ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮರಾಯನ ಬದಲು ದುರ್ಯೋಧನನಿಗೆ ಪಟ್ಟಾಭಿಷೇಕ: ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ
Last Updated 4 ನವೆಂಬರ್ 2019, 4:51 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾಭಾರತದಲ್ಲಿ ಕೌರವ- ಪಾಂಡವರ ನಡುವಿನ ಯುದ್ಧದಲ್ಲಿ ಪಾಂಡವರು ಜಯಿಸಿ, ಧರ್ಮರಾಯನಿಗೆ ಪಟ್ಟಾಭಿಷೇಕ ಮಾಡುತ್ತಾರೆ. ಇಂದಿನ ರಾಜಕೀಯ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಗೆದ್ದು, ದುರ್ಯೋಧನನಿಗೆಚಕ್ರಾಧಿಪತಿ ಪಟ್ಟ ಕಟ್ಟುತ್ತಿದ್ದಾರೆ’ ಎಂದುಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ವಸಂತ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಶ್ರೀ ಮಹಾಭಾರತ' ಕೃತಿ (ಮೂಲ ಲೇಖಕ ಪ್ರೊ.ಎಲ್‌.ಎಸ್.ಶೇಷಗಿರಿ ರಾವ್) ಬಿಡುಗಡೆ ಮಾಡಿ, ಮಾತನಾಡಿದರು.

‘ಮಹಾಭಾರತದ ಒಂದೊಂದು ಪಾತ್ರವೂ ಒಂದೊಂದು ಸಂದೇಶವನ್ನು ಸಾರುತ್ತದೆ. ಈ ಮಹಾಕಾವ್ಯ ಎಷ್ಟು ಹಳೆಯದೋ ಅಷ್ಟೇ ಪ್ರಸ್ತುತವಾಗಿದೆ. ಇಂದಿನ ರಾಜಕಾರಣಿಗಳು, ವಿದ್ವಾಂಸರು ಹಾಗೂ ಸಾಮಾಜಿಕ ಕಾರ್ಯಕರ್ತರು ಮಹಾಭಾರತದ ಸಂದೇಶಗಳನ್ನು ತಿಳಿದುಕೊಳ್ಳಬೇಕು.ಒಳ್ಳೆತನ ಹಾಗೂ ಕೆಟ್ಟತನದ ನಡುವಿನ ಕುರುಕ್ಷೇತ್ರ ಯುದ್ಧವನ್ನು ಸಮಾಜದಲ್ಲಿ ಈಗಲೂ ಕಾಣಬಹುದಾಗಿದೆ. ಕೌರವ-ಪಾಂಡವರ ಯುದ್ಧದ ಮಾದರಿಯಲ್ಲೇ ನಾವು ದೈನಂದಿನ ಜೀವನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಗುಣಗಳ ನಡುವೆ ಹೋರಾಡುತ್ತಿದ್ದೇವೆ. ಹಾಗಾಗಿ ಮಹಾಭಾರತ ಕೇವಲ ಇತಿಹಾಸವಾಗಿ ಉಳಿದಿಲ್ಲ’ ಎಂದು ಹೇಳಿದರು.

‘ಮನಪೂರ್ವಕ ಭಕ್ತಿ ಇಲ್ಲದಿದ್ದರೂ ಜನರ ವಿಶ್ವಾಸ ಗಳಿಸಲು ರಾಜಕಾರಣಿಗಳು ಚುನಾವಣೆಗಳ ಸಂದರ್ಭದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡುತ್ತಾರೆ.ಉತ್ತಮ ರಾಜಕಾರಣಿಯಾದವರು ದೇವರು ಹಾಗೂ ಧರ್ಮಕ್ಕೆ ಭಯಪಡಬಾರದು’ ಎಂದರು.

ವಿದ್ವಾಂಸ ಶತಾವಧಾನಿ ಆರ್.ಗಣೇಶ್‌, ‘ಮಹಾಭಾರತ ಮಹಾಕಾವ್ಯವನ್ನು ವಿಮರ್ಶಾತ್ಮಕವಾಗಿ ಸಾರವತ್ತಾಗಿ ವಿವರಿಸಿರುವ ಕೃತಿಗಳು ವಿರಳ. ಕನ್ನಡ ಭಾಷೆಯಲ್ಲಿ ಬಂದಿರುವ ಹಲವು ಕೃತಿಗಳಲ್ಲಿ ಆರ್ದ್ರತೆ ಹಾಗೂ ಅಂತರ್ ದೃಷ್ಟಿಯನ್ನು ಕಾಣಬಹುದು. ಈಗ ಕನ್ನಡಕ್ಕೆ ಅನುವಾದಗೊಂಡಿರುವ ‘ಶ್ರೀಮಹಾಭಾರತ’ ಕೃತಿಯು ವಿಶಿಷ್ಟವಾಗಿದೆ. ಅನುವಾದಕರು ಮೂಲಕೃತಿಯಸಾರವನ್ನು ಕನ್ನಡದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT