ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಬೆಂಗಳೂರು: ಒಳ ರೋಗಿಗಳಿಂದಲೂ ಮತದಾನ

ಆಂಬುಲೆನ್ಸ್‌ ಮೂಲಕ ಮತಗಟ್ಟೆಗೆ ಕರೆದೊಯ್ಯಲು ಹಸಿರು ಕಾರಿಡಾರ್‌ ವ್ಯವಸ್ಥೆ
Published 26 ಏಪ್ರಿಲ್ 2024, 15:13 IST
Last Updated 26 ಏಪ್ರಿಲ್ 2024, 15:13 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು, ಮೂತ್ರಪಿಂಡ ವೈಫಲ್ಯ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳೂ ನಗರದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ, ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ಮಣಿಪಾಲ್ ಆಸ್ಪತ್ರೆಯು ಬಿಬಿಎಂಪಿ ಸಹಯೋಗದಲ್ಲಿ ಒಳರೋಗಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಆಸ್ಪತ್ರೆಯ ನೆರವಿನಿಂದ 50 ಒಳರೋಗಿಗಳು ಮತ ಚಲಾಯಿಸಿದರು. ಅವರನ್ನು ವಿವಿಧ ಮತಗಟ್ಟೆಗಳಿಗೆ ಆಂಬುಲೆನ್ಸ್‌ಗಳ ಮೂಲಕ ಕರೆದೊಯ್ಯಲು ಹಸಿರು ಕಾರಿಡಾರ್‌ (ಗ್ರೀನ್ ಕಾರಿಡಾರ್) ವ್ಯವಸ್ಥೆ ಮಾಡಲಾಗಿತ್ತು. ರೋಗಿಗಳೊಂದಿಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯೂ ಇದ್ದರು.

ಕರುಳು ಕ್ಯಾನ್ಸರ್‌ನಿಂದ ಬದುಕುಳಿದವರು, ಬದಲಿ ಮಂಡಿ ಕೀಲು ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾದವರು, ಡಯಾಲಿಸಿಸ್‌ ಪಡೆಯುತ್ತಿರುವವರು, ತೀವ್ರ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರು, ಮೂತ್ರನಾಳ ಸೋಂಕಿನ ಚಿಕಿತ್ಸೆಗೆ ದಾಖಲಾದವರು, ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದವರು, ರಸ್ತೆ ಅಪಘಾತದಿಂದ ಗಾಯಕ್ಕೆ ಒಳಗಾದವರೂ ವೈದ್ಯಕೀಯ ಸಿಬ್ಬಂದಿ ಬೆಂಬಲದಿಂದ ಮತ ಚಲಾಯಿಸಿದರು. ಜಯನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 78 ವರ್ಷದ ಮಹಿಳೆಯೊಬ್ಬರನ್ನು ವೈದ್ಯಕೀಯ ಆಮ್ಲಜನಕದ ನೆರವಿನೊಂದಿಗೆ ಮತ ಗಟ್ಟೆಗೆ ಕರೆತರಲಾಗಿತ್ತು. 

ಕೇಂಬ್ರಿಡ್ಜ್ ಲೇಔಟ್, ಎಇಸಿಎಸ್ ಲೇಔಟ್, ಆರ್‌ಟಿ ನಗರ, ಎಚ್‌ಎಸ್‌ಆರ್ 6ನೇ ವಲಯ, ಹಳೆ ಬೈಯಪ್ಪನಹಳ್ಳಿ, ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ಬಿಪಿ ಇಂಡಿಯನ್ ಹೈಸ್ಕೂಲ್, ಹಂಪಿನಗರ, ಮಹಾಲಕ್ಷ್ಮೀಪುರ, ಸಂಜಯನಗರ, ದಾಸರಹಳ್ಳಿ, ಬಿನ್ನಿಮಿಲ್ ರಸ್ತೆ, ಬಾಣಸವಾಡಿ, ಹೂಡಿ, ಅಂಬೇಡ್ಕರ್ ನಗರ, ಮಹದೇವಪುರ, ಜೆ.ಪಿ.ನಗರ, ಜಯನಗರ, ಚನ್ನಸಂದ್ರ, ಮತ್ತು ಹೊಸಕೋಟೆ ಸೇರಿ ವಿವಿಧ ಪ್ರದೇಶದಲ್ಲಿರುವ ಮತಗಟ್ಟೆಗಳಿಗೆ ರೋಗಿಗಳನ್ನು ಕರೆದೊಯ್ಯಲಾಯಿತು. 

ಮಣಿಪಾಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್, ‘ಅನೇಕ ರೋಗಿಗಳು ಮತ ಚಲಾಯಿಸಲು ಆಸಕ್ತಿ ಹೊಂದಿದ್ದರು. ವೈದ್ಯಕೀಯ ತಪಾಸಣೆ ನಡೆಸಿ, ಚುನಾವಣೆ ಆಯೋಗ ಹಾಗೂ ಬಿಬಿಎಂಪಿ ನೆರವಿನಿಂದ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು’ ಎಂದು ತಿಳಿಸಿದರು. 

ಸ್ಪರ್ಶ್ ಆಸ್ಪತ್ರೆಯೂ ಒಳರೋಗಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಗಾಲಿ ಕುರ್ಚಿ ಹಾಗೂ ಆಂಬುಲೆನ್ಸ್ ಸೇರಿ ಅಗತ್ಯ ವೈದ್ಯಕೀಯ ನೆರವನ್ನು ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT