ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿದು ಕುಪ್ಪಳಿಸಿದ ಮೇಯರ್, ಆಯುಕ್ತ

ಸ್ವಚ್ಛ ಸರ್ವೇಕ್ಷಣ್‌ ಅಭಿಯಾನ ಜಾಗೃತಿ ಜಾಥಾ * ಹುರುಪು ತುಂಬಿದ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡು
Last Updated 25 ಜನವರಿ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಗೀತೆ ಮೊಳಗುತ್ತಿದ್ದಂತೆ ಎಂ.ಗೌತಮ್‍ಕುಮಾರ್ ಮತ್ತು ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಉತ್ಸಾಹದಿಂದ ಕುಣಿದರು. ಆಯುಕ್ತರ ಹುರುಪು ಕಂಡು ಪಾಲಿಕೆ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌ ಕೂಡಾ ಅವರ ಜೊತೆ ಸೇರಿಕೊಂಡರು.

ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಸ್ವಚ್ಛ ಸರ್ವೇಕ್ಷಣ್‌ ಅಭಿಯಾದ ಕುರಿತು ಜಾಗೃತಿ ಮೂಡಿಸಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮತ್ತು ರಸ್ತೆ ಓಟ.

ಕಬ್ಬನ್‍ ಪಾರ್ಕ್ ಮುಖ್ಯದ್ವಾರದ ಬಳಿ ಮೇಯರ್ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾ ಹೊರಡುತ್ತಿದ್ದಂತೆಯೇ ‘ಆಕಸ್ಮಿಕ’ ಚಿತ್ರದಲ್ಲಿ ವರನಟ ಡಾ.ರಾಜ್‌ಕುಮಾರ್ ಹಾಡಿರುವ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡು ಮೊಳಗಿತು. ಈ ಹಾಡಿಗೆ ಮೇಯರ್‌ ಹೆಜ್ಜೆ ಹಾಕಿದರು. ಜತೆಗೆ ಆಯುಕ್ತರನ್ನೂ ಕುಣಿಯುವಂತೆ ಹುರಿದುಂಬಿಸಿದರು. ಸ್ವತಃ ಮೇಯರ್‌ ಮತ್ತು ಆಯುಕ್ತರು ನೃತ್ಯ ಮಾಡಿದ್ದು ಜಾಥಾದಲ್ಲಿ ಭಾಗವಹಿಸಿದ ಇತರ ಬಿಬಿಎಂಪಿ ನೌಕರರ ಹುರುಪನ್ನು ಮತ್ತಷ್ಟು ಹೆಚ್ಚಿಸಿತು. ಅವರೆಲ್ಲರೂ ಈ ಹಾಡಿಗೆ ನರ್ತಿಸಿದರು.

‘ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಗರಕ್ಕೆ ಮೊದಲ ಸ್ಥಾನ ಸಿಗುವ ತನಕ ಪಾಲಿಕೆ ಅಧಿಕಾರಿಗಳೊಂದಿಗೆ ನಾಗರಿಕರು ಕೈಜೋಡಿಸಬೇಕು’ ಎಂದು ಮೇಯರ್‌ ಮನವಿ ಮಾಡಿದರು.

ಡಿ.ರಂದೀಪ್ ಮಾತನಾಡಿ, ‘ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ. ಈವರೆಗೆ 40 ಸಾವಿರ ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನೂ ಹೆಚ್ಚಿನ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು’ ಎಂದು ಕೋರಿದರು.

ಜಾಗೃತಿ ಜಾಥಾದಲ್ಲಿ ಬಿಬಿಎಂಪಿಯ ವಿವಿಧ ಕಾಲೇಜುಗಳು, ಮಹಾರಾಣಿ ಕಾಲೇಜು, ಗೃಹ ವಿಜ್ಞಾನ ಕಾಲೇಜು, ಜೈನ ವಿಶ್ವವಿದ್ಯಾಲಯ, ಬಿಷಪ್ ಕಾಟನ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT