ಸೋಮವಾರ, ಜುಲೈ 26, 2021
22 °C
ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಮಗಾರಿ ಸ್ಥಗಿತ– ಯೋಜನೆ ಮುಂದುವರಿಕೆಗೆ ಕಂಪನಿಗಳು ಉತ್ಸುಕ

ಗೊಟ್ಟಿಗೆರೆ–ನಾಗವಾರ ಮಾರ್ಗ: ಎರಡು ವರ್ಷ ವಿಳಂಬ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ನಮ್ಮ ಮೆಟ್ರೊ‘ ಎರಡನೇ ಹಂತದ ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿನ ಕಾಮಗಾರಿ ಪೈಕಿ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಆರು ತಿಂಗಳುಗಳೇ ಆಗಿವೆ.

ಈ ಕಾಮಗಾರಿ ಮುಂದುವರಿಸಲು ಈಗ ಏಳೆಂಟು ಕಂಪನಿಗಳು ಆಸಕ್ತಿ ತೋರಿಸಿವೆ. ಆದರೆ, ಯಾವುದೇ ಕಂಪನಿಗೆ ಗುತ್ತಿಗೆ ನೀಡಿದರೂ, ಕನಿಷ್ಠ 30 ತಿಂಗಳು ಸಮಯ ನೀಡಬೇಕಾಗುತ್ತದೆ. ಈ ಮುಖ್ಯರಸ್ತೆಯಲ್ಲಿನ ಕಾಮಗಾರಿ ಮುಗಿಯುವವರೆಗೆ ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಕಾರ್ಯಾಚರಣೆ ಪ್ರಾರಂಭವಾಗುವುದಿಲ್ಲ. ಹೀಗಾಗಿ, ಈ ಮಾರ್ಗವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವುದು ನಿಗದಿಗಿಂತ ಕನಿಷ್ಠ ಎರಡು ವರ್ಷ ವಿಳಂಬವಾಗುವ ಸಾಧ್ಯತೆ ಇದೆ.

ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಹಣಕಾಸಿನ ತೊಂದರೆಯ ಕಾರಣ ನಿಗದಿತ ಅವಧಿಯಲ್ಲಿ ಮುಗಿಸಬೇಕಾದಷ್ಟು ಕಾಮಗಾರಿ ಮುಗಿಸಿಲ್ಲ. ಕಳಪೆ ಕಾರ್ಯಾಚರಣೆ ನಡೆಸಿದ್ದಕ್ಕೆ ಈ ಟೆಂಡರ್‌ ಅನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ರದ್ದು ಮಾಡಿತ್ತು.

21 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 14 ಕಿ.ಮೀ. ಉದ್ದದ ಸುರಂಗ ಮಾರ್ಗವೂ ಬರುತ್ತದೆ. ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್‌ ಪಡೆದಿತ್ತು.

2019ರ ಡಿಸೆಂಬರ್‌ ವೇಳೆಗೆ ಶೇ 22ರಷ್ಟು ಸಿವಿಲ್ ಕಾಮಗಾರಿಯನ್ನು ಕಂಪನಿ ಪೂರ್ಣಗೊಳಿಸಿತ್ತು. 2021ರ ಫೆಬ್ರುವರಿಯಾದರೂ ಶೇ 37ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿತ್ತು. ಕಾಮಗಾರಿ ತೀರಾ ವಿಳಂಬವಾದ ಕಾರಣ ನಿಗಮವು ಕಂಪನಿಗೆ ನೋಟಿಸ್ ನೀಡಿತ್ತು. ಅವರಿಗೆ ನೀಡಿದ್ದ ಗುತ್ತಿಗೆ ರದ್ದು ಮಾಡಿ, ಹೊಸ ಟೆಂಡರ್‌ ಕರೆಯಲಾಗಿತ್ತು.

ಉತ್ಸುಕ:

ಸ್ಥಗಿತಗೊಂಡಿರುವ ಕಾಮಗಾರಿ ಮುಂದುವರಿಸಲು ಏಳೆಂಟು ಕಂಪನಿಗಳು ಉತ್ಸುಕವಾಗಿವೆ. ಈ ಪೈಕಿ, ಪ್ರಮುಖ ಮೂರು ಕಂಪನಿಗಳು ದಾಖಲೆ ಸಮೇತ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಅರ್ಜಿ ಸಲ್ಲಿಸಿವೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಆಫ್ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್‌, ಐಟಿಡಿ ಸಿಮೆಂಟೇಷನ್‌ ಇಂಡಿಯಾ ಲಿಮಿಟೆಡ್‌ ಹಾಗೂ ಜಿ.ಆರ್. ಇನ್‌ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ (ಜಿಆರ್‌ಐಎಲ್‌) ಕಂಪನಿಗಳು ಆಸಕ್ತಿ ತೋರಿವೆ. ಐಟಿಡಿ ಸಿಮೆಂಟೇಷನ್‌ ಹಾಗೂ ಆಫ್ಕಾನ್ಸ್‌ ಕಂಪನಿಗಳು ಈಗಾಗಲೇ ಬೇರೆ ಬೇರೆ ಮಾರ್ಗದ ಗುತ್ತಿಗೆ ಪಡೆದು, ಕೆಲಸ ಪ್ರಾರಂಭಿಸುತ್ತಿವೆ. ಐಟಿಟಿ ಸಿಮೆಂಟೇಷನ್‌ ಬೊಮ್ಮಸಂದ್ರ–ಬೊಮ್ಮನಹಳ್ಳಿ (ಹಳದಿ ಮಾರ್ಗ) ಮತ್ತು ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ (ನೇರಳೆ ಮಾರ್ಗ) ಲೈನ್‌ನ ಗುತ್ತಿಗೆ ಪಡೆದಿದ್ದರೆ, ಆಫ್ಕಾನ್ಸ್‌ ಕಂಪನಿಯು ಡೇರಿ ವೃತ್ತ ಮತ್ತು ರಾಷ್ಟ್ರೀಯ ಮಿಲಿಟರಿ ಶಾಲೆ (ವೆಲ್ಲಾರ ಜಂಕ್ಷನ್‌) ಹಾಗೂ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಹಾಗೂ ಕಾಡುಬೀಸನಹಳ್ಳಿ ಮಾರ್ಗ ನಿರ್ಮಾಣದ ಗುತ್ತಿಗೆ ಪಡೆದಿದೆ.

ಜಿಆರ್‌ಐಎಲ್‌ ಇದೇ ಮೊದಲ ಬಾರಿಗೆ ‘ನಮ್ಮ ಮೆಟ್ರೊ’ ಮಾರ್ಗ ನಿರ್ಮಾಣಕ್ಕೆ ಅರ್ಜಿ ಹಾಕಿದೆ. ಹಲವು ರಸ್ತೆ ಮತ್ತು ಹೆದ್ದಾರಿ ನಿರ್ಮಾಣಗಳಲ್ಲಿ ಅನುಭವ ಹೊಂದಿರುವ ಈ ಕಂಪನಿ, ಈಗ ರೈಲ್ವೆ ನಿರ್ಮಾಣ ವಲಯಕ್ಕೂ ಕಾಲಿಟ್ಟಿದೆ. 

ಬನ್ನೇರುಘಟ್ಟ ಮಾರ್ಗದಲ್ಲಿ ಇನ್ನೂ ಶೇ 63ರಷ್ಟು ಕೆಲಸ ಬಾಕಿ ಇದೆ. ತುಂಬಾ ವೇಗವಾಗಿ ಕಾಮಗಾರಿ ಮುಂದುವರಿಸುವ, ಗುಣಮಟ್ಟ ಕಾಪಾಡಿಕೊಳ್ಳುವಂತಹ ಕಂಪನಿಗೆ ಗುತ್ತಿಗೆ ನೀಡಬೇಕು ಎಂದು ರೈಲ್ವೆ ಕಾರ್ಯಕರ್ತರು ಒತ್ತಾಯಿಸಿದರು.

’2017ರಲ್ಲಿಯೇ ಕಾಮಗಾರಿ ಪ್ರಾರಂಭವಾಗಿದ್ದರೂ ಈವರೆಗೆ ಶೇ 50ರಷ್ಟು ಕಾಮಗಾರಿಯೂ ಮುಕ್ತಾಯಗೊಂಡಿಲ್ಲ. ಯಾವುದೇ ಕಂಪನಿಗೂ ಗುತ್ತಿಗೆ ನೀಡಿದರೂ, ಚುರುಕಿನಿಂದ ಕಾಮಗಾರಿ ಮುಗಿಸಲು ಬಿಎಂಆರ್‌ಸಿಎಲ್‌ ಕ್ರಮ ಕೈಗೊಳ್ಳಬೇಕು. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಮಗಾರಿ ಬೇಗ ಮುಗಿಯದಿದ್ದರೆ, ಇಡೀ ಈ ಮಾರ್ಗದಲ್ಲಿಯೇ ಸಂಚಾರ ಆರಂಭಿಸಲು ಸಾಧ್ಯವಾಗುವುದಿಲ್ಲ. ಕನಿಷ್ಠ ಎರಡು ವರ್ಷ ನಿಧಾನವಾಗುವ ಸಾಧ್ಯತೆ ಇದೆ’ ಎಂದು ರೈಲ್ವೆ ಕಾರ್ಯಕರ್ತ ಸಂಜೀವ್ ದ್ಯಾಮಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಎತ್ತರಿಸಿದ ಮಾರ್ಗ ಸಹಿತ ಇಡೀ ಮಾರ್ಗ ನಿರ್ಮಾಣಕ್ಕೆ ₹11,500 ಕೋಟಿ ವೆಚ್ಚವಾಗಲಿದೆ. ಕಾಮಗಾರಿ ವಿಳಂಬವಾದಷ್ಟೂ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಹೆಚ್ಚು ಕಾರ್ಮಿಕರನ್ನು ನಿಯೋಜಿಸಿ, ಬೇಗ ಕಾಮಗಾರಿ ಪೂರ್ಣಗೊಳಿಸುವಂತಹ ಕಂಪನಿಗೆ ಗುತ್ತಿಗೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.


ಅಂಕಿಅಂಶ

2025ಕ್ಕೆ ಮುಂದೂಡಿಕೆ:

ಗೊಟ್ಟಿಗೆರೆಯಿಂದ ಸ್ವಾಗತ್‌ ಕ್ರಾಸ್‌ವರೆಗೆ ವಯಡಕ್ಟ್‌ ಮತ್ತು ಐದು ನಿಲ್ದಾಣಗಳ ನಿರ್ಮಾಣ ಹಾಗೂ ಕೊತ್ತನೂರು ಡಿಪೊ ನಿರ್ಮಾಣ ಗುತ್ತಿಗೆಯನ್ನು ಇದು ಹೊಂದಿದೆ. ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆ.ಪಿ.ನಗರ 4ನೇ ಹಂತ ಹಾಗೂ ಸ್ವಾಗತ್ ಕ್ರಾಸ್‌ ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ. 2023ರ ಡಿಸೆಂಬರ್ ವೇಳೆಗೆ ಈ ಕಾಮಗಾರಿ ಮುಗಿಯಬೇಕಿತ್ತು. ಅದು ಈಗ 2025ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಕೆಂಗೇರಿ ಮಾರ್ಗ: ಇದೇ 27ಕ್ಕೆ ಪರಿಶೀಲನೆಗೆ ಸಿದ್ಧ

‘ನಮ್ಮ ಮೆಟ್ರೊ‘ ಎರಡನೇ ಹಂತದಲ್ಲಿ ಮೈಸೂರು ರಸ್ತೆಯ ವಿಸ್ತರಿತ ಮಾರ್ಗದಲ್ಲಿ ಜುಲೈ ಮೊದಲ ವಾರದಿಂದ ಮೆಟ್ರೊ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದ್ದು, ಈ ಮಾರ್ಗವನ್ನು ಇದೇ 27ಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಪರಿಶೀಲನೆ ನಡೆಸಲಿದ್ದಾರೆ.

ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗಿನ 7.53 ಕಿ.ಮೀ. ಉದ್ದದ ಮಾರ್ಗದಲ್ಲಿ ಈಗಾಗಲೇ ಭೌತಿಕ ಕಾಮಗಾರಿ ಪೂರ್ಣಗೊಂಡಿದೆ. ಸಿಗ್ನಲಿಂಗ್, ದೂರಸಂವಹನ ಸಂಬಂಧಿತ ವ್ಯವಸ್ಥೆ ಅಳವಡಿಕೆಯೂ ಬಹುತೇಕ ಪೂರ್ಣಗೊಂಡಿದೆ.

‘ಸಿಆರ್‌ಎಸ್‌ಗೆ ಕಾಮಗಾರಿ ಪ್ರಗತಿಯ ಕುರಿತ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಕೆಲವು ಅಂಶಗಳ ಬಗ್ಗೆ ಸಿಆರ್‌ಎಸ್‌ ಸ್ಪಷನೆ ಕೇಳಿದೆ. ಅದಕ್ಕೆ ನಾವು ಪ್ರತಿಕ್ರಿಯೆ ನೀಡಬೇಕು. ಪ್ರತಿಕ್ರಿಯೆ ನೀಡಿದ ಕೆಲವೇ ದಿನಗಳಲ್ಲಿ ಸಿಆರ್‌ಎಸ್‌ ಪರಿಶೀಲನೆಯ ದಿನಾಂಕವನ್ನು ತಿಳಿಸಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಯೊಬ್ಬರು ತಿಳಿಸಿದರು.

‘ಇಡೀ ಮಾರ್ಗ ಪರಿಶೀಲನೆಗೆ ಸಿದ್ಧವಾಗಿದೆ. ಉಳಿದ ಸಣ್ಣ–ಪುಟ್ಟ ಕೆಲಸಗಳನ್ನು ಯಾವುದೇ ಕ್ಷಣದಲ್ಲಿ ಬಗೆಹರಿಸಬಹುದಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಯಾವುದಾದರೂ ಸಲಹೆ ನೀಡಿದರೆ, ಪ್ರಶ್ನೆ ಕೇಳಿದರೆ ಪರಿಹರಿಸಲು ಅಥವಾ ಸಲಹೆ ಪರಿಗಣಿಸುವ ಕೆಲಸ ನಿಗಮ ಮಾಡಲಿದೆ. ಜುಲೈನಲ್ಲಿ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಈ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತವಾದರೆ ನಿತ್ಯ 75 ಸಾವಿರ ಜನ ಪ್ರಯಾಣಿಸುವ
ಸಾಧ್ಯತೆ ಇದೆ. ಈ ವಿಸ್ತರಿತ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ನಿಲ್ದಾಣ ಹಾಗೂ ಕೆಂಗೇರಿ ಮೆಟ್ರೊ ನಿಲ್ದಾಣ ಬರಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು