ಸೋಮವಾರ, ನವೆಂಬರ್ 18, 2019
24 °C
ಜವಳಿ ಉದ್ಯಮಿಯ ₹ 2.26 ಲಕ್ಷ ಕಳವು

ಎಫ್‌ಐಆರ್‌ನಲ್ಲಿ ‘ಸಿಐಡಿ’ ಶಂಕಿತ ಆರೋಪಿ!

Published:
Updated:

ಬೆಂಗಳೂರು: ಜವಳಿ ಉದ್ಯಮಿಯೊಬ್ಬರ ಕ್ರೆಡಿಟ್‌ ಕಾರ್ಡ್‌ನಿಂದ ಸೈಬರ್ ವಂಚಕರು ₹ 2.26 ಲಕ್ಷ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಸೈಬರ್‌ ಕ್ರೈಂ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ‘ಸಿಐಡಿ’ಯನ್ನು ಶಂಕಿತ ಆರೋಪಿ ಎಂದು ಉಲ್ಲೇಖಿಸಲಾಗಿದೆ!

ಜವಳಿ ಉದ್ಯಮಿ ಆದಿತ್ಯ ಜೈಪುರಿಯಾ (56) ಎಂಬುವವರು ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ ‘ಅನುಮಾನಿತರ ವ್ಯಕ್ತಿಯ ವಿವರಗಳು’ ಎಂಬ ಜಾಗದಲ್ಲಿ ಸಿಐಡಿ ಎಂದು ಬರೆಯಲಾಗಿದೆ.

ಆದಿತ್ಯ ಜೈಪುರಿಯಾ ಅವರು ವಿದೇಶಗಳಲ್ಲಿಯೂ ವ್ಯವಹಾರ ಹೊಂದಿದ್ದಾರೆ. ‘ನಾನು ಭಾರತದಲ್ಲಿದ್ದರೂ ನನ್ನ ಅಮೆರಿಕನ್ ಡಾಲರ್ಸ್‌ ಆ್ಯಂಡ್‌ ಕೆನಡಿಯನ್ ಡಾಲರ್ಸ್‌ ಕ್ರೆಡಿಟ್‌ ಕಾರ್ಡ್‌ನಿಂದ ಸಾಗರೋತ್ತರ ದೇಶಗಳಲ್ಲಿ ಆಗಸ್ಟ್‌ 18ರಂದು ಸಂಜೆ ಐದರಿಂದ ಆರು ಗಂಟೆ ಅವಧಿಯಲ್ಲಿ ₹ 2.26 ಲಕ್ಷ ಹಣವನ್ನು ಸೈಬರ್ ವಂಚಕರು ಡ್ರಾ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನ ಮೊಬೈಲ್‌ಗೆ ಹತ್ತು ಸಂದೇಶಗಳು ಬಂದಿವೆ. ಹೀಗಾಗಿ, ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆದಿತ್ಯಅವರು ಇದೇ 31ರಂದು ದೂರು ನೀಡಿದ್ದಾರೆ.

ಕಣ್ಣು ತಪ್ಪಿನಿಂದ ಆಗಿರುವ ಪ್ರಮಾದವಿದು ಎಂದೂ ಸಿಐಡಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಆದರೆ, ಈ ತಪ್ಪು ಮಾಹಿತಿ ಇರುವ ಎಫ್‌ಐಆರ್ ಪ್ರತಿಯನ್ನು ಸಿಐಡಿ ಪೊಲೀಸರು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ!

ಪ್ರತಿಕ್ರಿಯಿಸಿ (+)