ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

'ಟೆಲಿ ಮನಸ್‌’ಗೆ ಹೆಚ್ಚಿದ ಯುವ ಮನಸ್ಸಿನ ಕರೆ

15ರಿಂದ 30 ವರ್ಷದೊಳಗಿನವರಿಗೆ ಹೆಚ್ಚಿದ ಮಾನಸಿಕ ಸಮಸ್ಯೆ *ತಿಂಗಳಿಗೆ ಸರಾಸರಿ 9,500 ಕರೆ
Published 8 ಜೂನ್ 2024, 23:47 IST
Last Updated 8 ಜೂನ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ಕೌಟುಂಬಿಕ ಸಮಸ್ಯೆ, ಆರ್ಥಿಕ ಸಂಕಷ್ಟ, ಶೈಕ್ಷಣಿಕ ಒತ್ತಡ ಸೇರಿ ವಿವಿಧ ಕಾರಣಗಳಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕ ಸಮಸ್ಯೆಗೆ ಒಳಗುತ್ತಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ‘ಟೆಲಿ ಮನಸ್’ ಸಹಾಯವಾಣಿಗೆ ಬರುತ್ತಿದ್ದ ದೂರವಾಣಿ ಕರೆಗಳ ಸಂಖ್ಯೆ ಹೆಚ್ಚಳವಾಗಿದೆ. 

ಸಂಸ್ಥೆಯು ಈ ಸಹಾಯವಾಣಿಯನ್ನು 2022ರಲ್ಲಿ ಪ್ರಾರಂಭಿಸಿತ್ತು. ಆ ವೇಳೆ ಕೊರೊನಾ ಸೋಂಕಿತರು ಹಾಗೂ ಈ ಸಾಂಕ್ರಾಮಿಕ ರೋಗದ ವ್ಯತಿರಿಕ್ತ ಪರಿಣಾಮ ಎದುರಿಸಿದವರು ಹೆಚ್ಚಾಗಿ ಕರೆ ಮಾಡುತ್ತಿದ್ದರು. ಈ ಸೇವೆಯನ್ನು ಸಂಸ್ಥೆಯು ಮುಂದುವರಿಸಿ, ದೇಶದಾದ್ಯಂತ ವಿಸ್ತರಿಸಿದೆ. ವಿವಿಧ ಮಾನಸಿಕ ಸಮಸ್ಯೆಗಳಿಗೆ ಟೆಲಿ ಸಮಾಲೋಚನೆ ಮೂಲಕ ಪರಿಹಾರ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಸಹಾಯವಾಣಿಗೆ 15ರಿಂದ 30 ವರ್ಷದೊಳಗಿನವರು ಅಧಿಕ ಸಂಖ್ಯೆಯಲ್ಲಿ ಕರೆ ಮಾಡುತ್ತಿದ್ದಾರೆ. ಈ ವಯೋಮಾನದವರಿಂದ ಕಳೆದ ವರ್ಷ ತಿಂಗಳಿಗೆ ಸರಾಸರಿ ಮೂರು ಸಾವಿರ ಕರೆಗಳನ್ನು ಸ್ವೀಕರಿಸಲಾಗುತ್ತಿತ್ತು. ಈಗ ಆ ಸಂಖ್ಯೆ 9,500ಕ್ಕೆ ಏರಿಕೆಯಾಗಿದೆ. ಈವರೆಗೆ ಕರೆ ಮಾಡಿದವರಲ್ಲಿ 1.13 ಲಕ್ಷ ಮಂದಿ ಯುವಜನರಾಗಿದ್ದಾರೆ.

ಸಂಸ್ಥೆಯ ಬೆಂಗಳೂರು ಹಾಗೂ ಧಾರವಾಡದ ಕೇಂದ್ರದಲ್ಲಿ ಟೆಲಿ ಮನಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿಬಿ) ಈ ಸಹಾಯವಾಣಿಗೆ ತಾಂತ್ರಿಕ ನೆರವು ಒದಗಿಸುತ್ತಿದೆ. 

9.27 ಲಕ್ಷ ಕರೆಗಳು: ಇಲ್ಲಿನ ನಿಮ್ಹಾನ್ಸ್‌ಗೆ ಬರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಸಂಸ್ಥೆಯು 1,096 ಹಾಸಿಗೆಗಳನ್ನು ಒಳಗೊಂಡಿದ್ದು, ದೇಶದ ವಿವಿಧೆಡೆಯಿಂದ ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದಾರೆ. ಇದರಿಂದಾಗಿ ರೋಗಿಗಳ ದಟ್ಟಣೆ ಉಂಟಾಗುತ್ತಿದ್ದು, ಚಿಕಿತ್ಸೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್‌ ಕಾಣಿಸಿಕೊಳ್ಳುವ ಮೊದಲು ಸಂಸ್ಥೆಗೆ ಪ್ರತಿನಿತ್ಯ ಸರಾಸರಿ 1,400 ಹೊರರೋಗಿಗಳು ಬರುತ್ತಿದ್ದರು. ಈಗ ಆ ಸಂಖ್ಯೆ 2 ಸಾವಿರಕ್ಕೆ ಏರಿಕೆಯಾಗಿದೆ. ಹೊರರೋಗಿಗಳ ದಟ್ಟಣೆ ನಿವಾರಿಸುವುದು ಹಾಗೂ ಸುಲಭವಾಗಿ ವೈದ್ಯರ ಸಮಾಲೋಚನೆ ಒದಗಿಸುವುದು ಸಹಾಯವಾಣಿ ಪ್ರಾರಂಭದ ಮುಖ್ಯ ಉದ್ದೇಶವಾಗಿತ್ತು. ಈವರೆಗೆ ಒಟ್ಟು 9.27 ಲಕ್ಷ ಕರೆಗಳು ಸಹಾಯವಾಣಿಗೆ ಬಂದಿವೆ.

‘ಮಾನಸಿಕ ಆರೋಗ್ಯದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜಾಗೃತಿ ಮೂಡುತ್ತಿದೆ. ಇದರಿಂದಾಗಿ ಸಹಾಯವಾಣಿಗೂ ಮನೋವ್ಯಾಧಿಗೆ ಸಂಬಂಧಿಸಿದಂತೆ ಕರೆಗಳು ಬರುತ್ತಿವೆ. ಮಾನಸಿಕ ಆರೋಗ್ಯದ ಬಗ್ಗೆ ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಶಿಕ್ಷಣ ಸಂಸ್ಥೆಗಳು ಸೇರಿ ವಿವಿಧೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ನಿಮ್ಹಾನ್ಸ್ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ಸಿ. ತಿಳಿಸಿದರು. 

ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಯುವಜನರಿಂದಲೇ ಅಧಿಕ ಕರೆಗಳು ಬರುತ್ತಿವೆ
।ಟಿ.ಕೆ.ಶ್ರೀಕಾಂತ್ ಐಐಐಟಿ-ಬಿ ಪ್ರಧಾನ ತನಿಖಾಧಿಕಾರಿ 
20 ಭಾಷೆಗಳಲ್ಲಿ ಸೇವೆ
ಮಾನಸಿಕ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾದವರು ‘ಟೆಲಿ ಮನಸ್’ ಸಹಾಯವಾಣಿ ಮೂಲಕ ಉಚಿತವಾಗಿ ಸಲಹೆ ಪಡೆಯಬಹುದಾಗಿದೆ. ಈ ಸಹಾಯವಾಣಿ ಮೂಲಕ 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಒತ್ತಡಕ್ಕೆ ಒಳಗಾದವರು ವ್ಯಥೆಗೆ ಒಳಪಟ್ಟವರು ಕೌಟುಂಬಿಕ ಸಮಸ್ಯೆಗೆ ಒಳಗಾದವರು ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು ಆತ್ಮಹತ್ಯೆಯ ಆಲೋಚನೆ ಮಾಡುತ್ತಿರುವವರು ಮಾದಕ ವಸ್ತುಗಳ ಸೇವನೆಯ ವ್ಯಸನಕ್ಕೆ ಒಳಗಾದವರು ಜ್ಞಾಪಕ ಶಕ್ತಿ ತೊಂದರೆ ಇರುವವರು ಆರ್ಥಿಕ ಒತ್ತಡದಲ್ಲಿ ಇರುವವರು ಸೇರಿ ಇತರೆ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರೂ ಶುಲ್ಕರಹಿತ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಟೆಲಿ ಮನಸ್ ಸಹಾಯವಾಣಿ: 14416

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT