ಬುಧವಾರ, ಜನವರಿ 22, 2020
16 °C
ಸುಬ್ರಹ್ಮಣ್ಯಪುರ ಕೆರೆ: ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾ.ಶೆಟ್ಟಿ ಗರಂ

ಒತ್ತುವರಿ ತೆರವಿಗೆ ವಾರ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಬ್ರಹ್ಮಣ್ಯಪುರ ಕೆರೆ ಅಚ್ಚುಕಟ್ಟು ಪ್ರದೇಶವನ್ನು ಒತ್ತುವರಿ ಮಾಡಿರುವ ಜನರನ್ನು ಇದೇ 19ರೊಳಗೆ ಸ್ಥಳಾಂತರ ಮಾಡದಿದ್ದರೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ನಗರದ ಕೆರೆಗಳನ್ನು ಒತ್ತುವರಿ ಮಾಡಿರುವ ಕುರಿತು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದ (ಎನ್‌ಬಿಎಫ್‌) ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತರು, ಒತ್ತುವರಿ ತೆರವು ಮಾಡಲು ಸಬೂಬು ಹೇಳು
ತ್ತಿರುವ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊಳಚೆ ನಿವಾಸಿಗಳಿಗಾಗಿ 99 ಮನೆಗಳನ್ನು ನಿರ್ಮಿಸಲಾಗಿದೆ. ಈ ಮನೆಗಳಿಗೆ ಇನ್ನೂ ವಿದ್ಯುತ್‌ ಮೀಟರ್‌ಗಳನ್ನು ಅಳವಡಿಸದೆ ಇರುವುದರಿಂದ ಸ್ಥಳಾಂತರ ವಿಳಂಬವಾಗಿದೆ. ಒಂದು ವಾರ ಸಮಯಾವಕಾಶ ನೀಡಿದರೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮನವಿ ಮಾಡಿದರು.

ಒತ್ತುವರಿದಾರರನ್ನು ತೆರವುಗೊಳಿಸಿ ಮಂಡಳಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸುವಂತೆ ಕಳೆದ ಸೆ.26ರಂದು ಲೋಕಾಯುಕ್ತರು ಆದೇಶಿಸಿದ್ದರು. ಅಧಿಕಾರಿಗಳು ಈ ಆದೇಶವನ್ನು ಪಾಲಿಸದೆ ಸಬೂಬು ಹೇಳಿದ್ದು ಲೋಕಾಯುಕ್ತರ ಸಿಟ್ಟಿಗೆ ಕಾರಣವಾಯಿತು.‘ಡಿ.19ರಂದು ಮುಂದಿನ ವಿಚಾರಣೆ ನಡೆಯಲಿದ್ದು ಅಷ್ಟರೊಳಗೆ ತಮ್ಮ ಆದೇಶ ಪಾಲಿಸದಿದ್ದರೆ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸುವುದಾಗಿ’ ನ್ಯಾ. ಶೆಟ್ಟಿ ಎಚ್ಚರಿಸಿದರು.

ತಲಘಟ್ಟಪುರ ಕೆರೆ ಒತ್ತುವರಿ ತೆರವು ಮಾಡಲು ಜಿಲ್ಲಾಧಿಕಾರಿಗಳ ಆದೇಶ ನಿರೀಕ್ಷಿಸಲಾಗುತ್ತಿದೆ ಎಂದು ತಹಶೀಲ್ದಾರ್‌ ಹೇಳಿದರು.ಆದರೆ, ಏಪ್ರಿಲ್‌ 25ರಂದು ತಾವು ನೀಡಿರುವ ಆದೇಶದಂತೆ ಸ್ವತಃ ತಹಶೀಲ್ದಾರ್ ಅವರೇ ಒತ್ತುವರಿ ತೆರವು ಮಾಡಬೇಕು ಎಂದೂ ಸೂಚಿಸಿದರು.

ಕೆರೆಗಳ ಸಮೀಕ್ಷೆ ನಡೆಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕೆ.ಬಿ.ಕೋಳಿವಾಡ ನೇತೃತ್ವದ ಹಿಂದಿನ ಸದನ ಸಮಿತಿ ವರದಿ ಮಾಹಿತಿಯನ್ನೇ ಉಲ್ಲೇಖಿಸುತ್ತಿದ್ದಾರೆ. ಈ ವಿಷಯದಲ್ಲಿ ಲೋಕಾಯುಕ್ತರ ದಾರಿ ತಪ್ಪಿಸಲಾಗುತ್ತಿದೆ ಎಂದು ಪ್ರತಿಷ್ಠಾನದ ಪ್ರತಿನಿಧಿಗಳು ದೂರಿದರು. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಪ್ರತಿಷ್ಠಾನ ಆಕ್ಷೇಪಣೆ ಸಲ್ಲಿಸಬೇಕು. ಈ ಆಕ್ಷೇಪಣೆಗೆ ಸರ್ವೇಯರ್‌ ‍ಫೆಬ್ರುವರಿ 15ರೊಳಗೆ ಉತ್ತರಿಸಬೇಕು ಎಂದು ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರುವರಿ 15ರಂದು ನಡೆಯಲಿದೆ.

ಯುನೈಟೆಡ್‌ ಬೆಂಗಳೂರು ನಗರದ 23 ಕೆರೆಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುತ್ತಿದೆ. ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಅರ್ಜಿಗಳನ್ನೂ ಸಲ್ಲಿಸಿದೆ. ಸದ್ಯ 23 ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿಗೆ ಸಂಬಂಧಿಸಿದ ಅರ್ಜಿಗಳು ಲೋಕಾಯುಕ್ತರ ಮುಂದೆ ವಿಚಾರಣೆಯಲ್ಲಿವೆ. ಇವುಗಳಲ್ಲಿ 13 ಕೆರೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು