ಭಾನುವಾರ, ಆಗಸ್ಟ್ 25, 2019
20 °C

ಮೂರು ಸಲ ಕಮಿಷನರ್‌ ಫೋನ್‌ ಕದ್ದಾಲಿಕೆ?

Published:
Updated:
Prajavani

ಬೆಂಗಳೂರು: ಫೋನ್‌ ಕದ್ದಾಲಿಕೆ ಹಗರಣ ಪೊಲೀಸ್‌ ಇಲಾಖೆಯನ್ನು ಬೆಚ್ಚಿ ಬೀಳಿಸಿದ್ದು, ‘ಕಳೆದ ಮೇ ಹಾಗೂ ಜೂನ್‌ ತಿಂಗಳಲ್ಲಿ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ (ಕೆಎಸ್‌ಆರ್‌ಪಿ ಎಡಿಜಿಪಿ ಆಗಿದ್ದ ಅವಧಿಯಲ್ಲಿ) ಅವರ ಸಂಭಾಷಣೆಯನ್ನು ಮೂರು ಸಲ ಕದ್ದಾಲಿಸಲಾಗಿದೆ’ ಎಂಬ ಕಳವಳಕಾರಿ ಸಂಗತಿ ಬಯಲಿಗೆ ಬಂದಿದೆ.

ದೂರವಾಣಿ ಕದ್ದಾಲಿಕೆ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ (ಸಿಸಿಬಿ) ಸಂದೀಪ್‌ ಪಾಟೀಲ, ‘ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಆದೇಶದ ಮೇರೆಗೆ ಈ ಫೋನ್‌ ಕದ್ದಾಲಿಕೆ ನಡೆದಿದೆ ಎಂದು ತಮ್ಮ ವರದಿಯಲ್ಲಿ ಹೇಳಿದ್ದಾರೆ’ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ವರದಿ ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಾದ ನೀಲಮಣಿ ಎಸ್‌. ರಾಜು ಅವರಿಗೆ ತಲುಪಿದೆ. ಈ ಕುರಿತ ಪ್ರತಿಕ್ರಿಯೆಗೆ ಅವರು ಸಿಗಲಿಲ್ಲ. ಅಲೋಕ್‌ ಕುಮಾರ್‌ ಸಿಸಿಬಿ ಹೆಚ್ಚುವರಿ ಕಮಿಷನರ್‌ ಆಗಿದ್ದ ವೇಳೆ ಫೋನ್‌ ಕದ್ದಾಲಿಕೆ ನಡೆದಿದೆ ಎಂದೂ ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಅವರೂ ಸಿಗಲಿಲ್ಲ.

ಐಎಂಎ ಜುವೆಲ್ಸ್‌ ಮಾದರಿಯಲ್ಲೇ ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ದೋಚಿ ಪರಾರಿಯಾಗಿದ್ದ ಬೆಂಗಳೂರು ಮೂಲದ ಇಂಜಾಜ್‌ ಇಂಟರ್‌ನ್ಯಾಷನಲ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾವುದ್ದೀನ್‌ ಮುಕರಂ ಬಂಧನಕ್ಕೆ ಸಿಸಿಬಿ ಬಲೆ ಬೀಸಿತ್ತು. ಆ ಸಮಯದಲ್ಲಿ ಆತನ ಚಲನವಲನದ ಮೇಲೆ ನಿಗಾ ವಹಿಸಲು ಫೋನ್‌ ಕದ್ದಾಲಿಕೆಗೆ ಆದೇಶಿಸಲಾಗಿತ್ತು.

ಆಗ, ಹಿರಿಯ ಅಧಿಕಾರಿ, ನಾಲ್ಕು ದೂರವಾಣಿ ಸಂಖ್ಯೆಗಳನ್ನು ಕೊಟ್ಟು, ಸಂಭಾಷಣೆ ಮೇಲೆ ನಿಗಾ ವಹಿಸುವಂತೆ ಸಿಸಿಬಿ ಇನ್‌ಸ್ಪೆಕ್ಟರ್‌ ಒಬ್ಬರಿಗೆ (ಈಗ ಸಿಸಿಆರ್‌ಬಿಯಲ್ಲಿದ್ದಾರೆ) ಸೂಚಿಸಿದರು. ಈ ನಾಲ್ಕರಲ್ಲಿ ಒಂದು ಫೋನ್‌ ಫರಾಜ್‌ ಎಂಬಾತನದ್ದು. ಅದರಂತೆ, ಫೋನ್‌ ಕದ್ದಾಲಿಕೆ ಮಾಡಲಾಯಿತು. ಆದರೆ, ಮಿಸ್ಬಾವುದ್ದೀನ್‌ಗೂ ಫರಾಜ್‌ಗೂ ಯಾವುದೇ ಸಂಬಂಧ ಇರಲಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಪೊಲೀಸ್‌ ಕಮಿಷನರ್‌ ಸುನಿಲ್‌ ಕುಮಾರ್‌ ಅವರ ಅವಧಿ ಮುಗಿಯುತ್ತಿದ್ದಂತೆ, ಅವರ ಉತ್ತರಾಧಿಕಾರಿಯಾಗಲು ಲಾಬಿ ಆರಂಭವಾಯಿತು. ಈ ಸಮಯದಲ್ಲಿ ಫರಾಜ್‌, ‘ನಾನು ರಾಹುಲ್‌ ಗಾಂಧಿ ಅವರ ಆಪ್ತ. ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾದ ಉಸ್ತುವಾರಿ. ಅಹಮದ್‌ ಪಟೇಲ್‌ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಫೋನ್‌ ಮಾಡುತ್ತಿದ್ದ. ಭಾಸ್ಕರ್‌ರಾವ್‌ ಅವರಿಗೂ ಫೋನ್‌ ಮಾಡಿ ನಿಮ್ಮನ್ನು ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಕ ಮಾಡಿಸುತ್ತೇನೆ ಎಂದಿದ್ದ. ಭಾಸ್ಕರ್‌ ರಾವ್‌ ಅವರೂ ಆತನ ಬಗ್ಗೆ ಗೊತ್ತಿಲ್ಲದೆ ಮಾತನಾಡಿರಬಹುದು’ ಎಂದೂ ಮೂಲಗಳು ವಿವರಿಸಿವೆ.

ಆಗಸ್ಟ್‌ 2ರಂದು ಭಾಸ್ಕರರಾವ್‌ ಅವರನ್ನು ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಿಸಿ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ, ಫರಾಜ್‌ ಜೊತೆ ಅವರು ನಡೆಸಿದ್ದಾರೆನ್ನಲಾದ ಸಂಭಾಷಣೆ ಧ್ವನಿ ಸುರುಳಿಯನ್ನು ಟಿ.ವಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು. ಈ ಕೆಲಸಕ್ಕೆ ಮತ್ತೊಬ್ಬ ಇನ್‌ಸ್ಪೆಕ್ಟರ್‌ ನೆರವು ಪಡೆಯಲಾಗಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

Post Comments (+)