ಭಾನುವಾರ, ಅಕ್ಟೋಬರ್ 20, 2019
27 °C
ಗಾಂಧಿ ಜಯಂತಿ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯ 43 ಕಡೆ

ಓಡೋಡಿ ಹೆಕ್ಕಿದ್ದು 7.5 ಟನ್‌ ಪ್ಲಾಸ್ಟಿಕ್‌

Published:
Updated:

ಬೆಂಗಳೂರು: ಸ್ವಚ್ಛತೆ ಹಾಗೂ ದೈಹಿಕ ಶ್ರಮದ ಮಹತ್ವ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ಸಂಭ್ರಮವನ್ನು ನಗರದ ಜನತೆ ಅರ್ಥಪೂರ್ಣವಾಗಿ ಆಚರಿಸಿದರು. ಬಿಬಿಎಂಪಿ ವ್ಯಾಪ್ತಿಯ 43 ತಾಣಗಳಲ್ಲಿ ಓಡೋಡುತ್ತಲೇ ಕಸ ಹೆಕ್ಕಿದರು. ಪಾಲಿಕೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಪ್ಲಾಗ್‌ ರನ್‌ ಅಭಿಯಾನದಲ್ಲಿ ಒಟ್ಟು 7.5 ಟನ್‌ ಪ್ಲಾಸ್ಟಿಕ್‌ ಕಸ ಸಂಗ್ರಹವಾಯಿತು.

ಪಾಲಿಕೆಯು ಕಳೆದ ವರ್ಷ ‘ಇಂಡಿಯಾ ಪ್ಲಾಗ್ ರನ್‌’ ಸಂಸ್ಥೆ ನೆರವಿನಿಂದ ಗಿನ್ನೆಸ್‌ ದಾಖಲೆಗಾಗಿ ನಗರದಲ್ಲಿ ಪ್ಲಾಗ್‌ ರನ್‌ ಹಮ್ಮಿಕೊಂಡಿತ್ತು. ಒಟ್ಟು 34 ಟನ್‌ ಸಂಗ್ರಹಕ್ಕೆ ಕಾರಣವಾದ ಈ ಕಾರ್ಯಕ್ರಮ ದಾಖಲೆಯನ್ನೂ ನಿರ್ಮಿಸಿತ್ತು. ಇದರಿಂದ ಉತ್ತೇಜನಗೊಂಡಿದ್ದ ಇಂಡಿಯಾ ಪ್ಲಾಗ್ ರನ್‌ ಸಂಸ್ಥೆ ಈ ಬಾರಿ ಗಾಂಧಿ ಜಯಂತಿ ಅಂಗವಾಗಿ ದೇಶದ 50 ನಗರಗಳಲ್ಲಿ ಈ ಅಭಿಯಾನ ಏರ್ಪಡಿಸಿತ್ತು. ಈ ಬಾರಿ ಗೋ ನೇಟಿವ್, ಯುನೈಟೆಡ್ ವೇ ಸಂಸ್ಥೆಗಳ ನೆರವಿನಲ್ಲಿ ಆಯೋಜಿಸಿದ್ದ ಈ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಮತ್ತಿಕೆರೆ ವಾರ್ಡ್‌ನಲ್ಲಿ ಚಾಲನೆ ನೀಡಿದರು.

‘ಇಂತಹ ಕಾರ್ಯಗಳಿಂದ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಉಂಟಾಗುತ್ತದೆ. ಮಹಾತ್ಮ ಗಾಂಧಿ ಅವರ ಪರಿಕಲ್ಪನೆಯಂತೆ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಜನ ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಇದರ ಕಟ್ಟುನಿಟ್ಟಿನ ಜಾರಿಗೆ ಜನರ ಸಹಕಾರವೂ ಅಗತ್ಯ’ ಎಂದು ತಿಳಿಸಿದರು. 

ಸಾರ್ವಜನಿಕರು, ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳ ಕಾರ್ಯ ಕರ್ತರೂ ಸೇರಿದಂತೆ ಸಾವಿರಾರು ಮಂದಿ ಈ ಅಭಿಯಾನದಲ್ಲಿ ಕೈಜೋಡಿಸಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕರ್ನಾಟಕ ರಾಜ್ಯಮಟ್ಟದ ಕಸ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಹಾಗೂ ಪಾಲಿಕೆಯ ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌, ಹೆಚ್ಚುವರಿ ಆಯುಕ್ತ ಡಿ.ರಂದೀಪ್‌ ಉಪಸ್ಥಿತರಿದ್ದರು.

ಪ್ಲಾಗ್‌ ರನ್‌ ಜೊತೆಗೆ ನಗರದ ಕೆಲವು ವಾರ್ಡ್‌ಗಳಲ್ಲಿ ‘ಸಾಮೂಹಿಕ ಸ್ವಚ್ಛತಾ ಅಭಿಯಾನ’ವೂ ನಡೆಯಿತು. ಪೌರಕಾರ್ಮಿಕರು ಹಾಗೂ ಸ್ವಯಂಸೇವಕರು ಕಸದ ರಾಶಿಗಳನ್ನು ತೆರವುಗೊಳಿಸಿದರು.

‘ಪ್ಲಾಗ್‌ ರನ್‌ನಲ್ಲಿ ಕಸವನ್ನು ದೊಡ್ಡಬಿದಿರಕಲ್ಲು ಹಾಗೂ ಚಿಕ್ಕನಾಗಮಂಗಲದ ಒಣ ಕಸ ಸಂಗ್ರಹ ಕೇಂದ್ರಗಳಲ್ಲಿ ದಾಸ್ತಾನು ಮಾಡಿದ್ದೇವೆ. ಅವುಗಳಲ್ಲಿ ಮರುಸಂಸ್ಕರಣೆ ಮಾಡಲು ಸಾಧ್ಯವಾಗದ ಕಸವನ್ನು ಸಿಮೆಂಟ್‌ ಕಾರ್ಖಾನೆಗಳಿಗೆ ಕಳುಹಿಸುತ್ತೇವೆ’ ಎಂದು ಡಿ. ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಕಾರ್ಯಕ್ರಮ: ಮೇಯರ್‌ ಚಕ್ಕರ್‌

ಬಿಬಿಎಂಪಿಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪ್ಲಾಗ್‌ ರನ್‌ ಅಭಿಯಾನಕ್ಕೆ ಸ್ವತಃ ಮೇಯರ್‌ ಎಂ.ಗೌತಮ್ ಕುಮಾರ್ ಅವರೇ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. ‘ಮನೆಯಿಂದ ಹೊರಡುವಾಗ ವಿಳಂಬವಾಗಿದ್ದರಿಂದ ಅವರು ಪ್ಲಾಗ್‌ ರನ್‌ ಬದಲು, ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಉದ್ಯಾನದ ಬಳಿ ಆಯೋಜಿಸಿದ್ದ ಸರ್ವ ಧರ್ಮ ಪ್ರಾರ್ಥನೆಗೆ ತೆರಳಿದರು’ ಎಂದು ಅವರ ಆಪ್ತರೊಬ್ಬರು ತಿಳಿಸಿದರು. ಉಪಮೇಯರ್‌ ಸಿ.ಆರ್. ರಾಮಮೋಹನ ರಾಜು ಅವರೂ ಪ್ಲಾಗ್‌ ರನ್‌ ಅಭಿಯಾನದಲ್ಲಿ ಭಾಗವಹಿಸಲಿಲ್ಲ.

‘ಮತ್ತಿಕೆರೆಯಲ್ಲಿ ಬೆಳಿಗ್ಗೆ 7.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಶುಭ ಕೋರಲು ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಮನೆಗೆ ಬಂದಿದ್ದರು. ಅವರನ್ನೆಲ್ಲ ಕಳುಹಿಸಿಕೊಟ್ಟು ಮನೆಯಿಂದ ಹೊರಡುವಾಗ ವಿಳಂಬವಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ರಾಮಮೋಹನ್ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)