೆ ಹಾಗೂ ಕೆಂಪು ಪ್ರವರ್ಗದ ಕೈಗಾರಿಕೆಗಳ ಅರ್ಜಿಗಳ ವಿಲೇವಾರಿಯನ್ನು ಮೂರು ತಿಂಗಳ ಒಳಗಾಗಿ ವಿಲೇವಾರಿ ಮಾಡಲು ಗಡುವು ವಿಧಿಸಲಾಗಿದೆ. ನಿಯಮಾನುಸಾರ ಅರ್ಜಿಗಳಿದ್ದರೆ ಮಾತ್ರ ಕಾಲಮಿತಿಯಲ್ಲಿ ನಿರಾಕ್ಷೇಪಣಾ ಪತ್ರ ದೊರೆಯಲಿದೆ’ ಎಂದು ಹೇಳಿದರು.

‘ಬೆಂಗಳೂರಿನ ಬೆಳ್ಳಂದೂರು ಕೆರೆಯ ಸುತ್ತಮುತ್ತ ತ್ಯಾಜ್ಯದ ನೀರನ್ನು ಕೆರೆಗೆ ನೇರವಾಗಿ ಹರಿಸುತ್ತಿರುವ ಬೃಹತ್ ವಸತಿ ಸಮುಚ್ಚಯಗಳಿಂದ ಸುಮಾರು ₹ 200 ಕೋಟಿ ದಂಡ ವಸೂಲಿ ಮಾಡಿ, ತ್ಯಾಜ್ಯ ಜಲ ಸಂಸ್ಕರಣೆಗೆ ಘಟಕ(ಎಸ್.ಟಿ.ಪಿ.) ನಿರ್ಮಿಸಲು ಎನ್‌ಜಿಟಿ ಆದೇಶ ನೀಡಿದೆ. 2024ರ ಡಿಸೆಂಬರ್ ಒಳಗೆ ಈ ಎಸ್‌ಟಿಪಿ ಕಾರ್ಯ ಪೂರ್ಣಗೊಳಿಸಲು ಗಡುವು ನೀಡಲಾಗಿದೆ’ ಎಂದು ಹೇಳಿದರು.

‘ನಿಯಮ ಪಾಲಿಸದ ಹಾಗೂ ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರನ್ನು ಕೆರೆಗೆ ಹರಿಸುತ್ತಿದ್ದ 58 ಕಟ್ಟಡಗಳಿಗೆ ತಲಾ ₹ 3 ಕೋಟಿ ದಂಡ ವಿಧಿಸಲಾಗಿದೆ. ಉಳಿದಂತೆ 122 ಕಟ್ಟಡಗಳಿಗೆ ತಲಾ ₹ 3 ಲಕ್ಷದಂತೆ ದಂಡ ವಿಧಿಸಲಾಗಿದೆ. ಆದರೆ, ಈವರೆಗೆ ₹ 4 ಕೋಟಿ ಮಾತ್ರವೇ ಸಂಗ್ರಹವಾಗಿದೆ’ ಎಂದು ತಿಳಿಸಿದರು.‌

‘ಕಟ್ಟಡ ನಿರ್ಮಿಸಿದ ಬಿಲ್ಡರ್‌ಗಳು ಕೆಲವೆಡೆ ಮನೆಗಳನ್ನು ಮಾರಾಟ ಮಾಡಿದ್ದಾರೆ. ಆದರೆ, ಈಗ ಮನೆ ಖರೀದಿಸಿರುವ ಮಧ್ಯಮವರ್ಗದ ಜನರಿಂದ ದಂಡ ವಸೂಲಿ ಮಾಡುವುದು ಕಷ್ಟವಾಗಿದೆ. ಆದರೂ, ಕಾನೂನಿನ ಮಿತಿಯಲ್ಲಿ ದಂಡ ವಸೂಲಿ ಮಾಡಿ ಕಲುಷಿತಗೊಂಡಿರುವ ಕೆರೆಗಳ ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದರು.

ತಗ್ಗಿದ ಪಿಒಪಿ ಗಣೇಶ ಮೂರ್ತಿಗಳ 

ಈ ವರ್ಷದ ಗಣೇಶ ಹಬ್ಬದ ವೇಳೆ ಶೇ 75ರಷ್ಟು ಪಿಒಪಿ ಮೂರ್ತಿ ವಿಸರ್ಜನೆ ಕಡಿಮೆಯಾಗಿದೆ. ಮುನ್ನೆಚ್ಚರಿಕೆ ವಹಿಸಿದ್ದರ ಪರಿಣಾಮ ಪಿಒಪಿ ಬಳಕೆ ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು. ಉಡುಪಿ ಮಂಗಳೂರು ಕಾರವಾರದಲ್ಲಿ ಈ ವರ್ಷ ಪಿಒ‍ಪಿ ಮೂರ್ತಿಗಳ ಬಳಕೆಯನ್ನೇ ಮಾಡಿರಲಿಲ್ಲ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪಿಒಪಿ ಮೂರ್ತಿ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಅರ್ಜಿಗಳ ವಿಲೇವಾರಿಯನ್ನು ಅನಗತ್ಯವಾಗಿ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು.
–ಈಶ್ವರ ಬಿ. ಖಂಡ್ರೆ ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT