ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ– ಮಗನಿಗೆ ₹ 50 ಸಾವಿರ ಪರಿಹಾರ

ಪೊಲೀಸರ ವರ್ತನೆಗೆ ಎಸ್‌ಎಚ್‌ಆರ್‌ಸಿ ಗರಂ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ
Last Updated 19 ನವೆಂಬರ್ 2019, 2:43 IST
ಅಕ್ಷರ ಗಾತ್ರ

ಬೆಂಗಳೂರು: ಅಪ್ಪ, ಮಗನನ್ನು ವಿನಾಕಾರಣ ಥಳಿಸಿದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಕಾನ್‌ಸ್ಟೆಬಲ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ,ಸಂತ್ರಸ್ತರಿಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದುರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ಸರ್ಕಾರಕ್ಕೆ ಸೂಚಿಸಿದೆ.

ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಪಿಎಸ್‌ಐ ಮುರಳಿ ಹಾಗೂ ಕಾ‌ನ್‌ಸ್ಟೆಬಲ್‌ ಲೋಕೇಶ್‌ ಅವರು ಲಿಂಗರಾಜಪುರದಲ್ಲಿ ಗ್ಯಾಸ್ ಸ್ಟೋವ್‌ ರಿಪೇರಿ ಮಾಡುವ ಸತೀಶ್‌ ಅವರ ಅಂಗಡಿಗೆ ಬಂದು ದ್ವಿಚಕ್ರ ವಾಹನದ ಲೈಸನ್ಸ್‌ ತೋರಿಸುವಂತೆ ಹೇಳಿದರು. ಒಂದು ವಾಹನದ ದಾಖಲೆ ತೋರಿಸಿದ ಅವರು, ಮನೆಯಲ್ಲಿದ್ದ ಇನ್ನೊಂದು ವಾಹನದ ದಾಖಲೆ ತರುವುದಾಗಿ ತಿಳಿಸಿದರು. ಆದರೆ, ಅವರ ಮಾತು ಕೇಳಿಸಿಕೊಳ್ಳದ ಪೊಲೀಸರು ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದರು. ಅದೇ ಸಮಯಕ್ಕೆ ಅಂಗಡಿಗೆ ಬಂದ ಸತೀಶ್‌ ಅವರ ಪುತ್ರ ಸ್ಯಾಮ್‌ಸನ್‌ ಅವರ ಮೇಲೂ ಹಲ್ಲೆ ಮಾಡಿದರು.

ಇಬ್ಬರನ್ನೂ ಬಲವಂತವಾಗಿ ಹೊಯ್ಸಳ ವಾಹನಕ್ಕೆ ತಳ್ಳಿ ದಾರಿಯುದ್ದಕ್ಕೂ ಹಲ್ಲೆ ಮಾಡಿದರು. ಬಾಣಸವಾಡಿ ಠಾಣೆಗೆ ಕರೆತಂದು ಸತೀಶ್‌ ಅವರ ಬಟ್ಟೆ ಬಿಚ್ಚಿ, ಮೈಮೇಲಿದ್ದ ಒಡವೆಗಳನ್ನು ಕಳಚಿಕೊಂಡರು. ಸುದ್ದಿ ತಿಳಿದು ಠಾಣೆಗೆ ಧಾವಿಸಿದ ಸತೀಶ್‌ ಅವರ ಪತ್ನಿ ಹಾಗೂ ಮಗಳು ತಮ್ಮವರ ಮೇಲೆ ಹಲ್ಲೆ ನಡೆಸದಂತೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಬದಲಿಗೆ ಅವರನ್ನೇ ಪೊಲೀಸರು ನಿಂದಿಸಿದರು. ಆನಂತರ, ಸತೀಶ್‌ ಗೆಳೆಯರು ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು.

ಹಲ್ಲೆ ಪ್ರಕರಣದ ವಿರುದ್ಧ ಸತೀಶ್‌ ಅವರ ಪತ್ನಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರು. ಆಯೋಗ, ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿತು. ತನಿಖೆ ನಡೆಸಿದ ಡಿವೈಎಸ್‌ಪಿ, ‘ಇಬ್ಬರನ್ನೂ ಹೊಯ್ಸಳ ವಾಹನದಲ್ಲಿ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವಾಹನಗಳ ದಾಖಲೆ ಪರಿಶೀಲಿಸುವಂತೆ ಹೇಳಿರಲಿಲ್ಲ. ಅನಗತ್ಯವಾಗಿ ಸಂತ್ರಸ್ತರ ಅಂಗಡಿಗೆ ಹೋಗಿ ಅವರನ್ನು ಥಳಿಸಿದ್ದಾರೆ. ಇದರಿಂದ ಅವರಿಗೆ ಗಾಯವಾಗಿದೆ’ ಎಂದು ಫೆಬ್ರುವರಿಯಲ್ಲಿ ವರದಿ ಸಲ್ಲಿಸಿದ್ದರು.

ಆದರೆ, ಇಬ್ಬರೂ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದರು. ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ವಿರುದ್ಧ ದೂರು ನೀಡಿದ್ದರೂ ಬಾಣಸವಾಡಿ ಇನ್‌ಸ್ಪೆಕ್ಟರ್‌ ಮುನಿಕೃಷ್ಣ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ನವೆಂಬರ್‌ 4ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಎಸ್‌ಎಚ್‌ಆರ್‌ಸಿ ಅಪ್ಪ, ಮಗನ ಮೇಲೆ ಹಲ್ಲೆ ಮಾಡುವ ಮೂಲಕ ಮಾನವ ಹಕ್ಕು ಉಲ್ಲಂಘಿಸಲಾಗಿದೆ ಎಂದು ಹೇಳಿತ್ತು.

ಹಲ್ಲೆಗೊಳಗಾದವರಿಗೆ ಒಂದು ತಿಂಗಳೊಳಗೆ ತಲಾ ₹ 25 ಸಾವಿರ ಪರಿಹಾರ ಕೊಡಬೇಕು. ಈ ಹಣವನ್ನು ಇಲಾಖಾ ವಿಚಾರಣೆ ಬಳಿಕ ಇನ್‌ಸ್ಪೆಕ್ಟರ್‌ ಮುನಿಕೃಷ್ಣ, ಪಿಎಸ್‌ಐ ಮುರಳಿ ಹಾಗೂ ಕಾನ್‌ಸ್ಟೇಬಲ್‌ ಲೋಕೇಶ್‌ ಅವರ ಸಂಬಳದಲ್ಲಿ ಮುರಿದುಕೊಳ್ಳಬೇಕು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್‌ಎಚ್‌ಆರ್‌ಸಿ ಸದಸ್ಯ ಚೆಂಗಪ್ಪ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT