ಗುರುವಾರ , ನವೆಂಬರ್ 14, 2019
18 °C

ಲಿಫ್ಟ್‌ ಗುಂಡಿಯಲ್ಲಿ ಬಿದ್ದು ಕಾರ್ಮಿಕ ಸಾವು

Published:
Updated:

ಬೆಂಗಳೂರು: ಬಸವನಗುಡಿಯ ರಾಣೋಜಿ ರಾವ್ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಸ್ಥಳದಲ್ಲಿ ಲಿಫ್ಟ್‌ಗಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಭೀಮ್ ಬರ್ಮನ್ (24) ಎಂಬುವರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಭೀಮ್, ರಾಜಾಜಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಮಾರ್ಬಲ್ ಕೆಲಸ ಮಾಡುತ್ತಿದ್ದರು.

‘ಸಂಬಂಧಿ ರೂಪ್‌ ಸಿಂಗ್ ಹಾಗೂ ಇತರರನ್ನು ಮಾತನಾಡಿಸಲು ಭೀಮ್, ಆಗಾಗ ಬಸವನಗುಡಿಗೆ ಬಂದು ಹೋಗುತ್ತಿದ್ದರು. ಇದೇ 12ರಂದು ರಾತ್ರಿ ಸಂಬಂಧಿಕರು ಮಲಗಿದ್ದ ವೇಳೆಯಲ್ಲೇ ಅವರು ಸ್ಥಳಕ್ಕೆ ಬಂದಿದ್ದರು. ಅದೇ ಸಂದರ್ಭದಲ್ಲಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದರು. ಮರುದಿನ ಬೆಳಿಗ್ಗೆ ಎಚ್ಚರಗೊಂಡಿದ್ದ ಸಂಬಂಧಿಕರು, ಕೆಲಸಕ್ಕೆ ಹೋಗಲು ಸಿದ್ಧವಾಗುತ್ತಿದ್ದರು. ಆಗ ಗುಂಡಿಯಲ್ಲಿ ಭೀಮ್ ಮೃತದೇಹ ಕಂಡಿತ್ತು’ ಎಂದು ಪೊಲೀಸರು ಹೇಳಿದರು.

‘ಭೀಮ್ ಸಾವಿನ ಬಗ್ಗೆ ದೂರು ನೀಡಿರುವ ರೂಪ್‌ ಸಿಂಗ್, ‘ಕಟ್ಟಡದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕಟ್ಟಡದ ಮಾಲೀಕ, ಗುತ್ತಿಗೆದಾರ ಹಾಗೂ ಮೇಲ್ವಿಚಾರಕನ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ’ ಎಂದು ಆರೋಪಿಸಿದ್ದಾರೆ.

ಮಾಲೀಕ ಎಸ್.ಉಮೇಶ್, ಗುತ್ತಿಗೆದಾರ ರಾಮ್ ಅವತಾರ್ ಹಾಗೂ ಮೇಲ್ವಿಚಾರಕ ಸಂತೋಷ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)