ಸೋಮವಾರ, ಜುಲೈ 4, 2022
23 °C
ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿಯ ಲೆಹರ್‌ ಸಿಂಗ್‌

ವಿಕ್ಟೋರಿಯಾ ಆಸ್ಪತ್ರೆ ಸಾಕ್ಷಾತ್‌ ನರಕ: ಲೆಹರ್‌ ಸಿಂಗ್‌ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದ ವಿಕ್ಟೋರಿಯಾ ಆಸ್ಪತ್ರೆ ಸಾಕ್ಷಾತ್‌ ನರಕವಾಗಿದೆ. ಇಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸುಧಾರಣೆ ಮಾತ್ರ ಕಾಣುತ್ತಿಲ್ಲ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಕಳವಳ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಮ್ಮ ಅಧಿಕಾರಿಗಳ ಮನೆಯಲ್ಲಿ ಈಜುಕೊಳಗಳು ನಿರ್ಮಾಣವಾಗುತ್ತಿವೆ. ಆದರೆ, ಈ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳೇ ಇಲ್ಲ. ಸದ್ಯ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸಾಕಾಗುವುದಿಲ್ಲ. ಸದನದ ನಾಲ್ಕೈದು ಸದಸ್ಯರು ಈ ಆಸ್ಪತ್ರೆಗೆ ಭೇಟಿ ನೀಡಿದರೆ ವಾಸ್ತವ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಇಡೀ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಇಲ್ಲಿ ಉತ್ತರದಾಯಿತ್ವವೇ ಇಲ್ಲದಂತಾಗಿದೆ. ಅಧಿಕಾರಿಗಳು –ಗುತ್ತಿಗೆದಾರರು ತಿನ್ನುತ್ತಾರೆ. ಜನ ಮಾತ್ರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಣ ನೀಡಿದರೆ ಮಾತ್ರ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಹೀಗಾಗಿ, ಪೊಲೀಸ್‌ ಇಲಾಖೆ ಶೋಚನೀಯ ಸ್ಥಿತಿಯಲ್ಲಿದೆ.  ಹಣ, ಜಾತಿ ಮತ್ತು ಸ್ವಜನಪಕ್ಷಪಾತದ ಆಧಾರದ ಮೇಲೆಯೇ ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿಗಳು ನಡೆಯುತ್ತಿವೆ’ ಎಂದು ದೂರಿದರು.

‘ಈಜಿಪುರ ಮೇಲ್ಸೇತುವೆ ಕಾಮಗಾರಿ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಮುಗಿದಿಲ್ಲ. ಅದು ಯಥಾಸ್ಥಿತಿಯಲ್ಲಿದೆ. ಅದೇ ರೀತಿ ಶಿವಾನಂದ ವೃತ್ತದಲ್ಲಿ ಮೇಲ್ಸೇತುವೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ. ಈ ಬಗ್ಗೆ ಈಗಲಾದರೂ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು