ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿದ್ದುಪಡಿ ಕಾಯ್ದೆಯಿಂದ ರೈತರ ಆದಾಯ ವೃದ್ಧಿ’

ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ಅಭಿಮತ
Last Updated 29 ಸೆಪ್ಟೆಂಬರ್ 2020, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಸಹಾಯಕವಾಗಲಿದೆ. ಎಪಿಎಂಸಿ ಆವರಣದಲ್ಲೇ ರೈತರು ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎನ್ನುವುದು ಅವೈಜ್ಞಾನಿಕ’ ಎಂದು ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ತಿಳಿಸಿದರು.

ಕರ್ನಾಟಕ ವಕೀಲರ ಪರಿಷತ್ತು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಆನ್‌ಲೈನ್ ಕಾರ್ಯಾಗಾರದಲ್ಲಿ ಅವರು, ‘ತಂತ್ರಜ್ಞಾನದ ಯುಗದಲ್ಲಿ ಕೃಷಿ ಮಾರುಕಟ್ಟೆ ಕೂಡ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ’ ಎಂದರು.

‘ದೇಶದ 65 ಕೋಟಿ ಜನ ಕೃಷಿಯಲ್ಲಿ ತೊಡಗಿದ್ದಾರೆ. ಇದರಲ್ಲಿ 35 ಕೋಟಿ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಎಪಿಎಂಸಿ ಕಾಯ್ದೆಯಡಿ ರೈತರು ಪಾವತಿಸಬೇಕಿದ್ದ ಕರವನ್ನು ಈಗ ರದ್ದುಗೊಳಿಸಲಾಗಿದೆ. ರೈತರು ದೇಶದ ಯಾವುದೇ ಭಾಗದಲ್ಲಿ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಬಹುದು. ಆನ್‌ಲೈನ್‌ ಮಾರುಕಟ್ಟೆ ಸಹ ವಿಸ್ತರಣೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾಯ್ದೆಗೆ ತಿದ್ದುಪಡಿ ತಂದ ಮಾತ್ರಕ್ಕೆ ಎಪಿಎಂಸಿ ಮಾರುಕಟ್ಟೆ ದರಗಳು ರದ್ದಾಗುವುದಿಲ್ಲ. ಸ್ಮಾರ್ಟ್ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ಬರಲಿದ್ದು, ಇದರಿಂದ ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ. ಮೂರು ದಿನಗಳಲ್ಲಿ ರೈತರಿಗೆ ಹಣ ಪಾವತಿಯಾಗಲಿದೆ. ಮಧ್ಯವರ್ತಿಗಳ ಪಾಲಾಗುತ್ತಿದ್ದ ಲಾಭದ ಪ್ರಮಾಣ ಗ್ರಾಹಕರು ಮತ್ತು ರೈತರಿಗೆ ವರ್ಗಾವಣೆಯಾಗಲಿದೆ’ ಎಂದು ಹೇಳಿದರು.

‘ಖಾಸಗೀಕರಣ ಮಾಡುವ ಹುನ್ನಾರ’

‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಹುನ್ನಾರ ನಡೆಸಿದೆ. ಬಿಎಸ್‌ಎನ್‌ಎಲ್ ಮತ್ತಿತರ ಸಂಸ್ಥೆಗಳನ್ನು ಕೂಡ ಧನಿಕರ ಪಾಲು ಮಾಡುವ ಷಡ್ಯಂತ್ರ ರೂಪಿಸಿದೆ’ ಎಂದು ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಆರೋಪಿಸಿದರು.

‘ಮುಂದಿನ ಕೆಲ ವರ್ಷಗಳಲ್ಲಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ವಿಶೇಷ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ, ಇಡೀ ಮಾರುಕಟ್ಟೆ ವ್ಯವಸ್ಥೆಯನ್ನು ರಿಲಯನ್ಸ್ ನಂತಹ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ರೈತರ ರಕ್ಷಣೆಗೆ ಈ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಎಲ್ಲವೂ ಕಾರ್ಪೋರೇಟ್ ವ್ಯವಸ್ಥೆಗೆ ಪೂರಕವಾದ ಕಾನೂನುಗಳಾಗಿವೆ. ಕಾರ್ಪೋರೇಟ್ ಸಂಸ್ಥೆಗಳು ದಬ್ಬಾಳಿಕೆಮಾಡಿ, ರೈತರನ್ನು ಶೋಷಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT