ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋಮಿತಿ ಹೆಚ್ಚಿಸದಿದ್ದರೆ ಪಿಐಎಲ್‌

ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿ ಅರ್ಜಿ ಸಲ್ಲಿಕೆಗೆ ಇಂದು ಕೊನೆಯ ದಿನ
Last Updated 13 ಜುಲೈ 2020, 5:54 IST
ಅಕ್ಷರ ಗಾತ್ರ

ಕಲಬುರ್ಗಿ: ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ವಯೋಮಿತಿ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಅಂತಿಮ ನಿರ್ಣಯ ಕೈಗೊಳ್ಳದ ಕಾರಣ ನಿರಾಸೆಗೊಂಡಿರುವ ಸಾವಿರಾರು ಆಕಾಂಕ್ಷಿಗಳು ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ.

‘ಮುಖ್ಯಮಂತ್ರಿ, ಗೃಹಸಚಿವರು, ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಹಲವು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಸೂಚನೆ ಹೊರಡಿಸಿದ ಆರಂಭದ ದಿನಾಂಕದಿಂದ ಅಭ್ಯರ್ಥಿಗಳ ವಯಸ್ಸನ್ನು ಪರಿಗಣಿಸುವಂತೆ ಮಾಡಿಕೊಂಡ ಮನವಿಗೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸುವ ಬಗ್ಗೆ ಕಾನೂನು ಪರಿಣಿತರ ಜೊತೆ ಚರ್ಚೆ ನಡೆಸಿದ್ದೇವೆ’ ಎಂದು ಅಭ್ಯರ್ಥಿಗಳಾದ ಮಂಡ್ಯದ ಶರತ್, ವಿಜಯಪುರದ ಶಾಂತಗೌಡ, ಆನಂದ್‌ ಮತ್ತು ಕಲಬುರ್ಗಿಯ ರೇಖಾ ಬಿರಾದಾರ ಹೇಳಿದರು.

ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 13 ಅಂತಿಮ ದಿನ.

‘ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ‘ಪ್ರಜಾವಾಣಿ’ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನಾವು ಕರೆ ಮಾಡಿದಾಗ ವಯೋಮಿತಿ ಹೆಚ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದರು.ಆ ಬಳಿಕ ಅವರನ್ನು ಸಂಪರ್ಕಿಸಿದಾಗ ಅರ್ಜಿ ಹಾಕಲು ಅವಕಾಶ ಕೊಡಿಸುವ ನಿಟ್ಟಿನಲ್ಲಿ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳಿಗೆ ಮಾಡಿದರಂತೆ ನಮಗೂ ವಯೋಮಿತಿ ಹೆಚ್ಚಿಸುವುದಾಗಿ ತಿಳಿಸಿದ್ದರು. ಆದರೆ, ಅರ್ಜಿ ಸಲ್ಲಿಕೆ ಅವಧಿ ಮುಗಿಯುತ್ತಾ ಬಂದರೂ ಈ ಬಗ್ಗೆ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಇದರಿಂದ ಆಕಾಂಕ್ಷಿಗಳಿಗೆ ದಿಕ್ಕು ತೋಚದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನೇಮಕಾತಿ ಸ್ಥಗಿತಕ್ಕೆ ಆರ್ಥಿಕ ಇಲಾಖೆ ಸೂಚನೆ: ಏತನ್ಮಧ್ಯೆ ಪೊಲೀಸ್ ಕಾನ್‌ಸ್ಟೆಬಲ್‌ ಸೇರಿದಂತೆ ಎಲ್ಲ ಬಗೆಯ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆರ್ಥಿಕ ಇಲಾಖೆ ಗೃಹ ಇಲಾಖೆಗೆ ಸೂಚಿಸಿದೆ. ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಅಲ್ಲದೇ, ಲಾಕ್‌ಡೌನ್‌ ಇದ್ದುದರಿಂದ ಸರ್ಕಾರಕ್ಕೆ ವರಮಾನ ಬರುತ್ತಿಲ್ಲ. ಹೀಗಾಗಿ, ಮುಂದಿನ ಸೂಚನೆವರೆಗೆ ಪ್ರಕ್ರಿಯೆ ನಿಲ್ಲಿಸುವಂತೆ ಆರ್ಥಿಕ ಇಲಾಖೆ ಸೂಚಿಸಿದೆ.

‘ರಾಜ್ಯದಲ್ಲಿ ಸಾಕಷ್ಟು ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇದ್ದು, ಕಾನೂನು ಸುವ್ಯವಸ್ಥೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಅಲ್ಲದೇ, ಈಗ ಪ್ರಕ್ರಿಯೆ ಆರಂಭವಾದರೂ ಲಿಖಿತ ಪರೀಕ್ಷೆ, ದೇಹದಾರ್ಡ್ಯ ಪರೀಕ್ಷೆ, ತರಬೇತಿ ಪಡೆದು ಪ್ರೊಬೇಷನರಿ ಮುಗಿಯುವುದರೊಳಗೆ ಒಂದೂವರೆ ವರ್ಷ ಬೇಕಾಗಬಹುದು. ಆಗ ಕೊರೊನಾ ನಿಯಂತ್ರಣಕ್ಕೆ ಬಂದಿರುತ್ತದೆ. ಹೀಗಾಗಿ, ನೇಮಕಾತಿ ಪ್ರಕ್ರಿಯೆಗೆ ಅವಕಾಶ ಕೊಡಿ ಎಂದು ಆರ್ಥಿಕ ಇಲಾಖೆಗೆ ಮರು ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT