ಶನಿವಾರ, ನವೆಂಬರ್ 28, 2020
26 °C
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅಭಿಮತ

‘ತಂತ್ರಜ್ಞಾನದ ಮಹತ್ವ ಸಾರಿದ ಕೋವಿಡ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಪಿಇಎಸ್‌ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಸಮಾರಂಭ

ಬೆಂಗಳೂರು: ‘ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಜನರ ಜೀವನವಿಧಾನವನ್ನೇ ಸಂಪೂರ್ಣ ಬದಲಾಯಿಸಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ತಂತ್ರಜ್ಞಾನದ ಮಹತ್ವದ ಅರಿವಾಗಿದ್ದು, ಈ ಕ್ಷೇತ್ರವು ಭವಿಷ್ಯದಲ್ಲಿ ವಿಫುಲ ಉದ್ಯೋಗಾವಕಾಶ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಪಿಇಎಸ್‌ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಸಮಾರಂಭದಲ್ಲಿ 2,031 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೇಶ್ವರಿ ಆರ್. ಹಾಗೂ ಮೈತ್ರಿ ಆರ್. ಪಿಎಚ್‌ಡಿ ಪಡೆದರು. ವಿವಿಧ ವಿಭಾಗಗಳಲ್ಲಿ ಅಧಿಕ ಅಂಕಗಳನ್ನು ಪಡೆದ 14 ಮಂದಿಗೆ ಚಿನ್ನದ ಪದಕ ಹಾಗೂ 59 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಪುರಸ್ಕರಿಸಲಾಯಿತು. ಕೋವಿಡ್ ಕಾರಣ ಪದಕ ವಿಜೇತರಿಗೆ ಮಾತ್ರ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿತ್ತು.

ಘಟಿಕೋತ್ಸವ ಭಾಷಣ ಮಾಡಿದ ನಿವೃತ್ತ ನ್ಯಾಯಮೂರ್ತಿಯವರು, ‘ಕೋವಿಡ್‌ ಕಾರಣದಿಂದ ವಿವಿಧ ಕ್ಷೇತ್ರಗಳ ಕಾರ್ಯಶೈಲಿ ಬದಲಾಗಿದೆ. ಮನೆಯಲ್ಲಿಯೇ ಕಚೇರಿ ಕೆಲಸ ಮಾಡುವ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿದ್ದೇವೆ. ನ್ಯಾಯಾಲಯಗಳೂ ವಿಡಿಯೊ ಸಂವಾದದ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಕಾಯಿಲೆಗೆ ಔಷಧ ಕಂಡು ಹಿಡಿಯಲು ವಿಜ್ಞಾನಿಗಳು ಪ್ರತಿನಿತ್ಯ ಶ್ರಮಿಸುತ್ತಿದ್ದು, ಶೀಘ್ರದಲ್ಲಿಯೆ ಔಷಧ ಬರುವ ವಿಶ್ವಾಸದಲ್ಲಿದ್ದೇವೆ. ಬಳಿಕ ನಮ್ಮ ಜೀವನವಿಧಾನವು ಸಾಮಾನ್ಯ ಸ್ಥಿತಿಗೆ ಮರಳಬಹುದು’ ಎಂದರು. 

 

‘ಎಂಜಿನಿಯರ್‌ಗಳೇ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ. ನವ ಭಾರತ ನಿರ್ಮಾಣದ ಕಾರ್ಯದಲ್ಲಿ ಇವರ ಪಾತ್ರ ಪ್ರಮುಖ. ಭವಿಷ್ಯದಲ್ಲಿ ಸವಾಲುಗಳ ಜತೆಗೆ ಅಗಾಧ ಅವಕಾಶಗಳು ಇರಲಿವೆ. ಜಗತ್ತು ನಮ್ಮ ದೇಶದ ಕಡೆ ತಿರುಗಿ ನೋಡುವಂತಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಲಿವೆ. ಹೀಗಾಗಿ ಎಂಜಿನಿಯರ್‌ಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ಹೊಸ ಆವಿಷ್ಕಾರಗಳ ಮೂಲಕ ಜನಸಾಮಾನ್ಯರ ವಿಧಾನವನ್ನು ಸರಳಗೊಳಿಸಲು ಕಾರ್ಯೋನ್ಮುಕರಾಗಬೇಕು’ ಎಂದು ಕಿವಿಮಾತು ಹೇಳಿದರು. 

ಆನ್‌ಲೈನ್‌ ಮೂಲಕ ಶಿಕ್ಷಣ: ವಿದ್ಯಾರ್ಥಿಗಳಿಗೆ ಪದವಿ ಪತ್ರ ಪ್ರದಾನ ಮಾಡಿದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ, ‘ಕೋವಿಡ್‌ನಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಕೊನೆಯ ಸೆಮಿಸ್ಟರ್‌ನ ಅರ್ಧಭಾಗದಲ್ಲಿ ಇದ್ದಾಗ ಸಾಂಕ್ರಾಮಿಕ ರೋಗವು ವ್ಯಾಪಿಸಿಕೊಂಡ ಕಾರಣ, ನಮ್ಮ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗದಂತೆ ಆನ್‌ಲೈನ್‌ ವ್ಯವಸ್ಥೆಗೆ ಹೊಂದಿಕೊಂಡು ಪಾಠ ಮಾಡಿದರು. ನಮ್ಮ ವಿದ್ಯಾರ್ಥಿಗಳು ಪದವಿಗಳನ್ನು ಮಾತ್ರ ಕೊಂಡೊಯ್ಯುತ್ತಿಲ್ಲ. ಬದಲಾಗಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಹೋಗುತ್ತಿದ್ದಾರೆ. ಇದು ಗುಣಮಟ್ಟದ ಶಿಕ್ಷಣಕ್ಕೆ ಉದಾಹರಣೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು