ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ಕೌಶಲ ತರಬೇತಿ ನೀಡಿ: ಮಾರ್ಗರೇಟ್ ಆಳ್ವ ಸಲಹೆ

ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಸಲಹೆ
Published 9 ಆಗಸ್ಟ್ 2024, 16:30 IST
Last Updated 9 ಆಗಸ್ಟ್ 2024, 16:30 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೌಶಲ ತರಬೇತಿ ನೀಡಿ ಸಮಾಜದಲ್ಲಿ ಘನತೆಯಿಂದ ಬದುಕುವಂತೆ ಮಾಡಬೇಕು. ಎಲ್ಲ ಕಾರ್ಯಕ್ರಮಗಳಲ್ಲಿ ಅವರೂ ಪಾಲ್ಗೊಳ್ಳುವಂತಾಗಬೇಕು ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಹೇಳಿದರು.

ನಗರದಲ್ಲಿ ಶುಕ್ರವಾರ ಸಾಮಾಜಿಕ ನ್ಯಾಯಕ್ಕಾಗಿ ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮೈತ್ರಿಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರ ಜೀವನ, ಸಮಸ್ಯೆ ಹಾಗೂ ಕಷ್ಟಗಳ ಕುರಿತು ಕಿರುಚಿತ್ರದ ಮೂಲಕ ಸಮಾಜಕ್ಕೆ ತಿಳಿಸಬೇಕು. ಲಿಂಗತ್ವ ಅಲ್ಪಸಂಖ್ಯಾತರು ಸ್ವಸಹಾಯ ಗುಂಪುಗಳನ್ನು ರಚಿಸಿ, ವೃತ್ತಿಪರ ತರಬೇತಿ ಪಡೆದು ಜೀವನ ನಡೆಸಬೇಕು. ಇದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುದಾನ ನೀಡಬೇಕು ಎಂದು ತಿಳಿಸಿದರು.

‘ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕುಗಳಿಗಾಗಿ ಜನಾಂದೋಲನ ಮಾಡಬೇಕು. ವಕೀಲರು, ನಿವೃತ್ತ ನ್ಯಾಯಾಧೀಶರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಮುದಾಯದವರನ್ನು ಒಳಗೊಂಡ ಕಾನೂನು ನೆರವು ಘಟಕ ರಚಿಸಿ, ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು’ ಎಂದು ಸಲಹೆ ನೀಡಿದರು.

ನಟ ಪ್ರಕಾಶ್ ರಾಜ್ ಮಾತನಾಡಿ, ‘ಗಂಡಿನೊಳಗೆ ಹೆಣ್ಣಿನ ಭಾವನೆ ಬರುವುದು ಹಾಗೂ ಹೆಣ್ಣಿನೊಳಗೆ ಗಂಡಿನ ಭಾವನೆ ಮನುಷ್ಯನ ಸಹಜ ಗುಣ ಲಕ್ಷಣ. ಲಿಂಗತ್ವ ಅಲ್ಪಸಂಖ್ಯಾತರಾಗುವುದು, ಸಲಿಂಗ ಕಾಮಿಗಳಾಗುವುದು ಕಾಯಿಲೆ ಅಲ್ಲ. ಇದಕ್ಕೆ ಔಷಧವೂ ಇಲ್ಲ. ಅವರು ನಮ್ಮ ಸಂಗಾತಿಗಳು. ಮನುಷ್ಯನ ಆಲೋಚನೆ ಬದಲಾಗಬೇಕು. ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು. ಆಗ ಮಾತ್ರ ಆಗಿರುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯ’ ಎಂದು ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತರ ಕುರಿತ ‘ಜೊತೆಯಾಗಿ–ಸುಖವಾಗಿ: ಭಾರತದಲ್ಲಿ ಎಲ್‌ಜಿಬಿಟಿಕ್ಯುಐ ವ್ಯಕ್ತಿಗಳು ಮತ್ತು ಸಂಬಂಧಗಳ ಕಾನೂನು ಹಾಗ ಕಾರ್ಯನೀತಿಗಳ ಕುರಿತ ಕಾಳಜಿಗಳು’, ‘ಜೋನ್ಪುರಿ ಖಯಾಲ್’, ‘ಇರುವುದು ಮತ್ತು ಇಲ್ಲದಿರುವುದು’, ‘ಕನ್ನಡಿ’, ‘ಟೂ ಬಿ ಆರ್ ನಾಟ್ ಟೂ ಬಿ’, ಮೈ–ಮನ (ಕವನ ಸಂಕಲನ), ‘ಬದುಕು ಬಯಲು’ ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ಸರ್ಕಾರಿ ವಕೀಲೆ ಕೆ.ಎಲ್.ಭಾಗ್ಯಲಕ್ಷ್ಮೀ, ಮೈತ್ರಿ ಕೂಟದ ಅಕ್ಕೈ ಪದ್ಮಶಾಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT