ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಧಾಮದಲ್ಲಿ ಹಸಿರ ಸಿರಿ

ಚಿಂಚೋಳಿ: ಕುಂಚಾವರಂ, ಶಾದಿಪುರದಲ್ಲಿ ಜೀವಕಳೆ
Last Updated 21 ಏಪ್ರಿಲ್ 2018, 9:12 IST
ಅಕ್ಷರ ಗಾತ್ರ

ಚಿಂಚೋಳಿ: ಒಣಭೂಮಿಯ ವನ್ಯಜೀವಿ ಧಾಮ ಖ್ಯಾತಿಯ ಚಿಂಚೋಳಿ ವನ್ಯಜೀವಿ ಧಾಮ ನವ ತಾರುಣ್ಯದತ್ತ ಹೆಜ್ಜೆ ಇಡುತ್ತಿದೆ. ಒಣ ಎಲೆಗಳನ್ನು ಉದುರಿಸಿಕೊಂಡು ಬರಡು ಬರಡಾಗಿದ್ದ ಕಾಡಿನಲ್ಲಿ ಹಸಿರು ಚಿಗುರುವ ಮೂಲಕ ಇಡಿ ಕಾಡು ಚೈತ್ರದ ಸೊಬಗಿನಿಂದ ಕಂಗೊಳಿಸುವಂತಾಗಿದೆ.

ಏಪ್ರಿಲ್‌ ಎರಡನೇ ವಾರದಲ್ಲಿ ಸುರಿದ ಮಳೆಯಿಂದ ಕಾಡಿನ ಮರಗಳು ಚಿಗುರೊಡೆದು ಬಿರು ಬಿಸಿಲಿನ ನಡುವೆಯೂ ಹಸಿರಿನ ತಾಣವಾಗಿ ಮೈದುಂಬಿಕೊಳ್ಳುತ್ತಿದೆ. ನೆಲದ ಹಸಿರು ವಾಯವಾಗಿ, ನಾಲಾ ತೊರೆಗಳು ಬತ್ತಿ ಹಣ್ಣೆಲೆಗಳು ಉದುರಿದ್ದರಿಂದ ಕಳಾಹೀನಗೊಂಡಿದ್ದ ಕಾಡು ಚೈತ್ರಮಾಸದ ಹವಾಮಾನದಿಂದ ನವ ಲೋಕ ಸೃಷ್ಟಿಸುತ್ತಿದೆ.

ಈಗಾಗಲೇ ಕೆಲವು ಮರಗಳು ಹಸಿರು ಸೂಸಿದರೆ, ದಿಂಡಿಲು, ಮತ್ತು ತೇಗದ ಮರಗಳು ಚಿಗುರೊಡೆದು ಆಕರ್ಷಿಸುತ್ತಿವೆ. ಈಚೆಗೆ ಸುರಿದ ಮಳೆಯಿಂದ ನೆಲವೇನೂ ಹಸಿರಾಗಿಲ್ಲ. ಋತುಮಾನದ ಬದಲಾವಣೆ (ಚೈತ್ರ ಮಾಸದ)ಗೆ ಸ್ಪಂದಿಸಿದ ಮರಗಳು ಜೀವಕಳೆ ಪಡೆದಿವೆ. ಇದರಿಂದ ಇಲ್ಲಿನ ವಾಸಿಗಳಿಗೆ ತಂಗಾಳಿಯೂ ಲಭಿಸುತ್ತಿದೆ.

13,800 ಹೆಕ್ಟೇರ್‌ ವಿಸ್ತಾರದ ವನ್ಯಜೀವಿ ಧಾಮ ತನ್ನ ಅಂದ ಹೆಚ್ಚಿಸಿಕೊಳ್ಳುತ್ತಿದೆ.ಕುಂಚಾವರಂ, ಶಾದಿಪುರ, ಧರ್ಮಾಸಾಗರ, ಗೊಟ್ಟಮಗೊಟ್ಟ, ಚಂದ್ರಂಪಳ್ಳಿ, ಸೋಮಲಿಂಗದಳ್ಳಿ, ಶಿವರೆಡ್ಡಿಪಳ್ಳಿ ಸುತ್ತಲಿನ ಕಾಡು ಚಿಗುರೊಡೆದಿದ್ದರಿಂದ ವನ್ಯಜೀವಿಗಳಿಗೂ ಆಹಾರ ದೊರೆಯುವಂತಾಗಿದೆ. ಜತೆಗೆ ಬಿಸಿಲಿನಿಂದ ಬಸವಳಿಯುವ ವನ್ಯಜೀವಿಗಳಿಗೂ ನೆರಳು ಲಭಿಸುವಂತಾಗಿದೆ.

ಚಿಂಚೋಳಿಯಲ್ಲಿ ಗುರುವಾರ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮುಂದಿನ ತಿಂಗಳು ಇದೇ ಪ್ರಮಾಣದ ಬಿಸಿಲು ಮುಂದುವರಿದರೆ ವನ್ಯಜೀವಿಗಳು ಕುಡಿವ ನೀರಿಗಾಗಿ ಪರದಾಡುವ ಸಾಧ್ಯತೆಯಿದೆ. ಆದರೂ ಚಂದ್ರಂಪಳ್ಳಿ ಜಲಾಶಯ, ಚಿಕ್ಕಲಿಂಗದಳ್ಳಿ, ಧರ್ಮಾಸಾಗರ ಕೆರೆ ಹಾಗೂ ಕೊತ್ವಾಲ ನಾಲಾ ಮತ್ತು ಚೆಕ್‌ ಡ್ಯಾಂಗಳಲ್ಲಿ ನೀರು ಲಭ್ಯವಿರುವುದರಿಂದ ಬರಗಾಲದಲ್ಲಿ ಉಂಟಾದ ನೀರಿನ ಅಭಾವ ಈ ಬಾರಿ ಮರುಕಳಿಸುವ ಸಾಧ್ಯತೆ ಕಡಿಮೆಯಿದೆ.

‘ಕಲಬುರ್ಗಿ ಜಿಲ್ಲೆಯ ಬಿರು ಬಿಸಿಲಿನ ನಾಡಿನಲ್ಲಿರುವ ಚಿಂಚೋಳಿಯ ಕಾಡು ಹಸಿರುಡುಗೆಯ ಮೂಲಕ ಜನರಿಗೆ ನೆಮ್ಮದಿ ತಾಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾದರೆ ಕಾಡು ಮೇ ಅತ್ಯಂಕ್ಕೆ ದಟ್ಟ ಹಸಿರು ಪಡೆಯಲಿದೆ’ ಎನ್ನುತ್ತಾರೆ ಪ್ರವಾಸಿಗರು.

–ಜಗನ್ನಾಥ ಡಿ. ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT