ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ಬರಲಿಲ್ಲವೆಂದು ಪತ್ನಿಯನ್ನೇ ಕೊಂದ!

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಂದ ಪತಿ ಬಂಧನ
Last Updated 24 ಏಪ್ರಿಲ್ 2018, 19:29 IST
ಅಕ್ಷರ ಗಾತ್ರ

ಬೆಂಗಳೂರು: ಚನ್ನಮ್ಮನಕೆರೆ ಅಚ್ಚುಕಟ್ಟು ಸಮೀಪದ ಇಟ್ಟಮಡುವಿನಲ್ಲಿ ವಾಣಿಶ್ರೀ (26) ಎಂಬುವರನ್ನು ಕೊಲೆ ಮಾಡಿದ ಆರೋಪದಡಿ, ಅವರ ಪತಿ ಗಜೇಂದ್ರನನ್ನು (35) ಪೊಲೀಸರು ಬಂಧಿಸಿದ್ದಾರೆ.ಚಿತ್ತೂರಿನ ಆರೋಪಿ, ಪತ್ನಿಯನ್ನು ತನ್ನೂರಿಗೆ ಕರೆದುಕೊಂಡು ಹೋಗಲೆಂದು ನಗರಕ್ಕೆ ಬಂದಿದ್ದ. ಊರಿಗೆ ಬರಲು ಪತ್ನಿ ಒಪ್ಪದಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮೃತ ವಾಣಿಶ್ರೀ, ಆರೋಪಿಯ ಸೋದರ ಮಾವನ ಮಗಳಾಗಿದ್ದಳು. ಆರು ವರ್ಷಗಳ ಹಿಂದೆ ಅವರಿಬ್ಬರಿಗೂ ಮದುವೆ ಮಾಡಲಾಗಿತ್ತು. ದಂಪತಿಗೆ ಐದೂವರೆ ವರ್ಷದ ಮಗ ಹಾಗೂ ಮೂರೂವರೆ ವರ್ಷದ ಮಗಳು ಇದ್ದಾರೆ. ಆರಂಭದಲ್ಲಿ ಚಿತ್ತೂರಿನಲ್ಲೇ ಇದ್ದ ದಂಪತಿ, ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಇಟ್ಟಮಡುವಿನ ಮನೆಯೊಂದರಲ್ಲಿ ಬಾಡಿಗೆಗಿದ್ದರು. ಅವರ ಮನೆ ಬಳಿಯ ಮತ್ತೊಂದು ಮನೆಯಲ್ಲಿ ವಾಣಿಶ್ರೀಯವರ ಪೋಷಕರು ನೆಲೆಸಿದ್ದರು.

ಸ್ಥಳೀಯ ಹೋಟೆಲ್‌ನಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು. ನಿತ್ಯವೂ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು ಎಂದರು.

‘ಪತ್ನಿ ಮೇಲೆ ಸಿಟ್ಟಾದ ಗಜೇಂದ್ರ, ಇಬ್ಬರೂ ಮಕ್ಕಳನ್ನು ಕರೆದುಕೊಂಡು ಚಿತ್ತೂರಿಗೆ ಹೋಗಿದ್ದ. ಪತ್ನಿ ನಗರದಲ್ಲೇ ಉಳಿದುಕೊಂಡಿದ್ದರು. ಏ. 23ರಂದು ನಸುಕಿನಲ್ಲಿ ನಗರಕ್ಕೆ ಬಂದಿದ್ದ ಆರೋಪಿ, ಪತ್ನಿ ಇದ್ದ ಮನೆಗೆ ಬಂದು ಬಾಗಿಲು ಬಡಿದಿದ್ದ. ಗಾಬರಿಗೊಂಡಿದ್ದ ಪತ್ನಿ, ಪೋಷಕರಿಗೆ ವಿಷಯ ತಿಳಿಸಿದ್ದಳು. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಆರೋಪಿ, ಒಳಗಿನಿಂದ ಲಾಕ್‌ ಮಾಡಿಕೊಂಡಿದ್ದ. ನಂತರ, ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದ’

‘ಮನೆ ಬಳಿ ಬಂದಿದ್ದ ಪೋಷಕರು ಎಷ್ಟೇ ಕೂಗಿದರೂ ಆತ ಬಾಗಿಲು ತೆರೆದಿರಲಿಲ್ಲ. ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ತೆಗೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಾಣಿಶ್ರೀ ಅವರನ್ನು ಉದ್ಭವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ ವೈದ್ಯರು, ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ತಿಳಿಸಿದರು.

‘ಊರಿಗೆ ಬಾ ಎಂದಿದ್ದಕ್ಕೆ ಮಾಂಗಲ್ಯ ಕಿತ್ತುಕೊಟ್ಟಿದ್ದಳು. ಅದರಿಂದ ಸಿಟ್ಟಾಗಿ ಈ ರೀತಿ ಮಾಡಿದೆ’ ಎಂದು ಆರೋಪಿ ಹೇಳುತ್ತಿದ್ದಾನೆ. ಆತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏ. 27ರವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT