ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಕಾಶಿಯಲ್ಲಿ ಕಾಡಿನ ರಾಣಿಯ ಸಾಮ್ರಾಜ್ಯ...!

₹2 ಲಕ್ಷ ವೆಚ್ಚ
Last Updated 19 ಅಕ್ಟೋಬರ್ 2018, 18:55 IST
ಅಕ್ಷರ ಗಾತ್ರ

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ಗೆ ಕಾಡಿನ ರಾಣಿ ಆಗಮಿಸಿದ್ದಾಳೆ. ಇದ್ಯಾರಪ್ಪ, ಕಾಡಿನ ರಾಣಿ...! ಯಾರಿವಳು...? ಎನ್ನುತ್ತೀರಾ? ಇದನ್ನು ಓದಿ ನಿಮಗೇ ತಿಳಿಯುತ್ತದೆ.

ಆಫ್ರಿಕಾ ಮೂಲದ ‘ಕಾಡಿನ ರಾಣಿ’ (ಅಡಾನ್ಸೋನಿಯಾ ಡಿಜಿಟಾಟಾ) ಎಂಬ ಬಹು ಕಾಲ ಬದುಕುವ ಗಿಡಗಳನ್ನು ಸಸ್ಯಕಾಶಿಯಲ್ಲಿ ನೆಡಲಾಗಿದೆ.ಹಾಗಾಗಿ, ಇವು ಮುಂದಿನ ಪೀಳಿಗೆಯ ಕಣ್ಮನ ತಣಿಸಲಿವೆ.

‘ತೋಟಗಾರಿಕೆ ಇಲಾಖೆ ವತಿಯಿಂದ ಸುಮಾರು 2 ಲಕ್ಷ ವೆಚ್ಚದಲ್ಲಿ ಈಗಿಡಗಳನ್ನು ನೆಡಲಾಗಿದೆ. ಇಂತಹ ಮರಗಳನ್ನು ಜಗತ್ತಿನ ಮೂರ್ನಾಲ್ಕು ಕಡೆ ಮಾತ್ರ ಕಾಣಬಹುದು. ಒಂದು ವರ್ಷದ ಹಿಂದೆಯೇ ಅಡಾನ್ಸೋನಿಯಾ ಡಿಜಿಟಾಟಾ ತಳಿಯ 4 ಪ್ರಭೇದದ ಮರಗಳನ್ನು ಖರೀದಿ ಮಾಡಲಾಗಿತ್ತು’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್‌ ತಿಳಿಸಿದರು.

‘ಖರೀದಿಸಿದ ತಕ್ಷಣ ಮರಗಳನ್ನು ನೆಡಲು ಸಾಧ್ಯವಿಲ್ಲ. ಅವು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ, ಒಂದು ವರ್ಷಗಳ ಕಾಲ ಲಾಲ್‌ಬಾಗ್‌ನ ನರ್ಸರಿಯಲ್ಲೇ ಇಟ್ಟು ಆರೈಕೆ ಮಾಡಲಾಗಿತ್ತು. ಬುಧವಾರ ಗಿಡಗಳನ್ನು ನೆಡಲಾಗಿದೆ’ ಎಂದರು.

‘ಯುನಿಕ್‌ ಟ್ರೀಸ್‌ ನರ್ಸರಿ ಆಫ್‌ಹೈದರಾಬಾದ್‌’ ಸಂಸ್ಥೆ, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಏಷ್ಯಾ ಖಂಡದ ಕೆಲವು ಭಾಗಗಳಿಂದ ಇಂತಹ ಸಸಿಗಳನ್ನು ಖರೀದಿಸುತ್ತದೆ. ಹಾಗಾಗಿ, ಅಲ್ಲಿಂದಲೇ ಅವುಗಳನ್ನು ತರಿಸಲಾಗಿದೆ.

ಲಾಲ್‌ಬಾಗ್‌ನಲ್ಲಿ ಈಗಾಗಲೇ ಅಕ್ವೇರಿಯಂ ಕಟ್ಟಡದ ಸಮೀಪ ಬ್ರಿಟಿಷ್‌ ಕಾಲದ 175 ವರ್ಷದಷ್ಟು ಹಳೆಯ ಅಡಾನ್ಸೋನಿಯಾ ಡಿಜಿಟಾಟಾ ಮರವಿದೆ. ಇದೀಗ, ಗಾಜಿನ ಮನೆ ಹಿಂಭಾಗದ ಮಳಿಗೆ ಪ್ರದೇಶ ಸಮೀಪದ ಹುಲ್ಲು ಹಾಸಿನಲ್ಲಿ ಮುಕ್ಕಾಲು ಎಕರೆ ಪ್ರದೇಶದಲ್ಲಿ ತಲಾ 30 ಅಡಿ ಅಂತರದಲ್ಲಿ ಏಳು ಸಸಿಗಳನ್ನು ನೆಡಲಾಗಿದೆ.

ಆಫ್ರಿಕಾ, ಆಸ್ಟ್ರೇಲಿಯಾದ ಜೌಗು ಪ್ರದೇಶದಲ್ಲಿಈ ತಳಿಯ ಆನೆಹುಣಸೆ (ಬಾವೊಬಾಬ್ ಮರ –Baobab tree) ಮರಗಳು ಹೆಚ್ಚಾಗಿ ಕಂಡುಬರುತ್ತವೆ. ಇವು ಸುಮಾರು ಆರು ಸಾವಿರ ವರ್ಷ ಬದುಕಬಲ್ಲವು. ಸುಮಾರು 32 ಸಾವಿರ ಗ್ಯಾಲನ್‌ಗಳಷ್ಟು ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿರುತ್ತವೆ.

ಈ ಗಿಡಗಳನ್ನು ನೆಟ್ಟಿರುವುದರಿಂದ ಸದ್ಯ ಸಸ್ಯಕಾಶಿಯ ಸೌಂದರ್ಯ ಮತ್ತಷ್ಟು ಇಮ್ಮಡಿಗೊಂಡಿದೆ.

ಅಡಾನ್ಸೋನಿಯಾ ಗಿಡದ ವಿಶೇಷ

*ಒಟ್ಟು 50 ಅಡಿ ಮೀರಿ ಬೆಳೆಯುತ್ತದೆ. 40 ಅಡಿ ಎತ್ತರ ಬೆಳೆದ ನಂತರ ರೆಂಬೆ– ಕೊಂಬೆಗಳು ಚಾಚಿಕೊಳ್ಳುತ್ತವೆ.

* ಮರದ ಎತ್ತರವಿದ್ದಷ್ಟು ಬೇರುಗಳು ಅಷ್ಟೇ ವಿಸ್ತಾರವಾಗಿ ಹಬ್ಬಿಕೊಳ್ಳುತ್ತವೆ.

* 25 ಅಡಿ ಅಗಲದಷ್ಟು ಕಾಂಡ ಬೆಳೆಯುತ್ತದೆ. ಕಾಂಡದಲ್ಲಿ ಸುಮಾರು 12 ಸಾವಿರ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯವಿದೆ.

*ಮರಕ್ಕೆ ರಂಧ್ರ ಕೊರೆದು, ನೀರು ಸಂಗ್ರಹಿಸಬಹುದು. ಇದನ್ನು ಕುಡಿಯಲು ಸಹ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT