ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಕೀ ತಯಾರಿಸಿ ಕಳ್ಳತನ: ಮೆಕ್ಯಾನಿಕ್ ಬಂಧನ

Last Updated 1 ಫೆಬ್ರುವರಿ 2022, 19:51 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಕೀ ತಯಾರಿಸಿ ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ಮುರಳಿ ಅಲಿಯಾಸ್ ಪ್ರಾಜೆಕ್ಟ್ ಎಂಬಾತನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಮುರಳಿ, ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್ ಆಗಿದ್ದ. ಬೆರಳಚ್ಚು ಸುಳಿವಿನಿಂದ ಆತನನ್ನು ಬಂಧಿಸಲಾಗಿದೆ. ₹ 59 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಕ್ಕಳನ್ನು ಶಾಲೆಗೆ ಬಿಡಲು ಪೋಷಕರು ಹೊರ ಹೋಗುತ್ತಿದ್ದ ಮನೆಗಳು, ರಂಗೋಲಿ ಹಾಕಿರದ ಹಾಗೂ ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಮನೆಗಳನ್ನು ಆರೋಪಿ ಗುರುತಿಸುತ್ತಿದ್ದ. ನಂತರ ನಕಲಿ ಕೀಗಳನ್ನು ಸಿದ್ಧಪಡಿಸುತ್ತಿದ್ದ. ನಂತರ, ಅಂಥ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ‘ ಎಂದೂ ತಿಳಿಸಿದರು.

‘2009ರಿಂದಲೇ ಅಪರಾಧ ಕೃತ್ಯ ಎಸಗುತ್ತಿರುವ ಆರೋಪಿ, ಇದುವರೆಗೂ 14 ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಪ್ರತಿಯೊಂದು ಕಳ್ಳತನವನ್ನೂ ಆರೋಪಿ, ಪ್ರಾಜೆಕ್ಟ್ ರೀತಿಯಲ್ಲಿ ಮಾಡುತ್ತಿದ್ದ. ಹೀಗಾಗಿ, ಆತನಿಗೆ ಪ್ರಾಜೆಕ್ಟ್ ಎಂಬ ಅಡ್ಡ ಹೆಸರಿದೆ’ ಎಂದೂ ಹೇಳಿದರು.

ಪೋಷಕರ ಹಿಂಬಾಲಿಸಿ ಸಂಚು: ‘ಮಕ್ಕಳನ್ನು ಶಾಲೆಗೆ ಬಿಡಲು ಕೆಲವರು, ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು. ಅವರು ಮನೆಗೆ ವಾಪಸು ಬರಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಅಂಥ ಪೋಷಕರನ್ನು ಹಿಂಬಾಲಿಸಿ ಆರೋಪಿ ಸಂಚು ರೂಪಿಸುತ್ತಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಮನೆ ಬಿಡುವ ಸಮಯ, ಶಾಲೆ ತಲುಪುವ ಸಮಯ ಹಾಗೂ ಮನೆಗೆ ವಾಪಸು ಬರುವ ಸಮಯವನ್ನು ಆರೋಪಿ ತಿಳಿದುಕೊಳ್ಳುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನಕಲಿ ಕೀ ಬಳಸಿ ಒಳನುಗ್ಗಿ ಕೃತ್ಯ ಎಸಗುತ್ತಿದ್ದ. ಬಳಿಕ ಗ್ಯಾರೇಜ್‌ಗೆ ಯಥಾಪ್ರಕಾರ ಹೋಗಿ ಮೆಕ್ಯಾನಿಕ್ ಆಗಿ ಕೆಲಸ ಮುಂದುವರಿಸುತ್ತಿದ್ದ‘ ಎಂದೂ ಹೇಳಿದರು.

‘2009ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರಲ್ಲಿ ಮುರಳಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದರು. ಬೆರಳಚ್ಚು ಸಂಗ್ರಹಿಸಿದ್ದರು. ಇತ್ತೀಚೆಗೆ ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಆಗಿತ್ತು. ಸ್ಥಳದಲ್ಲಿ ಸಿಕ್ಕ ಬೆರಳಚ್ಚು ಹೋಲಿಕೆ ಮಾಡಿದಾಗಲೇ ಆರೋಪಿ ಸಿಕ್ಕಿಬಿದ್ದ’ ಎಂದೂ ತಿಳಿಸಿದರು.

ಕದ್ದ ಚಿನ್ನ ಖರೀದಿಸಿದ್ದವನ ಬಂಧನ: ’ಆರೋಪಿ ಮುರಳಿ, ಕದ್ದ ಚಿನ್ನಾಭರಣವನ್ನು ಮಾರಿದ್ದ. ಅದರಿಂದ ಹಣ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನಿಂದ ಚಿನ್ನ ಖರೀದಿ ಮಾಡುತ್ತಿದ್ದ ಶಿವರಾಮ್ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT