ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರು ಶಿಕ್ಷಣದಿಂದ ಸಬಲರಾಗಬೇಕು: ಬಸವರಾಜ ಬೊಮ್ಮಾಯಿ

ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಟ್ಟಡ ಉದ್ಘಾಟನೆ
Last Updated 21 ನವೆಂಬರ್ 2022, 18:46 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಪಸಂಖ್ಯಾತರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದ ಮೂಲಕವೇ ಸಬಲರಾಗಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಶೇಷಾದ್ರಿಪುರದ ಸುಬೇದಾರ ಛತ್ರಂ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಲವರು ಅಲ್ಪಸಂಖ್ಯಾತರನ್ನು ದೀರ್ಘ ಕಾಲದಿಂದಲೂ ಕತ್ತಲಲ್ಲಿ ಇರಿಸಿದ್ದಾರೆ. ಅವರು ಹೆಗಲ ಮೇಲೆ ಕೈಹಾಕಿ ಮಾತನಾಡಿದಷ್ಟಕ್ಕೇ ತೃಪ್ತರಾಗಬೇಡಿ. ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ, ಮುಂದಿನ ಹೆಜ್ಜೆ ಇಡಿ’ ಎಂದರು.

‘ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಾಲೆಗೆ ಹೋಗಿ ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಸ್ಪ್ಯಾನರ್‌ ಹಿಡಿದು ಗ್ಯಾರೇಜ್‌
ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗೋಧಿ, ಜೋಳ, ರಾಗಿ ಮೂಟೆ ಹೊರುವ ಹಮಾಲಿಗಳಾಗಿ ದುಡಿಯುತ್ತಿ
ದ್ದಾರೆ. ಇತರರಂತೆ ವಿದ್ಯಾವಂತರಾಗಿ ಸ್ವಾಭಿಮಾನದಿಂದ ಬದುಕಬೇಕು. ಸಮಾಜದ ಮುಖ್ಯವಾಹಿನಿಯ ಜತೆ ಸಾಗಬೇಕು’ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಹೆಚ್ಚು ಆಸಕ್ತಿ ತೋರುತ್ತಿರುವುದು ಸಂತೋಷದ ಬೆಳವಣಿಗೆ. ಅವರಲ್ಲಿನ ಹೆಣ್ಣು ಮಕ್ಕಳು ಬುದ್ಧಿವಂತರಿದ್ದಾರೆ. ಅವಕಾಶ ದೊರಕಿದರೆ ಇತರರಂತೆ ಅವರೂ ಸಾಧಿಸಿ ತೋರಿಸುತ್ತಾರೆ ಎಂದರು.

ಅಲ್ಪಸಂಖ್ಯಾತರ ಮಕ್ಕಳಿಗೆ ಅಬ್ದುಲ್‌ ಕಲಾಂ ಶಾಲೆಗಳ ಮೂಲಕ ಸಿಬಿಎಸ್‌ಇ ಪಠ್ಯಕ್ರಮದಡಿ ಶಿಕ್ಷಣ ನೀಡುತ್ತಿರುವ ಏಕೈಕ ರಾಜ್ಯ ಕರ್ನಾಟಕ. ಅಲ್ಪಸಂಖ್ಯಾತರ ಚಾಂಪಿಯನ್ನರು ಎಂದು ಹೇಳಿಕೊಳ್ಳುವವರೇ ಸರ್ಕಾರದ ನೇತೃತ್ವ ವಹಿಸಿದ್ದಾಗ ಈ ಸಮುದಾಯದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಪರಿಹರಿಸಲಿಲ್ಲ. ತಮ್ಮ ಸರ್ಕಾರ 624 ಶಿಕ್ಷಕರನ್ನು ನೇಮಿಸಿದೆ. ಮಕ್ಕಳ ವಿದೇಶಿ ವ್ಯಾಸಂಗ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಪುನರ್‌ ಆರಂಭಿಸಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 1,460 ಕೋಟಿ ಮೊತ್ತದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.

ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಅರವಿಂದ ಬೆಲ್ಲದ, ರಾಜು ಗೌಡ, ವಿಧಾನ ಪರಿಷತ್‌ ಸದಸ್ಯ ಎನ್. ರವಿಕುಮಾರ್‌, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶರವಣ, ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಶಾಫಿ ಸಅದಿ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರವೂಫುದ್ದೀನ್‌ ಕಚೇರಿವಾಲೆ, ವಕ್ಫ್‌ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಝೀರ್‌ ಉಪಸ್ಥಿತರಿದ್ದರು.

‘ಅಲ್ಪಸಂಖ್ಯಾತರ ವಿರೋಧಿಯಲ್ಲ’

‘ನಮ್ಮ ಸರ್ಕಾರದ ಬಗ್ಗೆ ಬಹಳ ಟೀಕೆ ಮಾಡುತ್ತಾರೆ? ಆದರೆ, ನಮ್ಮ ಹಣಕಾಸು ಇಲಾಖೆ ಕಾರ್ಯದರ್ಶಿ ಹೆಸರು ಜಾಫರ್‌. ಕೋವಿಡ್‌ ಅವಧಿಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದವರು ಜಾವೇದ್‌ ಅಖ್ತರ್‌. ಈಗ ಬೆಂಗಳೂರು ನಗರ ಸಂಚಾರ ನಿರ್ವಹಣೆಗೆ ವಿಶೇಷ ಆಯುಕ್ತರನ್ನಾಗಿ ನೇಮಿಸಿರುವುದು ಸಲೀಂ ಅವರನ್ನು. ನಾವು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇವಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT