ಮಂಗಳವಾರ, ಮಾರ್ಚ್ 9, 2021
28 °C
ಕದ್ದು ಮುಚ್ಚಿ ಕಸ ಸಾಗಣೆ l ಪತ್ತೆ ಹಚ್ಚಿದ ಗ್ರಾಮಸ್ಥರು

ಕಲ್ಲಿನ ಕ್ವಾರಿಗೆ ಕಸ: ಮೈಲಸಂದ್ರದಲ್ಲಿ 5 ಲಾರಿ ಪೊಲೀಸ್‌ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ (ಬೆಂಗಳೂರು): ತಡ ರಾತ್ರಿ ವೇಳೆ ಕಲ್ಲಿನ ಕ್ವಾರಿಯಲ್ಲಿ ಕಸ ಸುರಿಯುತ್ತಿರುವುದನ್ನು ದೊಡ್ಡ ತೋಗೂರು ಪಂಚಾಯಿತಿಯ ಮೈಲಸಂದ್ರ ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ. ಐದು ಟಿಪ್ಪರ್ ಲಾರಿಗಳು ಮತ್ತು ಚಾಲಕ ಸೇರಿದಂತೆ ನಾಲ್ವರು ಕಾರ್ಮಿಕರನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಮೂರು ತಿಂಗಳಿಂದ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ ರಾತ್ರಿ ವೇಳೆ ಕಸ ಸುರಿಯಲಾಗುತ್ತಿತ್ತು. ಆದರೆ, ಕಸ ಸುರಿಯುತ್ತಿರುವುದು ಯಾರು ಎಂಬುದು ಗೊತ್ತಾಗಿರಲಿಲ್ಲ. ಇದನ್ನು ಪತ್ತೆ ಮಾಡಲು ಗ್ರಾಮದ ಯುವಕರು ಗುರುವಾರ ರಾತ್ರಿಯಿಡೀ ಕಾವಲು ಕಾದರು.

ಬೆಳಗಿನ ಜಾವ 3 ಗಂಟೆ ಸಮಯದಲ್ಲಿ 10 ಲಾರಿಗಳು ಕಸ ತುಂಬಿಕೊಂಡು ಬಂದಿದ್ದನ್ನು ಗಮನಿಸಿ ಯುವಕರು, ತಕ್ಷಣವೇ ಕಾರ್ಯಪ್ರವೃತ್ತರಾದರು. ಇದನ್ನರಿತ ಲಾರಿಯಲ್ಲಿದ್ದ ಕೆಲವರು 5 ಲಾರಿಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ನಾಲ್ಕು ಮಂದಿ ಮಾತ್ರ ಸಿಕ್ಕಿಬಿದ್ದರು. ಅವರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಒಪ್ಪಿಸಲಾಗಿದೆ. ಲಾರಿ ಟೈರ್‌ಗಳ ಗಾಳಿ ತೆಗೆದು ಕ್ವಾರಿ ಬಳಿಯೇ ನಿಲ್ಲಿಸಲಾಗಿದೆ. ಈ ಸಂಬಂಧ ಗ್ರಾಮಸ್ಥರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘3–4 ಮಕ್ಕಳಿಗೆ ವಾಂತಿ–ಭೇದಿ ಆಗುತ್ತಿತ್ತು. ಇದ್ದಕ್ಕಿದ್ದಂತೆ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಯಿತು. ಗಬ್ಬು ವಾಸನೆ ಬೀರಲು ಶುರುವಾಯಿತು. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ, ಕ್ವಾರಿಯಲ್ಲಿ ಕಸ ಸುರಿದು, ಅದರ ಮೇಲೆ ಮಣ್ಣು ಮುಚ್ಚಿ ಹೋಗುತ್ತಿದ್ದುದು ಗಮನಕ್ಕೆ ಬಂತು. ಇದನ್ನು ಪತ್ತೆ ಹಚ್ಚಲು ಕೆಲವು ದಿನಗಳ ಹಿಂದೆ ಕಾವಲು ಕಾದರೂ ಪ್ರಯೋಜನ ಆಗಿರಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.

ಬೇಗೂರು ವಾರ್ಡ್‌ನ ದೊಡ್ಡಕಮ್ಮನಹಳ್ಳಿ ಬಳಿಯೂ ರಾತ್ರಿ ವೇಳೆ ಕಸ ಸುರಿಯಲಾಗುತ್ತಿತ್ತು. ಬಿಬಿಎಂಪಿ ಸಿಬ್ಬಂದಿ ಒಂದು ಲಾರಿಯನ್ನು ವಶಪಡಿಸಿಕೊಂಡಿದ್ದರು. ಉಳಿದವರು ಲಾರಿ ಸಮೇತ ಪರಾರಿಯಾಗಿದ್ದರು. ಇದೇ ಗುಂಪು ಮೈಲಸಂದ್ರ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದೆ ಎನ್ನಲಾಗಿದೆ.

‘ನೈಸ್ ರಸ್ತೆ ಬಳಿ ಬಸಾಪುರ, ದೊಡ್ಡ ಕಮ್ಮನಹಳ್ಳಿ ಹಾಗೂ ಕೊಪ್ಪರಸ್ತೆಯಲ್ಲಿ ಈ ಗುಂಪು ಕಸ ಸುರಿದು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ನಾವು ರಾತ್ರಿ ಕಾವಲು ಕಾದು ಇವರನ್ನು ಹಿಡಿದಿದ್ದೆವು. ಇವರು ಬಿಬಿಎಂಪಿ ಸಿಬ್ಬಂದಿ ಮೇಲೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ನಗರದ ಮಾರುಕಟ್ಟೆಯಿಂದ ಈ ಕಸ ತಂದಿರುವುದು ಬೆಳಕಿಗೆ ಬಂದಿತ್ತು’ ಎಂದು ಪಾಲಿಕೆಯ ಆರೋಗ್ಯ ನಿರೀಕ್ಷಕರೊಬ್ಬರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು