ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜನರನ್ನು ಕಾಡುತ್ತಿದೆ ‘ಮನೋವ್ಯಾಧಿ’

ಕಳೆದ ನಾಲ್ಕು ವರ್ಷಗಳಲ್ಲಿ 37.71 ಲಕ್ಷ ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ
Published 21 ಜನವರಿ 2024, 19:28 IST
Last Updated 21 ಜನವರಿ 2024, 19:28 IST
ಅಕ್ಷರ ಗಾತ್ರ

ಬೆಂಗಳೂರು: ಕೌಟುಂಬಿಕ ಕಲಹ, ಆರ್ಥಿಕ ಸಂಕಷ್ಟ ಸೇರಿ ವಿವಿಧ ಕಾರಣಗಳಿಂದ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 37.71 ಲಕ್ಷ ಮಂದಿಗೆ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲಾಗಿದೆ.

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಮನೋಚೈತನ್ಯ’ ಕಾರ್ಯಕ್ರಮದ ಮೂಲಕ ಆಯ್ದ ಮಂಗಳವಾರ ಅಥವಾ ಶುಕ್ರವಾರ ತಜ್ಞ ಮನೋವೈದ್ಯರ ತಂಡ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಿದೆ. ಇದಲ್ಲದೆ, ‘ಕ್ಷೇಮ’ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಮಾನಸಿಕ ಅಸ್ವಸ್ಥರಿಗೆ ಆರೋಗ್ಯ ಇಲಾಖೆಯು ಚಿಕಿತ್ಸೆಯ ಜತೆಗೆ ಪುನರ್ವಸತಿ ಒದಗಿಸುತ್ತಿದೆ. ಕರ್ನಾಟಕ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆ (ಇ–ಮನಸ್) ಅಡಿ 2018–19ರಿಂದ ಈವರೆಗೆ ರಾಜ್ಯದ ವಿವಿಧ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ದೂರವಾಣಿ ಹಾಗೂ ಆನ್‌ಲೈನ್ ವ್ಯವಸ್ಥೆ ಮೂಲಕ ಮಾನಸಿಕ ಆರೋಗ್ಯ ಸಮಾಲೋಚನೆ ಪಡೆಯುತ್ತಿದ್ದಾರೆ.

ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್‌) ಪ್ರತಿನಿತ್ಯ ಸರಾಸರಿ 1,700 ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ರೋಗಿಗಳ ನಿರ್ವಹಣೆ ಸವಾಲಾಗಿ ಪರಿಣಮಿಸಿದ್ದರಿಂದ ಸಂಸ್ಥೆಯು ಮಾನಸಿಕ ಸಮಸ್ಯೆಗಳಿಗಾಗಿಯೇ ‘ಟೆಲಿ ಮನಸ್’ ಸಹಾಯವಾಣಿ ಪ್ರಾರಂಭಿಸಿದ್ದು, ಇದರ ಮೂಲಕ 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. 

ಆತ್ಮಹತ್ಯೆ ಸಾಧ್ಯತೆ: ನಿಮ್ಹಾನ್ಸ್ ಸಂಸ್ಥೆಯ ವಿಶ್ಲೇಷಣೆ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮೂರನೇ ಒಂದರಷ್ಟು ಮಂದಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಉಳಿದ ಎರಡು ಭಾಗದಷ್ಟು ಮಂದಿ ಆರ್ಥಿಕ ಸಮಸ್ಯೆ ಹಾಗೂ ಕುಟುಂಬದ ಬಾಂಧವ್ಯ ಕಡಿದುಕೊಳ್ಳುವಿಕೆಯಿಂದ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಕೂಡಾ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

‘ಬಹುತೇಕ ಎಲ್ಲ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಮನಸ್ಸನ್ನು ನಿಗ್ರಹವಿಟ್ಟುಕೊಂಡಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಬಹುದು. ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ನಗರೀಕರಣ, ಕೌಟುಂಬಿಕ ಸಮಸ್ಯೆ, ಒಂಟಿತನ, ವೃತ್ತಿ ಸ್ಥಳದಲ್ಲಿ ಮಾನಸಿಕ ಒತ್ತಡ ಸೇರಿ ವಿವಿಧ ಕಾರಣಗಳಿಂದ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಮಾನಸಿಕ ಅನಾರೋಗ್ಯವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಮಸ್ಯೆಗೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದೇ ಪರಿಹಾರ’ ಎಂದು ನಿಮ್ಹಾನ್ಸ್ ವೈದ್ಯರು ತಿಳಿಸಿದರು. 

ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಖಿನ್ನತೆ ಸೇರಿ ವಿವಿಧ ಮಾನಸಿಕ ಸಮಸ್ಯೆಗಳಿಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ.
ಡಾ. ಶಶಿಧರ್ ಎಚ್.ಎನ್. ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)

ಮನೋವೈದ್ಯರ ಹುದ್ದೆ ಖಾಲಿ

ಆರೋಗ್ಯ ಇಲಾಖೆಯಡಿ ಜಿಲ್ಲಾ ಆಸ್ಪತ್ರೆಗಳಿಗೆ ಮಂಜೂರಾಗಿದ್ದ 27 ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿ ಸೇರಿ ಒಟ್ಟು 71 ಹುದ್ದೆಗಳಲ್ಲಿ 19 ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಅದೇ ರೀತಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಂಜೂರಾಗಿದ್ದ 42 ಮನೋವೈದ್ಯರ ಹುದ್ದೆಗಳಲ್ಲಿ 11 ಖಾಲಿ ಉಳಿದಿದ್ದು 31 ಹುದ್ದೆಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಸೇರಿ ಒಟ್ಟು ಮಂಜೂರಾಗಿದ್ದ 244 ಹುದ್ದೆಗಳಲ್ಲಿ 212 ಹುದ್ದೆಗಳ ಭರ್ತಿಯಾಗಿದ್ದು ಉಳಿದ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT