ಮೆಡಿಕಲ್ ಸೀಟು ಅಕ್ರಮ; ಮತ್ತೊಂದು ಎಫ್‌ಐಆರ್

7

ಮೆಡಿಕಲ್ ಸೀಟು ಅಕ್ರಮ; ಮತ್ತೊಂದು ಎಫ್‌ಐಆರ್

Published:
Updated:

ಬೆಂಗಳೂರು: ವಿದೇಶದ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸುಮಾರು ₹ 40 ಕೋಟಿ ಸಂಗ್ರಹಿಸಿ ವೆಸ್ಟ್‌ಇಂಡೀಸ್‌ನಲ್ಲಿ ತಲೆಮರೆಸಿಕೊಂಡಿರುವ ಗೋಪಾಲ್‌ ವೆಂಕಟರಾವ್ ಅಲಿಯಾಸ್ ವೆಂಕಟ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಮಂಗಳವಾರ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

‘ವೆಂಕಟ್ ಹಾಗೂ ಆತನ ಗೆಳತಿ ಸಹಿಸ್ತಾ ಅಲಿಯಾಸ್ ಸುಮನ್ ಅವರು ನನ್ನ ಮಗನಿಗೆ ಅಮೆರಿಕ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ₹ 27 ಲಕ್ಷ ಪಡೆದು ಮೋಸ ಮಾಡಿದ್ದಾರೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ಟಿ.ರಾಮಸ್ವಾಮಿ ದೂರು ಕೊಟ್ಟಿದ್ದಾರೆ.

‘ನಗರದ ವಿವಿಧೆಡೆ  ಕನ್ಸಲ್ಟೆನ್ಸಿ ಕಂಪನಿಗಳನ್ನು ಪ್ರಾರಂಭಿಸಿ ವಂಚನೆಗಿಳಿದಿದ್ದ ವೆಂಕಟ್‌ನ ಅಕ್ಕನ ಗಂಡ ಏಡುಕೊಂಡಲು ಸೇರಿದಂತೆ ಆರು ಮಂದಿಯನ್ನು ಮಡಿವಾಳ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಅವರಲ್ಲಿ ಸುಮನ್ ಕೂಡ ಇದ್ದಾನೆ. ಮೊದಲು ಹುಡುಗಿಯಾಗಿದ್ದ (ಸಹಿಸ್ತಾ) ಆತ, ತನ್ನ ದೇಹದಲ್ಲಿ ಪುರುಷನ ಹಾರ್ಮೋನ್ ಪತ್ತೆಯಾಗಿದ್ದರಿಂದ ಆರು ತಿಂಗಳ ಹಿಂದೆ ಲಿಂಗಪರಿವರ್ತನೆ ಮಾಡಿಸಿಕೊಂಡು ಸುಮನ್ ಎಂದು ಹೆಸರು ಬದಲಾಯಿಸಿಕೊಂಡಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘2017ರ ಸೆ.1ರಂದು ಆಡುಗೋಡಿಯ ಕನ್ಸಲ್ಟೆನ್ಸಿ ಕಚೇರಿಗೆ ತೆರಳಿ ವೆಂಕಟ್‌ನನ್ನು ಭೇಟಿಯಾಗಿದ್ದೆ. ವಾಷಿಂಗ್ಟನ್ ಯೂನಿವರ್ಸಿಟಿ ಆಫ್ ಬಾರ್ಬಡಸ್‌ನಲ್ಲಿ ಮಗನಿಗೆ ಸೀಟು ಕೊಡಿಸುವುದಾಗಿ ಹಣ ಪಡೆದ ಆತ, ವಿಶ್ವವಿದ್ಯಾಲಯ ತೋರಿಸಿಕೊಂಡು ಬರುವುದಾಗಿ ಮಗನನ್ನು ವಾಷಿಂಗ್ಟನ್‌ಗೂ ಕರೆದುಕೊಂಡು ಹೋಗಿದ್ದ. ಅಲ್ಲಿ ಯಾವುದೋ ಹಳೆ ಕಟ್ಟಡ ತೋರಿಸಿ, ‘ಇದೇ ಯೂನಿವರ್ಸಿಟಿ’ ಎಂದು ಹೇಳಿದ್ದ. ಇದರಿಂದ ಅನುಮಾನಗೊಂಡ ನಾವು, ಹಣ ವಾಪಸ್ ಕೊಡುವಂತೆ ಕೇಳಿದ್ದೆವು. ಅದಕ್ಕೆ ವೆಂಕಟ್‌ ಹಾಗೂ ಸಹಿಸ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.’

‘ಆ ನಂತರದಿಂದ ಅವರ ಮೊಬೈಲ್‌ಗಳು ಸ್ವಿಚ್ಡ್‌ಆಫ್ ಆದವು. ಆಡುಗೋಡಿಯ ಕಚೇರಿಯೂ ಬಂದ್ ಆಯಿತು. ಅವರನ್ನು ಪತ್ತೆ ಮಾಡಿ ನನ್ನ ₹ 27 ಲಕ್ಷ ವಾಪಸ್ ಕೊಡಿಸಿ’ ಎಂದು ರಂಗಸ್ವಾಮಿ ದೂರಿನಲ್ಲಿ ಕೋರಿದ್ದಾರೆ. ಆಡುಗೋಡಿ ಪೊಲೀಸರು ಬಂಧಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !