ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಟವರ್ ಬಿದ್ದು ಕುಸಿದ ಮನೆ: 11 ಮಂದಿ ರಕ್ಷಣೆ

ಲಗ್ಗೆರೆ ಬಳಿಯ ಪಾರ್ವತಿನಗರದಲ್ಲಿ ಶುಕ್ರವಾರ ಈ ಅವಘಡ ಸಂಭವಿಸಿದೆ
Published 8 ಡಿಸೆಂಬರ್ 2023, 14:44 IST
Last Updated 8 ಡಿಸೆಂಬರ್ 2023, 14:44 IST
ಅಕ್ಷರ ಗಾತ್ರ

ಬೆಂಗಳೂರು: ಹಳೇ ಕಟ್ಟಡದ ತೆರವು ಕಾರ್ಯಾಚರಣೆ ವೇಳೆ ದೊಡ್ಡ ಗಾತ್ರದ ಮೊಬೈಲ್ ಟವರ್ ಉರುಳಿಬಿದ್ದಿದ್ದು, ಅಕ್ಕಪಕ್ಕದ ಮನೆಗಳಲ್ಲಿ ಸಿಲುಕಿದ್ದ 11 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಲಗ್ಗೆರೆ ಬಳಿಯ ಪಾರ್ವತಿನಗರದಲ್ಲಿ ಶುಕ್ರವಾರ ಈ ಅವಘಡ ಸಂಭವಿಸಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

‘ಶಿಥಿಲಗೊಂಡಿದ್ದ ಹಳೇ ಕಟ್ಟಡವನ್ನು ತೆರವುಗೊಳಿಸಿ ಜೆಸಿಬಿ ಯಂತ್ರದ ಸಹಾಯದಿಂದ ಅವಶೇಷಗಳನ್ನು ಸಾಗಿಸಲಾಗುತ್ತಿತ್ತು. ಪಕ್ಕದ ಕಟ್ಟಡದ ಚಾವಣಿಯಲ್ಲಿ ಮೊಬೈಲ್ ಟವರ್ ಇತ್ತು. ಜೆಸಿಬಿ ಯಂತ್ರದ ಬಕೆಟ್ ಟವರ್‌ಗೆ ತಾಗಿತ್ತು. ದಿಢೀರ್ ಮೊಬೈಲ್ ಟವರ್ ಉರುಳಿಬಿದ್ದಿತ್ತು’ ಎಂದು ಸ್ಥಳೀಯರು ಹೇಳಿದರು.

‘ಟವರ್‌ನ ಕಬ್ಬಿಣದ ಅವಶೇಷಗಳು ಮನೆಗಳ ಮೇಲೆ ಬಿದ್ದಿದ್ದವು. ಮನೆಗಳು ಭಾಗಶಃ ಕುಸಿದಿದ್ದವು. ಮನೆಯಲ್ಲಿ 11 ಮಂದಿ ವಾಸವಿದ್ದರು. ಸ್ಥಳದಲ್ಲಿ ಸೇರಿದ್ದ ಸ್ಥಳೀಯರು, ಮನೆಗಳಲ್ಲಿ ಸಿಲುಕಿದ್ದ 11 ಮಂದಿಯನ್ನೂ ಹೊರಗೆ ಕರೆತಂದು ರಕ್ಷಿಸಿದ್ದಾರೆ. ಎರಡು ಅಂಗಡಿಗಳ ಮೇಲೂ ಟವರ್ ಅವಶೇಷಗಳು ಬಿದ್ದಿದ್ದವು’ ಎಂದು ತಿಳಿಸಿದರು.

‘ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹಳೇ ಕಟ್ಟಡ ತೆರವು ಮಾಡುತ್ತಿದ್ದ ಮಾಲೀಕರ ವಿರುದ್ಧ ಠಾಣೆಗೆ ದೂರು ನೀಡುವುದಾಗಿ ತಿಳಿಸಿದರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT