ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮರಾಜ ರಸ್ತೆಯಲ್ಲಿ ಕಾಮಗಾರಿ l ಸಿಬಿಡಿ ಪ್ರದೇಶದಲ್ಲಿ ಅಂಗಡಿಗಳು ಭಣ ಭಣ!

ಬಿಎಂಆರ್‌ಸಿಎಲ್– ಪೊಲೀಸರ ಅವೈಜ್ಞಾನಿಕ ಸಂಚಾರ ನಿರ್ಬಂಧ| ಕಬ್ಬನ್‌ ರಸ್ತೆಯಲ್ಲಿ ಹೆಚ್ಚಿದ ದಟ್ಟಣೆ
Last Updated 18 ಜೂನ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ‘ ಸುರಂಗ ಮಾರ್ಗದ ಕಾಮಗಾರಿಗಾಗಿ ಎಂ.ಜಿ.ರಸ್ತೆಗೆ ಹೊಂದಿಕೊಂಡಿರುವ ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ ಮೂರು ದಿನವಾಗಿದ್ದು, ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿಯ (ಸಿಬಿಡಿ) ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿದೆ.

ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ ನಡುವೆ ಸುರಂಗ ಮಾರ್ಗ ಹಾಗೂ ನಿಲ್ದಾಣಗಳ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಕಾಮಗಾರಿಗೆ ಸಂಬಂಧವೇ ಇಲ್ಲದ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದ್ದು, ಕೇಂದ್ರ ವಾಣಿಜ್ಯ ಪ್ರದೇಶಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಅಕಸ್ಮಾತ್‌ ಬರುವವರೂ ವಾಹನಗಳನ್ನು ನಿಲ್ಲಿಸಲು ಪರದಾಡುವಂತಾಗಿದೆ. ಇದರಿಂದಾಗಿ ಅಂಗಡಿಗಳಲ್ಲಿ ಗ್ರಾಹಕರೇ ಇಲ್ಲದಂತಾಗಿದೆ.

ಸಿಲಿಕಾನ್ ಸಿಟಿಯ ಕೇಂದ್ರ ಸ್ಥಾನದಲ್ಲಿರುವ ಎಂ.ಜಿ.ರಸ್ತೆ, ಚರ್ಚ್‌ ಸ್ಟ್ರೀಟ್, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪ್ರದೇಶಗಳಲ್ಲಿ ನಿತ್ಯವೂ ವ್ಯಾ‍ಪಾರ, ವಾಣಿಜ್ಯ ಚಟುವಟಿಕೆ ಜೋರಾಗಿರುತ್ತದೆ. ಕಾಮಗಾರಿ ನೆಪದಲ್ಲಿ ಬಿಎಂಆರ್‌ಸಿಎಲ್– ಪೊಲೀಸರು ಮಾಡಿರುವ ಅವೈಜ್ಞಾನಿಕ ಸಂಚಾರ ನಿರ್ಬಂಧದಿಂದ ಈ ಪ್ರದೇಶಗಳಲ್ಲಿ ವಹಿವಾಟು ಕುಸಿದಿದೆ.

‘ಪ್ರತಿಷ್ಠಿತ ಅಂಗಡಿಗಳು ಇರುವುದು ಎಂ.ಜಿ.ರಸ್ತೆಯಲ್ಲಿ. ಇದೀಗ ಪೊಲೀಸರು, ರಸ್ತೆ ಅಕ್ಕ–ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸದಂತೆ ನಿಷೇಧಿಸಿದ್ದಾರೆ. ಎಲ್ಲೋ ನಡೆಯುವ ಕಾಮಗಾರಿಗಾರಿಗೆ ಇನ್ನೆಲ್ಲೋ ವಾಹನಗಳ ನಿಲುಗಡೆ ಬಂದ್ ಮಾಡಲಾಗಿದೆ. ಇದು ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ’ ಎಂದು ಸೀರೆ ಮಾರಾಟದ ಅಂಗಡಿ ಉದ್ಯೋಗಿ ಶಿವರಾಜ್ ಹೇಳಿದರು.

‘ಕಾಮರಾಜ ರಸ್ತೆಯಲ್ಲಿ ಸಂಚಾರ ನಿರ್ಬಂಧದಿಂದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ದಟ್ಟಣೆ ಪ್ರಮಾಣ ಕಡಿಮೆ ಆಗಿದೆ. ಆದರೂ ಈ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಪೊಲೀಸರು ಅವಕಾಶ ನೀಡಿಲ್ಲ. ಈ ರಸ್ತೆಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೇ ಹೊರಟು ಹೋಗುತ್ತಿದ್ದಾರೆ’ ಎಂದರು.

ಕಬ್ಬನ್‌ ರಸ್ತೆಯಲ್ಲಿ ಹೆಚ್ಚಿದ ದಟ್ಟಣೆ: ಕ್ವೀನ್ಸ್‌ ರಸ್ತೆಯಿಂದ ಬರುವ ವಾಹನಗಳು ಕಬ್ಬನ್ ರಸ್ತೆ ಮೂಲಕ ಮಣಿಪಾಲ್‌ ಸೆಂಟರ್‌ವರೆಗೆ ಸಾಗುತ್ತವೆ. ಈ ಭಾಗದಲ್ಲಿ ದಟ್ಟಣೆ ವಿಪರೀತವಾಗಿದೆ. ಅದು ಸುತ್ತಮುತ್ತಲ ರಸ್ತೆಗಳ ಸಂಚಾರದ ಮೇಲೂ ಪರಿಣಾಮ ಬೀರಿದೆ. ಕಬ್ಬನ್ ರಸ್ತೆಯಲ್ಲಿ ಬರುವ ವಾಹನಗಳು ಕಾಮರಾಜ ರಸ್ತೆಯಲ್ಲಿ ಸಾಗಿ ಬ್ರಿಗೇಡ್‌ ರಸ್ತೆ ಮೂಲಕ ಕೋರಮಂಗಲದತ್ತ ಹೋಗುತ್ತಿದ್ದವು. ಈಗ ಸಂಚಾರ ನಿರ್ಬಂಧದಿಂದಾಗಿ, ಮಣಿಪಾಲ್‌ ಸೆಂಟರ್‌ನತ್ತ ಸಾಗಿ ಅಲ್ಲಿಂದ ಮೆಯೋಹಾಲ್ ಕೋರ್ಟ್‌ ರಸ್ತೆ ಮೂಲಕ ಹೊಸೂರು ರಸ್ತೆ ತಲುಪುತ್ತಿವೆ. ಮೆಜೆಸ್ಟಿಕ್‌ನಿಂದ ಹೊಸೂರಿಗೆ ಹೋಗುವ ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. ಕಾಮಗಾರಿ ಶುರುವಾದಾಗಿನಿಂದ ಈ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಲೇ ನಿಲ್ಲುತ್ತಿರುವುದು ಕಂಡುಬರುತ್ತಿದೆ.

ಅನಿಲ್ ಕುಂಬ್ಳೆ ವೃತ್ತ, ಸೆಂಟ್ರಲ್‌ ಸ್ಟ್ರೀಟ್, ಲೇಡಿ ಕರ್ಜನ್ ರಸ್ತೆ, ಯೂನಿಯನ್ ಸ್ಟ್ರೀಟ್, ಕನ್ನಿಂಗ್‌ಹ್ಯಾಮ್ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲೂ ದಟ್ಟಣೆ ಹೆಚ್ಚಾಗಿದೆ.

ಕಷ್ಟಪಡುತ್ತಿರುವ ಪಾದಚಾರಿಗಳು: ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಾಮರಾಜ ರಸ್ತೆಯ ಎರಡೂ ಭಾಗದಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಕಾಮರಾಜ ರಸ್ತೆಯಿಂದ ಎಂ.ಜಿ.ರಸ್ತೆಗೆ ಬರುವ ಪಾದಚಾರಿಗಳು ಬ್ಯಾರಿಕೇಡ್‌ ದಾಟಲು ಕಷ್ಟಪಡುತ್ತಿದ್ದಾರೆ.

‘ಕಮರ್ಷಿಯಲ್ ಸ್ಟ್ರೀಟ್‌ನಿಂದ ಎಂ.ಜಿ. ರಸ್ತೆಗೆ ಹಾಗೂ ಎಂ.ಜಿ.ರಸ್ತೆಯಿಂದ ಕಮರ್ಷಿಯಲ್ ಸ್ಟ್ರೀಟ್‌ಗೆ ನಡೆದುಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚು. ಈಗ ಕಾಮರಾಜ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಆ ರಸ್ತೆ ಫುಟ್‌ಪಾತ್‌ ಮೇಲೆ ಸಾರ್ವಜನಿಕರು ಓಡಾಡುತ್ತಿದ್ದಾರೆ. ಕಾಮಗಾರಿಗಾಗಿ ಹಾಕಿರುವ ಬ್ಯಾರಿಕೇಡ್‌ಗಳು ಅವರಿಗೆ ಅಡ್ಡಿ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಪಾದಚಾರಿ ರಘುವೀರ್ ಹೇಳಿದರು.

ಆಟೊ ಪ್ರಯಾಣಿಕರಿಗೆ ಬರೆ
ಕಾಮರಾಜ ರಸ್ತೆ ಸಂಚಾರ ನಿರ್ಬಂಧದ ಬಿಸಿ ಆಟೊ ಪ್ರಯಾಣಿಕರಿಗೂ ತಟ್ಟಿದೆ. ನಿಮಿಷಗಳಲ್ಲಿ ತಲುಪಬೇಕಾದ ಸ್ಥಳಕ್ಕೆ ಆಟೊಗಳು ಸುತ್ತಿಕೊಂಡು ಬರುತ್ತಿದ್ದು, ಪ್ರಯಾಣಿಕರು ಹೆಚ್ಚಿನ ಪ್ರಯಾಣ ದರ ಪಾವತಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಅನಿಲ್‌ ಕುಂಬ್ಳೆ ವೃತ್ತದಿಂದ ಕಾವೇರಿ ಎಂಪೋರಿಯಂವರೆಗಿನ ರಸ್ತೆಯಲ್ಲಿ ಆಟೊ ಸಂಚಾರ ನಿಷೇಧಿಸಿ ವರ್ಷವಾಗಿದೆ. ಕಾಮಗಾರಿ ಆರಂಭವಾದ ನಂತರವಾದರೂ ಪೊಲೀಸರು ನಿಷೇಧವನ್ನು ಹಿಂಪಡೆಯಬೇಕಿತ್ತು. ಆದರೆ, ಆ ಕೆಲಸವನ್ನು ಅವರು ಮಾಡಿಲ್ಲವೆಂದು ಅನೇಕರು ಆರೋಪಿಸುತ್ತಾರೆ.

‘ಕ್ವೀನ್ಸ್‌ ರಸ್ತೆಯಿಂದ ಸೆಂಟ್ರಲ್‌ ಸ್ಟ್ರೀಟ್ ರಸ್ತೆ ಮೂಲಕ ಅನಿಲ್ ಕುಂಬ್ಳೆ ವೃತ್ತಕ್ಕೆ ಬಂದು ಎಂ.ಜಿ.ರಸ್ತೆ ತಲುಪಬಹುದು. ಆದರೆ, ಈ ಮಾರ್ಗದಲ್ಲಿ ಆಟೊ ನಿಷೇಧಿಸಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ ಆಟೊದವರು ಬಳಸಿಕೊಂಡು ಎಂ.ಜಿ. ರಸ್ತೆಗೆ ಬರುತ್ತಿದ್ದಾರೆ. ₹ 25 ರೂಪಾಯಿ ಮೀಟರ್‌ ದರ ಆಗುವ ಜಾಗದಲ್ಲಿ ₹ 50 ಪಾವತಿಸಬೇಕಾದ ಸ್ಥಿತಿ ಬಂದಿದೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ಕವಿತಾ ಅಳಲು ತೋಡಿಕೊಂಡರು.

ಕೆಲವರಿಗೆ ನಿಯಮಬಾಹಿರ ರಿಯಾಯಿತಿ: ಆರೋಪ
ಕಾವೇರಿ ಎಂಪೋರಿಯಂ ವೃತ್ತದಿಂದ ಅನಿಲ ಕುಂಬ್ಳೆ ವೃತ್ತದವರೆಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆಯಾಗಿದ್ದು ಕೆಲವರಿಗೆ ನಿಯಮಬಾಹಿರವಾಗಿ ವಾಹನಗಳನ್ನು ನಿಲ್ಲಿಸಲು ಪೊಲೀಸರೇ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದ ಆರೋಪವಿದೆ.

‘ಎಂ.ಜಿ.ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದಿಂದ ಎಸ್‌ಬಿಐ ಬ್ಯಾಂಕ್‌ವರೆಗೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಅಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಿಲ್ಲ. ಆದರೆ, ಎಸ್‌ಬಿಐ ಬ್ಯಾಂಕ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಿದ್ದು ಖಂಡನೀಯ’ ಎಂದು ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT