ಸೋಮವಾರ, ಆಗಸ್ಟ್ 19, 2019
28 °C
ಮಣಿಪಾಲ್‌ ಸಮೂಹಕ್ಕೆ ₹ 62 ಕೋಟಿ ವಂಚಿಸಿದ್ದ ಪ್ರಕರಣ

ಚೆನ್ನೈನ ಎಂಬಿಎ ಪದವೀಧರೆ ಬಂಧನ

Published:
Updated:
Prajavani

ಬೆಂಗಳೂರು: ‘ಮಣಿಪಾಲ್ ಎಜುಕೇಷನ್ ಹಾಗೂ ಮೆಡಿಕಲ್ ಗ್ರೂಪ್‌’ಗೆ ₹ 62 ಕೋಟಿ ವಂಚಿಸಿದ್ದ ಪ್ರಕರಣದ ಏಳನೇ ಆರೋಪಿ ಬಾಲಾಂಬನ್ ಶಂಕರನ್ ಎಂಬಾಕೆಯನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

‘ಚೆನ್ನೈನ ನಿವಾಸಿ ಬಾಲಾಂಬನ್‌ಳನ್ನು ಶುಕ್ರವಾರವೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಲಾಗಿತ್ತು. ನ್ಯಾಯಾಲಯ, ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಕಸ್ಟಡಿಗೆ ನೀಡಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಗ್ರೂಪ್‌ನ ನಿರ್ದೇಶಕರಾದ ರಂಜನ್ ಪೈ ಹಾಗೂ ಶ್ರುತಿ ಪೈ ಅವರ ಖಾತೆಗಳಿಂದ ಹಾಗೂ ಅವರಿಬ್ಬರ ವಿವಿಧ ಅಂತರ
ರಾಷ್ಟ್ರೀಯ ಕಂಪನಿಗಳಿಂದ ₹ 62 ಕೋಟಿ ವರ್ಗಾಯಿಸಿಕೊಂಡು ವಂಚಿಸಲಾಗಿತ್ತು. ಆ ಸಂಬಂಧ ದಾಖಲಾಗಿದ್ದ ದೂರಿನನ್ವಯ ಗ್ರೂಪ್‌ನ ಉಪ ಪ್ರಧಾನ ವ್ಯವಸ್ಥಾಪಕ ಸಂದೀಪ್ ಗುರುರಾಜ್ (38) ಸೇರಿದಂತೆ ಹಲವರನ್ನು ಹಿಂದೆಯೇ ಬಂಧಿಸಲಾಗಿತ್ತು’ ಎಂದು ಹೇಳಿವೆ.

ಹಣ ವರ್ಗಾವಣೆಗೆ ಮಧ್ಯವರ್ತಿ: ‘ಎಂಬಿಎ ಪದವೀಧರೆ ಬಾಲಾಂಬನ್, ಹಣಕಾಸು ವ್ಯವಹಾರದಲ್ಲಿ ಪರಿಣಿತೆ. ಆಕೆಯನ್ನು ಸಂಪರ್ಕಿಸಿದ್ದ ಪ್ರಕರಣದ ಪ್ರಮುಖ ಆರೋಪಿ ಸಂದೀಪ್, ಹಣ ವರ್ಗಾವಣೆಗೆ ಸಹಾಯ ಕೋರಿದ್ದ. ಅದಕ್ಕೆ ಒಪ್ಪಿದ್ದ ಬಾಲಾಂಬನ್, ₹2.54 ಕೋಟಿಯನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಆರೋಪಿ ಖಾತೆಗೆ ವರ್ಗಾವಣೆ ಮಾಡಿಕೊಟ್ಟಿದ್ದಳು’ ಎಂದು ಪೊಲೀಸ್ ಮೂಲಗಳು ಹೇಳಿವೆ. 

‘ಗ್ರೂಪ್‌ಗೆ ವಂಚಿಸಲು ಸಂಚು ರೂಪಿಸಿದ್ದ ಆರೋಪಿಗಳು, ಆ ಬಗ್ಗೆ ಚರ್ಚಿಸಲು ವಾಟ್ಸ್‌ಆ್ಯಪ್ ಗ್ರೂಪ್ ಸಹ ರಚಿಸಿಕೊಂಡಿದ್ದರು. ವಂಚನೆ ಬಳಿಕ ದಾಖಲೆಗಳನ್ನೂ ನಾಶಪಡಿಸಿದ್ದಾರೆ’ ಎಂದು ತಿಳಿಸಿವೆ.

ನಿರೀಕ್ಷಣಾ ಜಾಮೀನು ಪಡೆದಿದ್ದಳು

‘ಆರೋಪಿ ಬಾಲಾಂಬನ್‌ಳಿಗೆ 6 ತಿಂಗಳ ಮಗು ಇದೆ. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆಕೆ, ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಳು’ ಎಂದು ಮೂಲಗಳು ಹೇಳಿವೆ.

‘ಜಾಮೀನು ಕೋರಿ ಬೆಂಗಳೂರಿನ ನ್ಯಾಯಾಲಯಕ್ಕೂ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದಳು. ಅದು ತಿರಸ್ಕೃತಗೊಂಡಿತ್ತು. ಬಳಿಕವೇ ಪೊಲೀಸರ ವಿಶೇಷ ತಂಡ ಚೆನ್ನೈಗೆ ಹೋಗಿ ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಮೂಲಗಳು ಹೇಳಿವೆ.  

Post Comments (+)