ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೌತುಕಕ್ಕೆ ಆಟಿಕೆಗಳೇ ಕನ್ನಡಿ: ವಿಜ್ಞಾನಿ ಅರುಣ್‌ ಗುಪ್ತಾ

ನೆಹರೂ ತಾರಾಲಯದಲ್ಲಿ ಆಟಿಕೆಗಳ ಮೂಲಕ ವಿಜ್ಞಾನದ ಮಾದರಿ ಪ್ರದರ್ಶನ
Last Updated 19 ಆಗಸ್ಟ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳು ಆಟದ ಸಾಮಾನುಗಳನ್ನು ಹಾಳು ಮಾಡಲು ಕಾರಣ ಏನು ಗೊತ್ತಾ. ಅದರೊಳಗಿರುವ ವಸ್ತುಗಳನ್ನು ಬಿಚ್ಚಿ ನೋಡುವ ಕೌತುಕವೇ ಅವರಿಂದ ಆ ಕೆಲಸ ಮಾಡಿಸುತ್ತದೆ. ಆಟಿಕೆಗಳ ಮೂಲಕವೇ ಮಕ್ಕಳು ವಿಜ್ಞಾನವನ್ನು ಒಳಹೊಕ್ಕು ನೋಡುತ್ತಾರೆ’ ಎಂದು ವಿಜ್ಞಾನಿ ಅರುಣ್‌ ಗುಪ್ತಾ ವಿವರಿಸಿದರು.

ಜವಾಹರ್‌ ಲಾಲ್‌ ನೆಹರೂ ತಾರಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ಆಟಿಕೆಗಳ ಮೂಲಕ ವಿಜ್ಞಾನ’ ಚರ್ಚೆಯಲ್ಲಿ ಅವರು ಹಲವು ಕೌತುಕಗಳನ್ನು ಬಿಚ್ಚಿಟ್ಟರು.

ಬಾಲಕಿಯೊಬ್ಬಳು ಕಪ್ಪೆಯ ಜೀವನ ಚಕ್ರವನ್ನು ಪೇಪರ್‌ ಮಡಿಕೆಯ ಮೂಲಕ ಅದ್ಭುತವಾಗಿ ಬಿಡಿಸಿದ್ದನ್ನು ಉದಾಹರಣೆಯಾಗಿ ತೋರಿಸಿದ ಅವರು ಜೀವವೈವಿಧ್ಯ ಕುರಿತು ಮಕ್ಕಳಿಗೆ ವಿವರಿಸಿದರು. ಹಣ್ಣಿನ ರಸ ಕುಡಿಯಲು ಬಳಸುವ ಸ್ಟ್ರಾದಿಂದ ತಿರುಗು ಚಕ್ರವನ್ನು ಮಾಡುವ ಮೂಲಕ ಅಲ್ಲಿದ್ದ ಪೋಷಕರು ಹಾಗೂ ಮಕ್ಕಳ ಗಮನಸೆಳೆದರು.

ಪೇಪರ್‌ ತುಂಡನ್ನು ಬಳಸಿ ಅಸ್ಥಿಪಂಜರ ರಚಿಸಿದರು. ಒಂದು ಪ್ಲಾಸ್ಟಿಕ್‌ ಲೋಟದ ಒಳಗೆ ಹಾಗೂ ಹೊರಗೆ ಅಯಸ್ಕಾಂತಗಳನ್ನು ಇಟ್ಟು ಕಡ್ಡಿಯಿಂದ ಅದನ್ನು ಮೇಲೆ ಕೆಳಗೆ ಮಾಡುವ ಮೂಲಕ ಪುಟ್ಟ ಆಟಿಕೆ ತಯಾರಿಸಿದರು. ಮಕ್ಕಳಿಗೆ ಖುಷಿ ಸಿಗುವಂತಹ ಆಟಿಕೆಗಳನ್ನು ಹೇಗೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಮನಮುಟ್ಟುವಂತೆ ತೋರಿಸಿದರು.

‘ಆಟಿಕೆಗಳನ್ನು ತಯಾರಿಸಿ ಮಾರುವ ದೆಹಲಿಯ ವ್ಯಾಪಾರಿಯೊಬ್ಬ ದಿನಕ್ಕೆ ₹50 ಲಕ್ಷ ದುಡಿಯುತ್ತಿದ್ದಾನೆ. ಸುಲಭವಾದ ಆಟಿಕೆಗಳನ್ನು ತಯಾರಿಸಲು ಒಂದಕ್ಕೆ 50 ಪೈಸೆ ಖರ್ಚಾಗಬಹುದು. ಸರಳವಾದ ವಿಜ್ಞಾನ ಬಳಸಿ ನಾವು ಮನೆಯಲ್ಲೇ ಅವುಗಳನ್ನು ತಯಾರಿಸಬಹುದು. ದೊಡ್ಡ ಮಳಿಗೆಗಳಿಗೆ ಹೋದರೆ ಬಾಕ್ಸ್‌ ಹಾಗೂ ಅದರ ಮೇಲಿರುವ ಹೆಸರಿಗೇ ನಾವು ಸಾವಿರಾರು ರೂಪಾಯಿ ತೆರಬೇಕು’ ಎಂದರು.

ಹಾನಿಕಾರಕ ಆಟಿಕೆಗಳನ್ನು ಮಕ್ಕಳಿಗೆ ತಂದುಕೊಡುವುದನ್ನು ನಿಲ್ಲಿಸಬೇಕು ಎಂದು ಅವರುಸಲಹೆ ನೀಡಿದರು.

‘ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ನೀರಸವಾಗಿದೆ. ಪ್ರಯೋಗಾತ್ಮಕ ಶಿಕ್ಷಣ ಕಡಿಮೆಯಾಗಿದೆ. ತಮಾಷೆ ಹಾಗೂ ಸರಳ ವಿಜ್ಞಾನದ ಮೂಲಕ ಮಕ್ಕಳಿಗೆ ಹೊಸತನ್ನು ಕಲಿಸಬೇಕು. ಕನ್ನಡದಲ್ಲಿ ಜನಪ್ರಿಯ ವಿಜ್ಞಾನದ ಪ್ರಯೋಗಗಳ ಕುರಿತು ಉತ್ತಮ ಪುಸ್ತಕಗಳು ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT