ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರಹಳ್ಳಿ: ಭೂಮಾಫಿಯಾದಿಂದ 324 ಎಕರೆ ರಕ್ಷಣೆ

Published 13 ಆಗಸ್ಟ್ 2023, 21:12 IST
Last Updated 13 ಆಗಸ್ಟ್ 2023, 21:12 IST
ಅಕ್ಷರ ಗಾತ್ರ

ಬೆಂಗಳೂರು: ತುರಹಳ್ಳಿ ಕಿರು ಅರಣ್ಯದ 324 ಎಕರೆಯನ್ನು ರಕ್ಷಿಸಲು ಕೊನೆಗೂ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸತತ ಇಪ್ಪತ್ತು ವರ್ಷಗಳ ಹೋರಾಟದ ಫಲ ಅರಣ್ಯ ಇಲಾಖೆ ಸಿಕ್ಕಿದೆ.

ತುರಹಳ್ಳಿ ಕಿರು ಅರಣ್ಯವು 597 ಎಕರೆ 19 ಗುಂಟೆ ಪ್ರದೇಶದಲ್ಲಿ ವಿಸ್ತಾರಗೊಂಡಿದ್ದು, 1934ರಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾಗಿತ್ತು. ಆದರೆ, ಭೂಮಾಫಿಯಾದವರು ಅದರಲ್ಲಿ ಕೆಲ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರು. ಒಂದು ದಶಕದಿಂದ ಅರಣ್ಯ ಪ್ರದೇಶದ ದಾಖಲೆ ಸಂಗ್ರಹಿಸಿ, ಮೀಸಲು ಅರಣ್ಯ ಪ್ರದೇಶ ಎಂಬುದನ್ನು ಸಾಬೀತುಪಡಿಸಲಾಗಿದೆ.

‘ಅರಣ್ಯ ಭೂಮಿಯಲ್ಲಿ ಮತ್ತೊಂದು ಬಡಾವಣೆ ನಿರ್ಮಾಣ ಆಗುವುದನ್ನು ತಡೆದಿದ್ದೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

2004ರಲ್ಲಿ ಅರಣ್ಯ ಪ್ರದೇಶದ 343 ಎಕರೆ 38 ಗುಂಟೆ ಮಾಲೀಕತ್ವದ ವಿಚಾರವಾಗಿ ಶ್ರೀನಿವಾಸ್‌ ಸೇರಿದಂತೆ 87 ಮಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ, ಜಿಲ್ಲಾಧಿಕಾರಿಗೆ ಪತ್ರ ಬರೆದ ಮೇಲೆ ಅರಣ್ಯ ಪ್ರದೇಶ ಕಬಳಿಸುವ ಪ್ರಯತ್ನವು ಗೊತ್ತಾಗಿತ್ತು.

2006ರಲ್ಲಿ ಬೆಂಗಳೂರು ತಹಶೀಲ್ದಾರ್ ಅವರು ಪರಿಶೀಲನೆ ನಡೆಸಿದಾಗ ಅರಣ್ಯ ಭೂಮಿಗೆ ಹಕ್ಕುಪತ್ರ ಮಾಡಿಸಿಕೊಳ್ಳಲು ಸುಳ್ಳು ದಾಖಲೆ ಸೃಷ್ಟಿಸಿದ್ದು ಕಂಡುಬಂದಿತ್ತು.

ದಿನೇಶ್‌ ಕುಮಾರ್ ಹೆಸರಿಗೆ 20 ಎಕರೆ ಜಮೀನು ನೋಂದಣಿಗೆ ಸುಳ್ಳು ಸರ್ವೆ ದಾಖಲೆ ಸೃಷ್ಟಿಸಲಾಗಿತ್ತು. ಇದನ್ನು ಉಲ್ಲೇಖಿಸಿ ಉಪ ನೋಂದಾಣಾಧಿಕಾರಿ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್‌ ಶಿಫಾರಸು ಮಾಡಿದ್ದರು. ಅದಾದ ಮೇಲೆ 2009ರಲ್ಲಿ ಬೆಂಗಳೂರು ದಕ್ಷಿಣದ ಸಹಾಯಕ ಆಯುಕ್ತರು, ‘ಇದು ಅರಣ್ಯ ಭೂಮಿ ಅಲ್ಲ. ನಿಯಮದಂತೆ ಅರ್ಜಿದಾರರು 30 ವರ್ಷದಿಂದ ಜಮೀನು ಹೊಂದಿರುವುದಕ್ಕೆ ಸಾಗುವಳಿ ಚೀಟಿ ಪತ್ರ ಇರುವುದನ್ನು ಸಾಬೀತು ಮಾಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು.

ಇದರಿಂದ ಆಘಾತಕ್ಕೆ ಒಳಗಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ ತನಿಖೆ ನಡೆಸುವಂತೆ ಕಂದಾಯ ಇಲಾಖೆ ಕೋರಿದ್ದರು.

ಅದಾದ ಮೇಲೆ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ತಡೆ ನೀಡಿದ್ದರು. ಅದರ ವಿರುದ್ಧ ಹಕ್ಕು ಪ್ರತಿಪಾದಿಸುತ್ತಿದ್ದವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮೂರು ತಿಂಗಳಲ್ಲಿ ಅರ್ಜಿ ವಿಲೇವಾರಿ ಮಾಡುವಂತೆ ಕೋರ್ಟ್‌ ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಆದರೆ. ಕೋವಿಡ್‌ ಮತ್ತಿತರ ಕಾರಣದಿಂದ ವಿಳಂಬವಾಗಿತ್ತು. ಈಗ ಅರಣ್ಯ ಇಲಾಖೆ ಜಮೀನು ಎಂಬ ಆದೇಶ ಹೊರಬಿದ್ದಿದೆ.

1934ರ ಅಧಿಸೂಚನೆಯಂತೆ ಇದುವರೆಗೂ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿಲ್ಲ. ಅರ್ಜಿದಾರರು ಸಾಗುವಳಿಯನ್ನೂ ಮಾಡಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. 2009ರಲ್ಲಿ ಬೆಂಗಳೂರು ದಕ್ಷಿಣದ ಸಹಾಯಕ ಆಯುಕ್ತರ ಆದೇಶವನ್ನು ಡಿಸಿ ನ್ಯಾಯಾಲಯವು ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT