ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂದಾಖಲೆ ನಾಪತ್ತೆ: ಒತ್ತುವರಿ ತೆರವಿಗೆ ಅಡ್ಡಿ?

ಮಾದಾವರ ಕೆರೆ ಜಾಗ ಕಬಳಿಕೆ ಪ್ರಕರಣ
Last Updated 13 ಜುಲೈ 2018, 19:00 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ರಸ್ತೆ ಬಳಿಯ ಮಾದಾವರ ಕೆರೆ ಒತ್ತುವರಿಗೆ ಸಂಬಂಧಿಸಿದ ಎರಡು ಪ್ರಕರಣಗಳ ಭೂಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆಗಳು ನಾಪತ್ತೆಯಾಗಿವೆ. ಇದು ತೆರವು ಕಾರ್ಯಾಚರಣೆಯನ್ನು ಕಗ್ಗಂಟಾಗಿಸಿದೆ.

ನಗರದ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಬಳಿಕ ಭೂಸರ್ವೇಕ್ಷಣೆ ಮತ್ತು ಭೂದಾಖಲೆಗಳ ಇಲಾಖೆ ಜಂಟಿ ಸರ್ವೆ ನಡೆಸಿದಾಗ, ಈ ಪರಿಸರದಲ್ಲಿ 12 ಎಕರೆ 5 ಗುಂಟೆ ಜಾಗ ಒತ್ತುವರಿ ಆಗಿರುವುದು ಕಂಡು ಬಂದಿತ್ತು. ಈ ಜಾಗ ಜಿಂದಾಲ್‌ ನೇಚರ್‌ಕ್ಯೂರ್‌, ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಸಂಸ್ಥೆ, ಕೃಷ್ಣಮೂರ್ತಿ ಅವರ ಅಧೀನದಲ್ಲಿರುವುದು ಪತ್ತೆಯಾಗಿತ್ತು. ಈ ಪೈಕಿ ಜಿಂದಾಲ್‌ ಸಂಸ್ಥೆ ಹಾಗೂ ಕೃಷ್ಣಮೂರ್ತಿ ಅವರು, ‘ಸರ್ಕಾರದಿಂದಲೇ ತಮಗೆ ಜಾಗ ಮಂಜೂರಾಗಿದೆ’ ಎಂದು ವಾದಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ಮೂಲ ದಾಖಲೆಗಳು ಸಿಗುತ್ತಿಲ್ಲ ಎಂದು ಸರ್ವೆಯ ವರದಿ ತಿಳಿಸಿದೆ.

ಭೂದಾಖಲೆ ಇಲಾಖೆ ಜಂಟಿ ನಿರ್ದೇಶಕರು ಭೂಮಂಜೂರಾತಿಗೆ ಸಂಬಂಧಿಸಿದಂತೆ ಸ್ಥಳೀಯ ತಹಶೀಲ್ದಾರ್‌ ಅವರಿಂದ ವರದಿ ತರಿಸಿಕೊಂಡಿದ್ದಾರೆ. ಈ ವರದಿಯ ಪ್ರಕಾರ, ಚಿಕ್ಕಬಿದಿರಕಲ್ಲಿನಲ್ಲಿ ಸರ್ವೆ ನಂಬರ್‌ 21/1ರಲ್ಲಿ 24 ಎಕರೆ 4 ಗುಂಟೆ ಜಾಗವಿದೆ. ಇದರಲ್ಲಿ 3 ಎಕರೆ 24 ಗುಂಟೆ ಜಾಗವನ್ನು 1984ರ ಜುಲೈ 25ರಂದು ಜಿಂದಾಲ್‌ ಟ್ರಸ್ಟ್‌ಗೆ ಮಂಜೂರು ಮಾಡಲಾಗಿದೆ. ಬಳಿಕ 71 ಸರ್ವೆ ನಂಬರ್‌ ಅನ್ನು ಸೃಜಿಸಲಾಗಿದೆ. ಆದರೆ, ಭೂಮಿ ಮಂಜೂರಾತಿಗೆ ಸಂಬಂಧಿಸಿದ ಮೂಲ ದಾಖಲೆಗಳು ಕಾಣಿಸುತ್ತಿಲ್ಲ ಎಂದು ತಹಶೀಲ್ದಾರ್‌ ಅವರ ವರದಿಯಲ್ಲಿ ತಿಳಿಸಿದ್ದಾರೆ.

ಜಂಟಿ ಸರ್ವೆಯ ವರದಿ ಪ್ರಕಾರ ಜಿಂದಾಲ್‌ ಸಂಸ್ಥೆಯು ಇಲ್ಲಿ ರಸ್ತೆ, ಉದ್ಯಾನ, ಪೋರ್ಟಿಕೊ ಹಾಗೂ ಕಟ್ಟಡಗಳನ್ನು ನಿರ್ಮಿಸಿದೆ. ಫೂಟ್‌ ಖರಾಬ್‌ ಜಮೀನನ್ನೂ ಸಂಸ್ಥೆ ಒತ್ತುವರಿ ಮಾಡಿದೆ. ಸರ್ವೆ ನಂಬರ್‌ 7/3ರಲ್ಲಿ 13 ಗುಂಟೆ ಹಾಗೂ ಸರ್ವೆ ನಂಬರ್‌ 7/1 ಮತ್ತು 7/2ರಲ್ಲಿ ತಲಾ 3 ಗುಂಟೆ ಜಮೀನುಗಳು ಈ ರೀತಿ ಒತ್ತುವರಿಯಾಗಿವೆ ಎಂಬ ಅಂಶವೂ ವರದಿಯಲ್ಲಿದೆ.

‘ತಿರುಮಲಾಪುರ ಗ್ರಾಮದ ಸರ್ವೆ ನಂಬರ್‌ 32ರಲ್ಲಿನ 8 ಎಕರೆ 36 ಗುಂಟೆ ಜಮೀನಿನಲ್ಲಿ 4 ಎಕರೆ 12 ಗುಂಟೆ ಜಾಗವು 1970ರ ಇನಾಮು ರದ್ದತಿ ಆದೇಶದ ಪ್ರಕಾರ ನಮಗೆ ಮಂಜೂರಾಗಿದೆ’ ಎಂಬುದು ಕೃಷ್ಣಮೂರ್ತಿ ಅವರ ವಾದ. ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಲಭ್ಯವಾಗಿಲ್ಲ. ಜಂಟಿ ಸರ್ವೆ ವರದಿಯ ಪ್ರಕಾರ 4 ಎಕರೆ 12 ಗುಂಟೆ ಜಾಗವೂ ಒತ್ತುವರಿಯಾಗಿದೆ. ಇದರಲ್ಲಿ ಒಂದಷ್ಟು ಜಾಗ ಕೃಷಿಗೆ ಬಳಕೆಯಾಗುತ್ತಿದ್ದರೆ, ಉಳಿದ ಜಾಗದಲ್ಲಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಒತ್ತುವರಿ ಉಲ್ಲೇಖವೇ ಇಲ್ಲ: ಜಿಂದಾಲ್

ಇಲ್ಲಿ 2012ರಲ್ಲಿ ಬಿಡಿಎ ಕಂದಾಯ ಅಧಿಕಾರಿಗಳೂ ಸರ್ವೆ ನಡೆಸಿದ್ದರು. ಬಳಿಕ 2014ರಲ್ಲಿ ಕೋಳಿವಾಡ ಸಮಿತಿ ನಿರ್ದೇಶನದ ಮೇರೆಗೆ ಹಾಗೂ 2015ರಲ್ಲಿ ಬಿಎಂಟಿಎಫ್‌ ಸೂಚನೆ ಮೇರೆಗೆ ಸರ್ವೆ ನಡೆದಿತ್ತು. ಈ ಯಾವ ಸರ್ವೆಗಳಲ್ಲೂ ಜಾಗ ಒತ್ತುವರಿಯ ಬಗ್ಗೆ ಉಲ್ಲೇಖಗಳಿಲ್ಲ ಎಂದು ಜಿಂದಾಲ್‌ ಸಂಸ್ಥೆ ಪ್ರತಿಕ್ರಿಯಿಸಿದೆ.

‘ಕೆರೆ ಒತ್ತುವರಿಗೆ ಸಂಬಂಧಿಸಿ ಆಧಾರರಹಿತ ಆರೋಪ ಮಾಡುವ ಮೂಲಕ ಸಂಸ್ಥೆಗೆ ಕೆಟ್ಟ ಹೆಸರು ತರುತ್ತೇವೆ ಎಂದು ಕೆಲವು ಸ್ಥಳೀಯ ಗೂಂಡಾಗಳು ಆಗಾಗ ಬೆದರಿಕೆ ಹಾಕುತ್ತಿದ್ದರು. ಈಗ ಬಂದಿರುವ ಆರೋಪವು ಪೂರ್ವದ್ವೇಷದಿಂದ ಕೂಡಿದೆ’ ಎಂದು ಸಂಸ್ಥೆಯ ಕಾನೂನು ವಿಭಾಗದ ಮುಖ್ಯಸ್ಥ ಎಚ್.ಎಸ್‌.ಹಯಾತ್‌ ಖಾನ್‌ ಹೇಳಿದ್ದಾರೆ.

ಯಾವ ಗ್ರಾಮದಲ್ಲಿ ಎಷ್ಟು ಒತ್ತುವರಿ?

ಮಾದಾವರ ಗ್ರಾಮ

* ನೈಸ್‌ ರಸ್ತೆಗೆ; 34 ಗುಂಟೆ

* ಆಶ್ರಯ ಯೋಜನೆಗೆ; 25 ಗುಂಟೆ

* ಕೃಷಿಗೆ; 12 ಗುಂಟೆ

* ಬಿಡಿಎ ರಸ್ತೆಗೆ; 22 ಗುಂಟೆ

ಚಿಕ್ಕಬಿದಿರಕಲ್ಲು ಗ್ರಾಮ

*ಜಿಂದಾಲ್‌ ಸಂಸ್ಥೆ; 4 ಎಕರೆ( ಸರ್ವೆ ನಂಬರ್‌ 71ರಲ್ಲಿ)

* ಸರ್ವೆ ನಂಬರ್‌ 23/3 ಮತ್ತು 23/1ರಲ್ಲಿರುವ ಜಾಗ; 28 ಗುಂಟೆ

* ಜಿಂದಾಲ್‌ ಒತ್ತುವರಿ ಮಾಡಿಕೊಂಡ ಫೂಟ್‌ ಖರಾಬ್‌ ಜಾಗ; 13 ಗುಂಟೆ (ಸರ್ವೆ ನಂಬರ್‌ 7/3ರಲ್ಲಿ)

* ಜಿಂದಾಲ್‌ ಒತ್ತುವರಿ ಮಾಡಿಕೊಂಡ ಫೂಟ್‌ ಖರಾಬ್‌ ಜಾಗ; ತಲಾ 3 ಗುಂಟೆ (ಸರ್ವೆ ನಂಬರ್‌ 7/1 ಹಾಗೂ 7/2ರಲ್ಲಿ)

ತಿರುಮಲಾಪುರ ಗ್ರಾಮ

* ಕೃಷ್ಣಮೂರ್ತಿ ಅವರಿಗೆ ಮಂಜೂರಾದ ಭೂಮಿ 4 ಎಕರೆ 12 ಗುಂಟೆ (ಸರ್ವೆ ನಂಬರ್‌ 32)

* ಕೃಷಿ ಮತ್ತು ರಸ್ತೆಗೆ; 6 ಗುಂಟೆ

ದೊಡ್ಡಬಿದಿರಕಲ್ಲು ಗ್ರಾಮ

* ರಸ್ತೆಗೆ; 6 ಗುಂಟೆ

* ಜಂಟಿ ಸರ್ವೆ ನಡೆದ ಗ್ರಾಮಗಳು: ಮಾದಾವರ (ಸರ್ವೆ ನಂಬರ್‌ 48), ಚಿಕ್ಕಬಿದಿರಕಲ್ಲು (ಸರ್ವೆ ನಂಬರ್‌ 21), ತಿರುಮಲಾಪುರ (ಸರ್ವೆ ನಂಬರ್‌ 32) ಹಾಗೂ ದೊಡ್ಡಬಿದಿರಕಲ್ಲು (ಸರ್ವೆ ನಂಬರ್‌ 98)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT