ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡೇಶ್ವರಿ ವಾರ್ಡ್: ಹಂದಿ ಕಾಟಕ್ಕೆ ಬೇಸತ್ತ ನಿವಾಸಿಗಳು

Last Updated 30 ಜೂನ್ 2019, 20:15 IST
ಅಕ್ಷರ ಗಾತ್ರ

ಯಲಹಂಕ: ಚೌಡೇಶ್ವರಿ ವಾರ್ಡ್‌ ವ್ಯಾಪ್ತಿಯ ಕೊಂಡಪ್ಪ ಬಡಾವಣೆ ಮತ್ತು ಕಾಮಾಕ್ಷಮ್ಮ ಬಡಾವಣೆಯಲ್ಲಿ ಹಂದಿಗಳ ಓಡಾಟದಿಂದ ಸ್ಥಳೀಯ ನಿವಾಸಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಬಡಾವಣೆಯ ಚರಂಡಿಗಳ ಕೆಸರಿನ ಗುಂಡಿಯಲ್ಲಿ ಹಂದಿಗಳು ಬಿದ್ದು ಹೊರಳಾಡುತ್ತಿರುತ್ತವೆ. ಇವುಗಳ ಜೊತೆಗೆ ನಾಯಿಗಳೂ ಸೇರಿಕೊಂಡು ಹಗಲು-ರಾತ್ರಿಯೆನ್ನದೆ ಕಿತ್ತಾಡಿಕೊಂಡು ನಾಗರಿಕರ ಮೇಲೆ ಎರಗುವುದರಿಂದ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಆತಂಕದಿಂದ ಸಂಚರಿಸಬೇಕಾಗಿದೆ. ಜನರು ನಾಲ್ಕೈದು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರೂ ಹಂದಿಗಳ ಕಾಟ ತಡೆಗಟ್ಟಲು ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರು ಆರೋಪ.

ವಾಹನಗಳನ್ನು ಚಲಾಯಿಸುವ ಸಂದರ್ಭದಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ಹಲವು ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಂಡಿದ್ದಾರೆ. ಮನೆಯ ಆವರಣದಲ್ಲಿ ಬೆಳೆದಿರುವ ಹೂವು ಮತ್ತು ಸೊಪ್ಪಿನ ಗಿಡಗಳನ್ನು ತಿಂದು ಹಾಳುಮಾಡುತ್ತಿವೆ. ಹಂದಿಗಳ ಕಾಟದಿಂದ ಸಣ್ಣ ಮಕ್ಕಳನ್ನು ಹೊರಗೆ ಬಿಡಲು ಭಯವಾಗುತ್ತದೆ ಎಂದು ಸ್ಥಳೀಯ ನಿವಾಸಿ ರಾಜು ತಿಳಿಸಿದರು.

‘ಕೆಸರಿನಲ್ಲಿ ಹೊರಳಾಡಿಕೊಂಡು ಬರುವ ಹಂದಿಗಳು ಮನೆಗಳ ಮುಂದೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ಗುದ್ದಿ ಬೀಳಿಸುವುದರ ಜೊತೆಗೆ, ತೊಳೆದು ನಿಲ್ಲಿಸಿರುವ ವಾಹನಗಳಿಗೆ ಮೈ ಉಜ್ಜುವುದರಿಂದ ವಾಹನಗಳಿಗೆ ಕೆಸರು ಅಂಟಿಕೊಳ್ಳುತ್ತಿದೆ. ಪ್ರತಿದಿನ 12 ರಿಂದ 14 ಹಂದಿಗಳ ತಂಡ, ಬಡಾವಣೆಯ ರಸ್ತೆ, ಚರಂಡಿಗಳಲ್ಲಿ ಸಂಚರಿಸುತ್ತದೆ. ಇವುಗಳ ಓಡಾಟದ ರಭಸಕ್ಕೆ ಚರಂಡಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವೆಲ್ಲಾ ರಸ್ತೆಯ ಮೇಲೆ ಹರಡುತ್ತಿದೆ’ ಎಂದು ಕೊಂಡಪ್ಪ ಬಡಾವಣೆ ನಿವಾಸಿ ವೆಂಕಟೇಶ್ ದೂರಿದರು.

ಕೆರೆಗೆ ಹೊಂದಿಕೊಂಡಂತಿರುವ ಮನೆಗಳ ನಿವಾಸಿಗಳು ಹಾಗೂ ಕೆರೆಯ ಸುತ್ತ ಪ್ರತಿನಿತ್ಯ ವಾಯುವಿಹಾರಕ್ಕೆಂದು ಬರುವ ನಾಗರಿಕರು ದುರ್ವಾಸನೆಯಿಂದ ತೊಂದರೆ ಅನುಭವಿಸಬೇಕಾಗಿದೆ. ಹಂದಿಗಳ ಕಾಟವನ್ನು ತಡೆಗಟ್ಟಬೇಕೆಂದು ಸ್ಥಳೀಯ ನಿವಾಸಿಗಳು ಬಿಬಿಎಂಪಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT