ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌‌ ನಿಲ್ದಾಣದ ಲಾಂಛನದಲ್ಲಿ ಮೂಡಿದ ಕನ್ನಡ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರದಿಂದ ಎಚ್ಚೆತ್ತುಕೊಂಡ ಕೆಐಎಎಲ್‌
Published 18 ಡಿಸೆಂಬರ್ 2023, 14:47 IST
Last Updated 18 ಡಿಸೆಂಬರ್ 2023, 14:47 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ನಿಲ್ದಾಣದ ಲಾಂಛನದಲ್ಲಿ ಕನ್ನಡವನ್ನು ಬಳಸಲಾರಂಭಿಸಿದ್ದಾರೆ.

ಈ ಮೊದಲು ಲಾಂಛನದಲ್ಲಿ ಇಂಗ್ಲಿಷ್‌ ಸಾಲುಗಳಿದ್ದವು. ಇದನ್ನು ಆಕ್ಷೇಪಿಸಿ ಲಾಂಛನದಲ್ಲಿ ಕನ್ನಡವನ್ನು ಬಳಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿತ್ತು. ಆ ಸೂಚನೆ ಬೆನ್ನಲ್ಲೇ ‌ಎಚ್ಚೆತ್ತುಕೊಂಡ ನಿಲ್ದಾಣದ‌ ಅಧಿಕಾರಿಗಳು, ಲಾಂಛನದಲ್ಲಿ ಕನ್ನಡವನ್ನು ಬಳಸಿದ್ದಾರೆ.

ಲಾಂಛನದಲ್ಲಿ ಇಂಗ್ಲಿಷ್‌ ಬಳಸಿರುವ ವಿಷಯ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ವಿಮಾನ‌‌ ನಿಲ್ದಾಣದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಪ್ರಾಧಿಕಾರಕ್ಕೆ ಸೂಚಿಸಿದ್ದರು. ಪ್ರಾಧಿಕಾರದ‌ ಕಾರ್ಯದರ್ಶಿ ಸಂತೋಷ್ ಹಾನಗಲ್ ಅವರು ವಿಮಾನ ನಿಲ್ದಾಣದ‌ ವ್ಯವಸ್ಥಾಪಕ‌ ನಿರ್ದೇಶಕರಿಗೆ ಪತ್ರ ಬರೆದು, ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಂಸ್ಥೆಗಳು ಇಲ್ಲಿನ ಭಾಷಾ ಸಂಸ್ಕೃತಿ ಗೌರವಿಸುವುದು ಪ್ರಾಥಮಿಕ ಜವಾಬ್ದಾರಿ.‌ ಕೂಡಲೇ ನಿಲ್ದಾಣದ ಲಾಂಛನದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದರು.

ಪ್ರಾಧಿಕಾರದ ಪತ್ರದಿಂದ ಎಚ್ಚೆತ್ತುಕೊಂಡ ವಿಮಾನ‌ ನಿಲ್ದಾಣದ ‌ಅಧಿಕಾರಿಗಳು ತಮ್ಮ ಲಾಂಛನದಲ್ಲಿ ಕನ್ನಡ ಭಾಷೆಯನ್ನು ಬಳಸಿದ್ದಾರೆ.‌ ಈ ಬಗ್ಗೆ ಪ್ರಾಧಿಕಾರಕ್ಕೆ‌‌ ಪತ್ರ ಬರೆದಿರುವ ನಿಲ್ದಾಣದ ಅಧಿಕಾರಿ ದಿನೇಶ್ ಕುಮಾರ್, ’ಕನ್ನಡ ಭಾಷೆ‌ ಬೆಳವಣಿಗೆ, ಇಲ್ಲಿನ ಸಂಸ್ಕೃತಿ ಉಳಿವಿಗೆ ನಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆ ಕೆಲಸ‌ ಮಾಡಲಿದ್ದೇವೆ. ಮುಂದಿನ‌ ನಮ್ಮ ಯಾವುದೇ ಕಾರ್ಯಕ್ರಮ ‌ಹಾಗೂ ಪತ್ರ‌‌ ವ್ಯವಹಾರದಲ್ಲಿ‌‌ ಹೆಚ್ಚಾಗಿ ಕನ್ನಡ‌ ಭಾಷೆಯನ್ನೇ ಬಳಸಲಾಗುವುದು. ಅಲ್ಲದೆ, ನಿಲ್ದಾಣದ ಪ್ರತಿ ಸೂಚನಾ ಫಲಕಗಳನ್ನು ಕನ್ನಡದಲ್ಲಿ‌ ಬರೆಸಲಾಗುವುದು, ಸಾಮಾಜಿಕ‌ ಜಾಲತಾಣದಲ್ಲಿಯೂ ಕನ್ನಡವನ್ನು ಬಳಕೆ ಮಾಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

’ಕರ್ನಾಟಕದಲ್ಲಿ‌ ಕನ್ನಡವೇ ಸಾರ್ವಭೌಮ ಭಾಷೆ.‌ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಸರ್ಕಾರ ನೆಲ, ಜಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಸ್ಥಳೀಯ ಭಾಷೆ ಬೆಳವಣಿಗೆಯ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ವಿಮಾನ ನಿಲ್ದಾಣದಲ್ಲಿ ಕನ್ನಡ ಬಳಕೆ ಮಾಡಿದ ನಿಲ್ದಾಣದ ಅಧಿಕಾರಿಗಳ ನಡೆ ಎಲ್ಲರಿಗೂ ಮಾದರಿಯಾಗಬೇಕು’
––ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT