ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆ ನೀಗಿಸಲು ಖಾಸಗಿ ವಲಯದ ವಿದ್ಯುತ್ ಖರೀದಿ: ಕೆ.ಜೆ.ಜಾರ್ಜ್‌

Published 16 ಅಕ್ಟೋಬರ್ 2023, 20:19 IST
Last Updated 16 ಅಕ್ಟೋಬರ್ 2023, 20:19 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವಲಯದಿಂದ ಖರೀದಿಸುವ ಮೂಲಕ ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.

ಸೋಮವಾರ ಎಲ್ಲ ಎಸ್ಕಾಂಗಳ ಪ್ರಗತಿಪರಿಶೀಲನಾ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸದ್ಯ ರಾಜ್ಯದಲ್ಲಿ 1500 ಮೆಗಾವಾಟ್ ವಿದ್ಯುತ್ ಕೊರತೆ ಇದೆ. ವಿಜಯಪುರದ ಕೂಡಗಿ ವಿದ್ಯುತ್ ಸ್ಥಾವರದಿಂದ 150-200 ಮೆ.ವಾ. ಸಿಗಲಿದೆ. ಕೇಂದ್ರ ವಿದ್ಯುತ್ ಜಾಲದಿಂದ ನೆರವು ಕೇಳಿದ್ದೇವೆ. ಈ ಕುರಿತು ಕೇಂದ್ರ ಇಂಧನ ಸಚಿವರ ಜತೆಗೂ ಮಾತುಕತೆ ನಡೆಸಿದ್ದು, ನೆರವಿನ ಭರವಸೆ ನೀಡಿದ್ದಾರೆ. ಈ ಕ್ರಮಗಳ ಮೂಲಕ ರಾಜ್ಯದ ವಿದ್ಯುತ್‌ ಕೊರತೆಯನ್ನು ನೀಗಿಸುತ್ತೇವೆ’ ಎಂದು ವಿವರಿಸಿದರು.

‘ವಿದ್ಯುತ್ ಕೊರತೆಯಿದ್ದರೂ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಪಾಳಿ ಆಧಾರದಲ್ಲಿ 5 ಗಂಟೆ ವಿದ್ಯುತ್ ಪೂರೈಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದ ಅವರು, ‘ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಅವಧಿಯಲ್ಲಿ ಪಾಳಿ ಅನುಸಾರ ಕೃಷಿ ಪಂಪ್‌ಸೆಟ್‌ಗಳಿಗೆ ಐದು ಗಂಟೆ ವಿದ್ಯುತ್ ಪೂರೈಸಲಾಗುತ್ತದೆ. ರಾತ್ರಿ ಪಾಳಿಯಲ್ಲಿ ಐದು ಗಂಟೆ ವಿದ್ಯುತ್ ಪಡೆಯುವ ರೈತರಿಗೆ ಮುಂದಿನ ಮೂರು ವಾರಗಳ ನಂತರ ಹಗಲಿನಲ್ಲಿ ಪೂರೈಕೆ ಆಗಲಿದೆ. ಅದೇ ರೀತಿ, ಹಗಲಿನಲ್ಲಿ ಪಡೆಯುತ್ತಿದ್ದವರಿಗೆ ರಾತ್ರಿ ಸಿಗಲಿದೆ’ ಎಂದು ವಿವರಿಸಿದರು. ‘ಪೂರೈಕೆಯ ಅವಧಿಗಳನ್ನು ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಪ್ರಕಟಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ವರ್ಷದ ಏಪ್ರಿಲ್‌ 23ರಿಂದ ಅಕ್ಟೋಬರ್‌ 15 ಅವಧಿಯಲ್ಲಿ ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿ ನಿಭಾಯಿಸಲು ₹1,102 ಕೋಟಿ ವೆಚ್ಚದಲ್ಲಿ 1,627 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಲಾಗಿದೆ‌. ಇದೇ ಅವಧಿಯಲ್ಲಿ ‘ವಿದ್ಯುತ್ ವಿನಿಮಯ’ದ ಅಡಿ ನಮ್ಮ ರಾಜ್ಯದಿಂದ 636 ದಶಲಕ್ಷ ಯೂನಿಟ್ ವಿದ್ಯುತ್ ಮಾರಾಟ ಮಾಡಲಾಗಿದೆ. ಇದರಿಂದ ₹265 ಕೋಟಿ ಆದಾಯ ಬಂದಿದೆ‌‘ ಎಂದು ಅವರು ಅಂಕಿ ಅಂಶ ನೀಡಿದರು.

‘ಮಳೆ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿಲ್ಲ. ಜಲವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಮಳೆಯ ಕೊರತೆ ಕಾಣ ಪವನ ವಿದ್ಯುತ್‌ ಉತ್ಪಾದನೆಯೂ ಕಡಿಮೆಯಾಯಿತು. ಮೋಡ ಕವಿದ ವಾತಾವರಣದಿಂದಾಗಿ ಸೌರವಿದ್ಯುತ್ ಉತ್ಪಾದ ನೆಯೂ ಕುಸಿಯಿತು. ಈ ಸಮಸ್ಯೆಗಳ ನಡುವೆಯೂ ಬೇರೆ ಕಡೆಯಿಂದ ವಿದ್ಯುತ್ ಖರೀದಿಸಿ, ನಿರ್ವಹಣೆ ಮಾಡಿದ್ದೇವೆ ’ ಎಂದು ವಿವರಿಸಿದರು.

ತಿಂಗಳಿಗೆ 2 ಲಕ್ಷ ಟನ್ ಹೆಚ್ಚುವರಿ ಕಲ್ಲಿದ್ದಲಿಗೆ ಬೇಡಿಕೆ: ‘ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ತಿಂಗಳಿಗೆ 15 ಲಕ್ಷ ಟನ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಹೆಚ್ಚುವರಿಯಾಗಿ 2 ಲಕ್ಷ ಲಕ್ಷ ಟನ್ ಪೂರೈಸಲು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದೇವೆ’ ಎಂದು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದರು.

ಪೂರೈಕೆಯಾಗುತ್ತಿರುವ ಎಲ್ಲ ಕಲ್ಲಿದ್ದಲನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದೆ. 2024ರ ಜೂನ್‌ವರೆಗೆ ಪ್ರತಿ ತಿಂಗಳು ಇನ್ನೂ 2 ಲಕ್ಷ ಟನ್ ಹೆಚ್ಚುವರಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪೂರಕ ಸ್ಪಂದನೆ ದೊರಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT