ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಶಾಂತಿಯುತ ಮತದಾನದ ನಡುವೆ ಕಾಣಿಸಿದ ‘ಚೊಂಬು’

ಶಿವಪುರ ಕಾಲೊನಿಯಲ್ಲಿ ಮತದಾನ ಬಹಿಷ್ಕಾರದ ಬೆದರಿಕೆ –ನೆಲಗದರಹಳ್ಳಿಯಲ್ಲಿ ಕೈಕೊಟ್ಟ ವಿವಿಪ್ಯಾಟ್‌
Published 26 ಏಪ್ರಿಲ್ 2024, 15:46 IST
Last Updated 26 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ಟಿ.ದಾಸರಹಳ್ಳಿ ಸಮೀಪದ ಶಿವಪುರದಲ್ಲಿ ಮತದಾನ ಬಹಿಷ್ಕಾರದ ಬೆದರಿಕೆ, ನೆಲಗದರಹಳ್ಳಿಯಲ್ಲಿ ಕೈಕೊಟ್ಟ ವಿವಿಪ್ಯಾಟ್... ಇಂಥ ಬೆರಳೆಣಿಕೆಯ ತೊಂದರೆಗಳನ್ನು ಹೊರತುಪಡಿಸಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಗೊಂದಲ, ಗಲಾಟೆಗಳಿಲ್ಲದೇ ಮತದಾನ ನಡೆಯಿತು. ಇದರ ನಡುವೆ ಮಂಜುನಾಥ ನಗರದಲ್ಲಿ ಯುವಕಾಂಗ್ರೆಸ್‌ನ ನಾಯಕರು ‘ಚೊಂಬು’, ‘ಸಿಲಿಂಡರ್‌’ಗಳೊಂದಿಗೆ ಬಂದು ಗಮನ ಸೆಳೆದರು.

ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಿವಪುರ ಕಾಲೊನಿಯಲ್ಲಿ ರಸ್ತೆ ಇಲ್ಲ, ಬೀದಿ ದೀಪ ಇದ್ದರೂ ಉರಿಯುತ್ತಿಲ್ಲ. ಯಾವುದೇ ಮೂಲಸೌಕರ್ಯಗಳಿಲ್ಲ. ಸಮಸ್ಯೆ ಸರಿಯಾಗುವವರೆಗೆ ಮತದಾನ ಮಾಡುವುದಿಲ್ಲ ಎಂದು ಕಾಲೊನಿಯ ನಿವಾಸಿಗಳು ಪಟ್ಟು ಹಿಡಿದರು. 300 ಮತದಾರರು ಈ ಕಾಲೊನಿಯಲ್ಲಿದ್ದು, ಅಧಿಕಾರಿಗಳು ಬಂದು ಮನವೊಲಿಸಲು ಪ್ರಯತ್ನಿಸಿದರು. ಸಂಜೆವರೆಗೆ ಮನಸ್ಸು ಬದಲಾಯಿಸದಿದ್ದರೂ ಕೊನೇ ಕ್ಷಣದಲ್ಲಿ ಬಂದು ಹಲವರು ಮತ ಚಲಾಯಿಸಿದರು.

ನೆಲಗದರಹಳ್ಳಿಯಲ್ಲಿ ವಿವಿಪ್ಯಾಟ್‌ ಕೈಕೊಟ್ಟಿದ್ದರಿಂದ ಸುಮಾರು 2 ಗಂಟೆ ಮತದಾನ ಸ್ಥಗಿತಗೊಂಡಿತ್ತು. ಕಾದು ಕಾದು ಸುಸ್ತಾದ ಹಲವು ಮತದಾರರು ವಾಪಸ್ಸಾದರು. ತಂತ್ರಜ್ಞರು ಬಂದು ವಿವಿಪ್ಯಾಟ್‌ ಸರಿಪಡಿಸಿದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಕೂಡಾ ಎರಡು ಗಂಟೆ ಕಾದು ಮತ ಚಲಾಯಿಸಿದರು. 

ಚೊಂಬು ಪ್ರದರ್ಶನ: ಮಂಜುನಾಥ್ ನಗರ ಗೌತಮ್ ಕಾಲೇಜಿನಲ್ಲಿ ಮತ ಹಾಕಲು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ತಲೆಯ ಮೇಲೆ ಖಾಲಿ ಗ್ಯಾಸ್‌ ಸಿಲಿಂಡರ್‌ ಹೊತ್ತು ಬಂದಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಚೊಂಬು‌ ಹಿಡಿದು ಅವರಿಗೆ ಸಾಥ್ ನೀಡಿದರು.

ಎಲ್ಲ ಚುನಾವಣೆಯಲ್ಲಿ ಮತ: ಮಲ್ಲೇಶ್ವರ 12ನೇ ಅಡ್ಡರಸ್ತೆಯಲ್ಲಿರುವ ನಿರ್ಮಲರಾಣಿ ಪ್ರೌಢಶಾಲೆಯಲ್ಲಿ ಮತಚಲಾಯಿಸಿದ 93 ವರ್ಷದ ಕಲಾವತಿ ಅವರು, ‘ಸ್ವಾತಂತ್ರ್ಯ ಬಂದಲ್ಲಿಂದ ಇಲ್ಲಿವರೆಗಿನ ಎಲ್ಲ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ’ ಎಂದು ಖುಷಿಪಟ್ಟರು. ‘ಯುವಮತದಾರರು ಚುನಾವಣೆ ಬಗ್ಗೆ ಅಸಡ್ಡೆ ತಾಳಬಾರದು. ಮನೆಯಲ್ಲಿ ಹಿರಿಯರು ಅವರಿಗೆ ತಿಳಿ ಹೇಳಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರದ ಸರ್ವೋದಯ ಕಾಲೇಜಿನಲ್ಲಿ ಹಾಕಲಾಗಿದ್ದ ಸೆಲ್ಫೀ ಪಾಯಿಂಟ್‌ನಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ ನಂತರ ಛಾಯಾಚಿತ್ರ ತೆಗೆಸಿಕೊಂಡರು –ಪ್ರಜಾವಾಣಿ ಚಿತ್ರ-Photo By/ Krishnakumar P S
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರದ ಸರ್ವೋದಯ ಕಾಲೇಜಿನಲ್ಲಿ ಹಾಕಲಾಗಿದ್ದ ಸೆಲ್ಫೀ ಪಾಯಿಂಟ್‌ನಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ ನಂತರ ಛಾಯಾಚಿತ್ರ ತೆಗೆಸಿಕೊಂಡರು –ಪ್ರಜಾವಾಣಿ ಚಿತ್ರ-Photo By/ Krishnakumar P S

‘ಹಿರಿಯರಿಗೆ ಮನೆಯಲ್ಲಿಯೇ ಮತದಾನ ಮಾಡುವ ವಿಚಾರ ನನಗೆ ಗೊತ್ತೇ ಇಲ್ಲ’ ಎಂದು ಅವರು ತಿಳಿಸಿದರೆ, ‘ಮನೆ ಪಕ್ಕದಲ್ಲಿಯೇ ಮತಗಟ್ಟೆ ಇರುವುದರಿಂದ ನಾವೇ ಹೇಳಿಲ್ಲ’ ಎಂದು ಅವರ ಮಗ ಸ್ಪಷ್ಟಪಡಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರನಗರದ ಮತಗಟ್ಟೆಯೊಂದರಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು –ಪ್ರಜಾವಾಣಿ ಚಿತ್ರ-Photo By/ Krishnakumar P S
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರನಗರದ ಮತಗಟ್ಟೆಯೊಂದರಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು –ಪ್ರಜಾವಾಣಿ ಚಿತ್ರ-Photo By/ Krishnakumar P S

ಮೊಮ್ಮಗಳಿಗಿಲ್ಲ ಮತ: ‘55 ವರ್ಷಗಳಿಂದ ಯಾವ ಚುನಾವಣೆಯನ್ನೂ ತಪ್ಪಿಸದೇ ನಾನು ಮತ ಚಲಾಯಿಸುತ್ತಿದ್ದೇನೆ. ಆದರೆ, ನನ್ನ ಎರಡನೇ ಮೊಮ್ಮಗಳು ಐಶ್ವರ್ಯಾಗೆ 21 ವರ್ಷವಾದರೂ ಮತದಾರರ ಪಟ್ಟಿಗೆ ಅವಳ ಹೆಸರು ಸೇರಿಸಿಲ್ಲ. ಎರಡು ವರ್ಷಗಳಿಂದ ಅವಳು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದರೂ ಅಧಿಕಾರಿಗಳು ಸೇರಿಸುತ್ತಿಲ್ಲ’ ಎಂದು ಸುಬ್ರಹ್ಮಣ್ಯನಗರದ ಹೊನ್ನಮ್ಮ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಶ್ರೀರಾಂಪುರ 5ನೇ ಮುಖ್ಯರಸ್ತೆಯಲ್ಲಿರುವ ಸೇವಾ ಆಶ್ರಮ ಸಮುದಾಯ ಶಿಕ್ಷಣ ಸಂಸ್ಥೆಯಲ್ಲಿ ಮತ ಚಲಾಯಿಸಲು ದ್ವಿಚಕ್ರವಾಹನದಲ್ಲಿ ಬಾನು ಅವರನ್ನು ಕರೆದುಕೊಂಡು ಬಂದಿದ್ದ ಮೊಮ್ಮಗ ವಹೀದ್ ಎಂ.ವಿ. ಅವರನ್ನು ವ್ಹೀಲ್ ಚೇರ್‌ಗೆ ಕೂರಿಸುತ್ತಿರುವ ದೃಶ್ಯ ಕಂಡು ಬಂತು. –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಸಿಬ್ಬಂದಿಗೆ ಆಹಾರ ತಯಾರಿ: ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಹಲವರು ಉಪಾಹಾರದ ತಯಾರಿಯಲ್ಲಿ ತೊಡಗಿದ್ದರು. ‘ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ 211 ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಇಲ್ಲಿಂದಲೇ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಕಳುಹಿಸಲಾಗುತ್ತದೆ. ಗುರುವಾರ ಮತಗಟ್ಟೆಗಳಿಗೆ ತೆರಳುವ ಮುನ್ನ ಸುಮಾರು 1700 ಮಂದಿಗೆ ಹೆಸರುಬೇಳೆ ಪಾಯಸ, ಮಾವಿನಕಾಯಿ ಚಿತ್ರಾನ್ನ, ಅನ್ನ, ಸಾಂಬಾರು, ಹಪ್ಪಳ, ರಸಂ, ಮಜ್ಜಿಗೆ ನೀಡಲಾಗಿತ್ತು. ಇವತ್ತು ಬೆಳಿಗ್ಗೆ ಚೌಚೌಬಾತ್‌ ತಯಾರಿಸಿ ಎಲ್ಲ ಕಡೆ ತಲುಪಿಸಲಾಗಿದೆ. ಮಧ್ಯಾಹ್ನಕ್ಕೆ ಪಲಾವ್‌ ಮತ್ತು ಮೈಸೂರುಪಾಕ್‌ ಪ್ಯಾಕೆಟ್‌ ಮಾಡಿ ಕಳುಹಿಸಲಾಗುತ್ತಿದೆ’ ಎಂದು ಮಲ್ಲೇಶ್ವರ ಕಂದಾಯ ನಿರೀಕ್ಷಕ ನಂಜಪ್ಪ ಮಾಹಿತಿ ನೀಡಿದರು.

ರಾಜಾಜಿನಗರ ವಿದ್ಯಾವರ್ಧಕ ಸಂಘದ ವಿವಿಎಸ್‌ ಗಾಂಧಿ ಸೆಂಟನರಿ ಪ್ರಾಥಮಿಕ ಶಾಲೆಯಲ್ಲಿ ಶಾಮಿಯಾನದಡಿಯಲ್ಲಿ ಹಲವು ಅಧಿಕಾರಿಗಳು, ಸಿಬ್ಬಂದಿ ಇದ್ದರು. ಅವರೆಲ್ಲ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದವರು. ಯಾವುದಾದರೂ ಮತಗಟ್ಟೆಯಲ್ಲಿರುವ ಸಿಬ್ಬಂದಿಗೆ ಅನಾರೋಗ್ಯ ಕಾಡಿದರೆ, ಅವರ ಬದಲಿಗೆ ಕೆಲಸ ಮಾಡಲು ತಯಾರಾಗಿದ್ದರು. ‘ಈ ಸೆಕೆಯಲ್ಲಿ ಕಾಯುವುದಕ್ಕಿಂತ ಯಾವುದಾದರೂ ಬೂತ್‌ನಲ್ಲಿ ಕೆಲಸ ಮಾಡುವುದೇ ಉತ್ತಮವಾಗಿತ್ತು’ ಎಂದು ಕೆಲ ಅಧಿಕಾರಿಗಳು ನಿಡುಸುಯ್ದರು.

‘ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಆದರೆ, ಮತದಾರರಿಗೆ ಮೊಬೈಲ್‌ ಹೊರಗಿಟ್ಟು ಹೋಗಿ ಎಂದು ಹೇಳಿ ಹೇಳಿ ಸಾಕಾಯಿತು. ಈ ಬಗ್ಗೆ ಮೊದಲೇ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಿತ್ತು’ ಎಂದು ಈಸ್ಟ್‌ವೆಸ್ಟ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಭದ್ರತಾ ಸಿಬ್ಬಂದಿ ತಿಳಿಸಿದರು.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪೂರೈಸಲು ಮಲ್ಲೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಹಾರ ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಸಲಾಯಿತು.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪೂರೈಸಲು ಮಲ್ಲೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಹಾರ ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಸಲಾಯಿತು.
ಹಿರಿಯ ನಾಗರಿಕರ ಸಹಾಯಕ್ಕೆ ಕೊಡಲಾಗಿದ್ದ ವ್ಹೀಲ್ ಚೇರ್ –ಪ್ರಜಾವಾಣಿ ಚಿತ್ರ
ಹಿರಿಯ ನಾಗರಿಕರ ಸಹಾಯಕ್ಕೆ ಕೊಡಲಾಗಿದ್ದ ವ್ಹೀಲ್ ಚೇರ್ –ಪ್ರಜಾವಾಣಿ ಚಿತ್ರ
ಗುಜರಿ ವೀಲ್‌ಚೇರ್‌
ವಯಸ್ಸಾದವರು ನಡೆಯಲಾರದವರನ್ನು ಗೇಟ್‌ ಬಳಿಯಿಂದ ಮತಗಟ್ಟೆಗೆ ಕರೆದುಕೊಂಡು ಹೋಗಲು ಎಲ್ಲ ಮತಗಟ್ಟೆಗಳಲ್ಲೂ ವ್ಹೀಲ್‌ಚೇರ್‌  ಇಡಲಾಗಿತ್ತು. ಬ್ಯಾಟರಾಯನಪುರದ ಭುವನೇಶ್ವರಿನಗರ ಕೆನೆತ್‌ ಜಾರ್ಜ್‌ ಶಾಲೆ ಸೇರಿದಂತೆ ಕೆಲವು ಮತಗಟ್ಟೆಗಳಲ್ಲಿ ಕುಳಿತುಕೊಳ್ಳಲು ಸಾಧ್ಯವೇ ಇಲ್ಲದಂಥ ಗುಜರಿ ವ್ಹೀಲ್‌ಚೇರ್‌ಗಳನ್ನು ಇಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT