ಶನಿವಾರ, ಅಕ್ಟೋಬರ್ 16, 2021
29 °C
ನಟಿ ಸಂಜನಾ ಗಲಾಟೆ: ಕ್ಯಾಬ್‌ ಚಾಲಕನಿಂದ ದೂರು

ಸಂಜನಾರನ್ನು ಅಪಹರಿಸಿಲ್ಲ, ಅಸಭ್ಯವಾಗಿ ವರ್ತಿಸಿಲ್ಲ: ಓಲಾ ಕ್ಯಾಬ್ ಚಾಲಕ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಟಿ ಸಂಜನಾ ಗಲ್ರಾನಿ ಅವರನ್ನು ಅಪಹರಿಸಿಲ್ಲ. ಅವರ ಜೊತೆ ಅಸಭ್ಯವಾಗಿಯೂ ವರ್ತಿಸಿಲ್ಲ. ಎಸಿ ಹಾಕುವ ವಿಚಾರಕ್ಕೆ ಅವರೇ ಜಗಳ ತೆಗೆದಿದ್ದರು. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು’ ಎಂದು ಓಲಾ ಕ್ಯಾಬ್‌ ಚಾಲಕ ಸುಸೈಮಣಿ ಆರೋಪಿಸಿದ್ದಾರೆ. ಈ ವಿಚಾರವಾಗಿ ರಾಜರಾಜೇಶ್ವರಿ ನಗರ (ಆರ್‌.ಆರ್‌.ನಗರ) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಕ್ಯಾಬ್‌ನಲ್ಲಿ ಎಸಿ ಹಾಕಿರಲಿಲ್ಲ. ಕ್ಯಾಬ್‌ ಹತ್ತಿದ ಕೂಡಲೇ ಸಂಜನಾ ಅವರು ಎಸಿ ಹಾಕುವಂತೆ ದಬಾಯಿಸಿದರು. ಹೀಗಾಗಿ ಎಸಿ ಆನ್‌ ಮಾಡಿ ಒಂದು ಪಾಯಿಂಟ್‌ಗೆ ಇಟ್ಟಿದ್ದೆ. ಬಳಿಕ ಅವರೇ ಬಲವಂತದಿಂದ ಎಸಿ ಹೆಚ್ಚಿಸಿದರು. ಕ್ಯಾಬ್‌ ಹತ್ತಿದಾಗ ಅವರು ಮುಖಗವಸು ಧರಿಸಿರಲಿಲ್ಲ. ಮೊದಲು ಮುಖಗವಸು ಧರಿಸಿ. ಬಳಿಕ ಎಸಿ ಹಾಕುತ್ತೇನೆ ಎಂದು ಹೇಳಿದೆ. ಆ ವಿಚಾರವಾಗಿ ಮತ್ತೆ ವಾಗ್ವಾದ ನಡೆಸಿದರು. 100 ಮೀಟರ್ ದೂರ ಹೋದ ಬಳಿಕ ಮುಖಗವಸು ಧರಿಸಿದರು. ಕ್ಯಾಬ್‌ ಹತ್ತಿದ ಬಳಿಕ ಬಾಗಿಲು ಕೂಡ ಸರಿಯಾಗಿ ಹಾಕಿರಲಿಲ್ಲ. ನಾನೇ ಕಾರಿನಿಂದ ಇಳಿದು ಬಾಗಿಲು ಹಾಕಿದ್ದೆ’ ಎಂದು ಚಾಲಕ ದೂರಿದ್ದಾರೆ.

‘ಕಾರು ಹತ್ತಿದ ಬಳಿಕ ಸಂಜನಾ ಅವರು ಪದೇ ಪದೇ ಲೊಕೇಷನ್‌ ಬದಲಿಸುತ್ತಿದ್ದರು. ನಿಗದಿತ ಸ್ಥಳಕ್ಕೆ ಹೋಗದೆ ಬೇರೆ ಯಾವುದೋ ಸ್ಥಳದಲ್ಲಿ ಇಳಿದುಕೊಂಡರು’ ಎಂದೂ ತಿಳಿಸಿದ್ದಾರೆ.

‘ರಾಜರಾಜೇಶ್ವರಿ ನಗರದಲ್ಲಿ ಚಿತ್ರೀಕರಣವಿತ್ತು. ಇಂದಿರಾನಗರದಿಂದ ಅಲ್ಲಿಗೆ ಹೋಗಲು ಕ್ಯಾಬ್‌ ಕಾಯ್ದಿರಿಸಿದ್ದೆ. ಕ್ಯಾಬ್‌ ಹತ್ತಿದ ಬಳಿಕ ಚಾಲಕ ಕೆಂಗೇರಿಯತ್ತ ಹೊರಟಿದ್ದ. ಹೀಗಾಗಿ ಭಯವಾಗಿತ್ತು. ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ಚಾಲಕನೇ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದರು’ ಎಂದು ಸಂಜನಾ ಹೇಳಿದ್ದಾರೆ.

‘ಹೊರಗಡೆ ಕಲುಷಿತ ಗಾಳಿ ಇದೆ. ಹೀಗಾಗಿ ಉಸಿರಾಡಲು ಸಮಸ್ಯೆಯಾಗುತ್ತದೆ. ಎಸಿ ಹಾಕಿ ಎಂದು ವಿನಯದಿಂದಲೇ ಮನವಿ ಮಾಡಿದ್ದೇನೆ. ಕೋವಿಡ್‌ ನಿಯಮದ ಪ್ರಕಾರ ಕ್ಯಾಬ್‌ನಲ್ಲಿ ಎಸಿ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಅವರು ನನ್ನ ಮೇಲೆ ರೇಗಾಡಿದರು’ ಎಂದೂ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು