ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು: ರಾ.ನಂ.ಚಂದ್ರಶೇಖರ

ಗಣಕಯಂತ್ರದಲ್ಲಿ ಕನ್ನಡ ತಂತ್ರಾಂಶ ಕಲಿಕಾ ತರಗತಿ ಉದ್ಘಾಟನೆ
Published 19 ಏಪ್ರಿಲ್ 2024, 15:59 IST
Last Updated 19 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಅನ್ನದ ಭಾಷೆಯಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿ ಎಲ್ಲ ಕ್ಷೇತ್ರಗಳ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು’ ಎಂದು ಕನ್ನಡ ಪರ ಚಿಂತಕ ರಾ.ನಂ.ಚಂದ್ರಶೇಖರ ತಿಳಿಸಿದರು. 

ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ ನಗರದಲ್ಲಿ ಹಮ್ಮಿಕೊಂಡ ಗಣಕಯಂತ್ರದಲ್ಲಿ ಕನ್ನಡ ತಂತ್ರಾಂಶ ಕಲಿಕಾ ತರಗತಿ ಉದ್ಘಾಟನೆ ಹಾಗೂ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಕಂಪ್ಯೂಟರ್ ಸಾಕ್ಷರತೆ ಇಂದಿನ ಅಗತ್ಯವಾಗಿದೆ. ಜಗತ್ತಿನ ಪ್ರಚಲಿತ ವಿದ್ಯಮಾನ ತಿಳಿಯಲು ಗಣಕಯಂತ್ರದ ಬಳಕೆಯ ಅರಿವು ಅನಿವಾರ್ಯವಾಗಿದೆ. ಕನ್ನಡ ಪ್ರಸ್ತುತವಾಗಬೇಕಾದರೆ ಗಣಕಯಂತ್ರದಲ್ಲಿ ಕನ್ನಡ ಬಳಕೆ ವ್ಯಾಪಕವಾಗಬೇಕು. ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಆದರೆ, ಇದರಿಂದ ಮಾತ್ರ ಕನ್ನಡ ಅನ್ನದ ಭಾಷೆಯಾಗುವುದಿಲ್ಲ. ಕನ್ನಡದಲ್ಲಿ ಇಂದಿನ ಅಗತ್ಯವಾದ ವಿಜ್ಞಾನ-ತಂತ್ರಜ್ಞಾನದ ಜ್ಞಾನವೂ ಸೇರಿದಂತೆ ಎಲ್ಲ ವಿಷಯಗಳು ಸಿಗುವಂತಾಗಬೇಕು’ ಎಂದು ಹೇಳಿದರು.

ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ, ‘ತಂತ್ರಜ್ಞಾನವನ್ನು ಭಾಷೆಯೊಡನೆ ಸಂವಹಿಸದಾಗ ಆ ಭಾಷೆಯು ಹೆಚ್ಚು ಪ್ರಸ್ತುತವಾಗುತ್ತದೆ. ಗಣಕಯಂತ್ರದ ನೆರವಿನಿಂದ ಕನ್ನಡ ಕಲಿತರೆ ನಮ್ಮ ಜ್ಞಾನ ವೃದ್ಧಿಯಾಗುವ ಜತೆಗೆ ನಮ್ಮ ಆತ್ಮವಿಶ್ವಾಸವು ಹೆಚ್ಚಿ, ಸ್ವಾಭಿಮಾನವೂ ಜಾಗೃತವಾಗುತ್ತದೆ’ ಎಂದು ತಿಳಿಸಿದರು.

ಎಚ್.ಎ.ಎಲ್. ಕಾರ್ಮಿಕ ಸಂಘದ ಅಧ್ಯಕ್ಷ ಮಹೇಶ್ ಅಂಗಡಿ, ‘ಕನ್ನಡ ಕೆಲಸಗಳಿಗೆ ಕಾರ್ಮಿಕ ಸಂಘದ ಬೆಂಬಲ ಇರಲಿದೆ. ಆಡಳಿತ ವರ್ಗವು ಕನ್ನಡ ಸಂಘಟನೆಗಳ ಕೆಲಸಗಳಿಗೆ ತಾಯಿ ಸ್ಥಾನದಲ್ಲಿ ನಿಂತು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

‘ಕನಾಟಕದ ವೀರ ವನಿತೆಯರು’ ಎಂಬ ವಿಷಯದ ಬಗ್ಗೆ ಕರ್ನಾಟಕ ಇತಿಹಾಸ ಅಕಾಡೆಮಿ ಕಾರ್ಯದರ್ಶಿ ಸಂಧ್ಯಾ ವಿ. ಉಪನ್ಯಾಸ ನೀಡಿದರು. ಎಚ್‌.ಎ.ಎಲ್.ವಿನ್ಯಾಸ ಸಂಕೀರ್ಣದ ಮಾನವ ಸಂಪನ್ಮೂಲ ವಿಭಾಗದ ಮಹಾವ್ಯವಸ್ಥಾಪಕ ಎಂ.ಜಿ. ಬಾಲಸುಬ್ರಮಣ್ಯ ‘ಗಣಕದಲ್ಲಿ ಕನ್ನಡ ತಂತ್ರಾಂಶ ಕಲಿಕಾ ತರಗತಿ’ ಉದ್ಘಾಟಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT