ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ ಡ್ರೈವ್‌ ಪ್ರಕರಣ | ಪ್ರಜ್ವಲ್‌ ತಪ್ಪು ಸಾಬೀತಾದರೆ ಶಿಕ್ಷಿಸಲಿ: ದೇವೇಗೌಡ

Published 19 ಮೇ 2024, 0:30 IST
Last Updated 19 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಪ್ಪು ಮಾಡಿರುವುದು ಸಾಬೀತಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

92ನೇ ವರ್ಷಕ್ಕೆ ಕಾಲಿಟ್ಟ ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಮೊಮ್ಮಗ ಪ್ರಜ್ವಲ್ ರೇವಣ್ಣ ಮತ್ತು ಮಗ ಎಚ್.ಡಿ. ರೇವಣ್ಣ ವಿರುದ್ಧದ ಆರೋಪಗಳ ಕುರಿತು ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಎಚ್.ಡಿ.‌ರೇವಣ್ಣ ವಿರುದ್ಧದ ಪ್ರಕರಣವನ್ನು ಸೃಷ್ಟಿಸಲಾಗಿದೆ. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಈಗ‌ ಮಾತನಾಡುವುದಿಲ್ಲ. ಒಂದು ಪ್ರಕರಣದಲ್ಲಿ ರೇವಣ್ಣ ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮತ್ತೊಂದು ಪ್ರಕರಣದಲ್ಲಿ ಜಾಮೀನು ಅರ್ಜಿಯ ವಿಚಾರಣೆ ಪ್ರಗತಿಯಲ್ಲಿದೆ. ಈಗ ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿದರು.

‘ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಹಲವರಿದ್ದಾರೆ. ಎಲ್ಲರಿಗೂ ಶಿಕ್ಷೆ ಆಗಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಬೇಕು’ ಎಂದರು.

‘ಈ ಪ್ರಕರಣದ ಹಿಂದೆ ಯಾರಿದ್ದಾರೆ? ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೇವೆ ಎಂಬುದರ ಕುರಿತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಎಚ್.ಡಿ. ಕುಮಾರಸ್ವಾಮಿ ಮಾತನಾಡುತ್ತಾರೆ. ಅವರು ಈಗಾಗಲೇ ಮಾತನಾಡಿದ್ದಾರೆ. ಮುಂದೆಯೂ ಅವರೇ ಸ್ಪಷ್ಟ ನಿಲುವನ್ನು ಪ್ರಕಟಿಸುತ್ತಾರೆ’ ಎಂದು ತಿಳಿಸಿದರು.

‘ಪ್ರಜ್ವಲ್ ಪ್ರಕರಣದ ಪೆನ್ ಡ್ರೈವ್ ವಿತರಣೆ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ’ ಎಂಬ ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ದೇವೇಗೌಡ, ‘ಮಾಧ್ಯಮಗಳ ಮೂಲಕ ಈ ಕುರಿತು ತಿಳಿಯಿತು. ಆ ಬಗ್ಗೆಯೂ ಕುಮಾರಸ್ವಾಮಿ ಅವರೇ ಹೇಳುತ್ತಾರೆ. ಮುಂದಿನ ನಡೆಯ ಕುರಿತು ಅವರೇ ಪ್ರಕಟಿಸುತ್ತಾರೆ’ ಎಂದರು.

‘ನಾನು ಲೋಕಸಭಾ ಚುನಾವಣೆಯಲ್ಲಿ ಪ್ರಚಾರ‌ ಮಾಡಿದ್ದೇನೆ. ಜೂನ್ 4ರ ನಂತರ ನಿಮ್ಮನ್ನು ಭೇಟಿಯಾಗುವೆ’ ಎಂದ ಅವರು, ತಮ್ಮ ಮನೆಯ ಬಳಿಯಿಂದ‌ ನಿರ್ಗಮಿಸುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ‌ ಮಾಡಿದರು.

ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್
Interview with IT BT & Tourism Minister Priyank Kharge. .. To go with Ganesh story..- Photo/ Prashanth HG
ಪ್ರಿಯಾಂಕ್ ಖರ್ಗೆ
Interview with IT BT & Tourism Minister Priyank Kharge. .. To go with Ganesh story..- Photo/ Prashanth HG ಪ್ರಿಯಾಂಕ್ ಖರ್ಗೆ
ಎನ್.ಚಲುವರಾಯಸ್ವಾಮಿ
ಎನ್.ಚಲುವರಾಯಸ್ವಾಮಿ
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ

‘ಆರೋಪ ಸಾಬೀತುಪಡಿಸಿದರೆ ಕ್ಷಮೆ ಯಾಚಿಸುವೆ’: ‘ಪ್ರಜ್ವಲ್‌ ರೇವಣ್ಣಗೆ ಸಂಬಂಧಿಸಿದ ಪೆನ್‌ ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಲು ಆಮಿಷ ಒಡ್ಡಿದ್ದ ಆರೋಪವನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಸಾಬೀತುಪಡಿಸಿದರೆ ಬೇಷರತ್‌ ಕ್ಷಮೆ ಯಾಚಿಸಲು ಸಿದ್ಧ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ಸಚಿವರಾದ ಕೃಷ್ಣ ಬೈರೇಗೌಡ ಪ್ರಿಯಾಂಕ್‌ ಖರ್ಗೆ ಪಾತ್ರವೂ ಇಲ್ಲ. ಏಪ್ರಿಲ್‌ 25ರ ವೇಳೆಗೆ ಪ್ರಕರಣ ಹೊರಬಿತ್ತು. ಏಪ್ರಿಲ್‌ 30ರ ಬಳಿಕ ಪ್ರಕರಣದ ಕಾವು ಏರಿತು. ನನಗೆ ನನ್ನ ಇಲಾಖೆಯ ಕೆಲಸ ಮಾಡುವುದೇ ಸಾಕಷ್ಟಿದೆ. ಇಂತಹ ಪ್ರಕರಣಗಳಲ್ಲಿ ಕೈ ಹಾಕಲು ಸಮಯವಿಲ್ಲ’ ಎಂದರು. ‘ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಕಾರ್ತಿಕ್‌ ಮತ್ತು ದೇವರಾಜೇಗೌಡ ಪ್ರಮುಖ ಆರೋಪಿಗಳು. ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಹೊರ ಬರುತ್ತದೆ. ಶಿವರಾಮೇಗೌಡ ನಮ್ಮ ಪಕ್ಷದಲ್ಲಿಲ್ಲ. ನಾನು ಅವರ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ಅವರ ಜತೆ ವಿಶ್ವಾಸವಿರಬಹುದು ಆದರೆ ರಾಜಕೀಯ ನಂಟು ಇಲ್ಲ’ ಎಂದು ಹೇಳಿದರು. ‘ಡಿ.ಕೆ. ಶಿವಕುಮಾರ್‌ ಈ ರಾಜ್ಯದ ಉಪ ಮುಖ್ಯಮಂತ್ರಿ. ಪ್ರಕರಣದ ಮಾಹಿತಿ ಕೊಡಲು ದೇವರಾಜೇಗೌಡ ಶಿವಕುಮಾರ್ ಅವರನ್ನು ಸಂಪರ್ಕಿಸಿರಬಹುದು. ಅದನ್ನೇ ತಿರುಚಿ ಆರೋಪ ಮಾಡುವುದು ಸರಿಯಲ್ಲ’ ಎಂದರು. ಪ್ರಜ್ವಲ್‌ ಕರೆಸಲಿ: ‘ಎಚ್‌.ಡಿ. ಕುಮಾರಸ್ವಾಮಿ ಅವರು ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆಸಲಿ. ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಶರಣಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಲಿ. ಆತ ಶರಣಾದರೆ ತನಿಖೆ ಮುಂದಕ್ಕೆ ಸಾಗುತ್ತದೆ. ಸತ್ಯ ಹೊರಬರಲು ಸಾಧ್ಯವಾಗುತ್ತದೆ’ ಎಂದು ಚಲುವರಾಯಸ್ವಾಮಿ ಹೇಳಿದರು. ‘ರೇವಣ್ಣ ವಿರುದ್ಧ ಪ್ರಕರಣ ಸೃಷ್ಟಿಸಲಾಗಿದೆ’ ಎಂಬ ಎಚ್‌.ಡಿ. ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುವಾಗ ಸಿಕ್ಕ ಸಾಕ್ಷ್ಯದ ಆಧಾರದಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೇವಣ್ಣ ಪಾತ್ರ ಇಲ್ಲದಿದ್ದರೆ ಏಕೆ ಪ್ರಕರಣ ದಾಖಲಿಸುತ್ತಿದ್ದರು’ ಎಂದು ಪ್ರಶ್ನಿಸಿದರು.

‘ದೇವರಾಜೇಗೌಡ ಮಾನಸಿಕ ಅಸ್ವಸ್ಥ’: ‘ಬಿಜೆಪಿ ಮುಖಂಡ ದೇವರಾಜೇಗೌಡ ಮಾನಸಿಕ ಅಸ್ವಸ್ಥ. ಆತನ ಆರೋಪಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ತಲೆ ಕೆಟ್ಟವರನ್ನು ಆಸ್ಪತ್ರೆಗೆ ಸೇರಿಸಬೇಕಿದೆ. ಅಂತಹವರು ಆಡುವ ಮಾತುಗಳಿಗೆ ಮಾಧ್ಯಮಗಳು ಪ್ರಚಾರ ಕೊಡುವುದು ಸರಿಯಲ್ಲ’ ಎಂದರು. ‘ದೇವರಾಜೇಗೌಡನ ಜತೆ ನಾನು ಏನನ್ನೂ ಮಾತನಾಡಿಲ್ಲ. ನಾನು ಈ ರಾಜ್ಯದ ಉಪ ಮುಖ್ಯಮಂತ್ರಿ. ಸಾವಿರಾರು ಜನರು ನನ್ನನ್ನು ಭೇಟಿಮಾಡುತ್ತಾರೆ. ಅವರೆಲ್ಲರನ್ನೂ ಸ್ಕ್ಯಾನ್‌ ಮಾಡಿ ನೋಡಲು ಆಗುವುದಿಲ್ಲ. ನಾನು ಯಾರ ಜತೆಗೂ ತಪ್ಪು ಮಾತನಾಡಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು. ‘ಬೌರಿಂಗ್‌ ಕ್ಲಬ್‌ನ ಕೊಠಡಿ ಸಂಖ್ಯೆ 110ಕ್ಕೆ ₹ 5 ಕೋಟಿ ನಗದು ಕಳುಹಿಸಿದ್ದರು’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ‘ಏನಾದರೂ ಒಳ್ಳೆಯ ವಿಚಾರ ಇದ್ದರೆ ಮಾತನಾಡಿ. ರಾಜ್ಯದಲ್ಲಿ ಮಳೆ ಬೆಳೆ ಬರಗಾಲ ಇದರ ಬಗ್ಗೆ ಬೇಕಿದ್ದರೆ ಮಾತನಾಡಿ’ ಎಂದು ಹೇಳಿದರು. ‘ತಮ್ಮ ಕುಟುಂಬದ ವಿರುದ್ಧ ಪಿತೂರಿ ನಡೆಯುತ್ತಿದೆ’ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ ‘ಈ ದಿನ ಗೌಡರ ಜನ್ಮದಿನ. ಅವರು ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಅವರಿಗೆ ದೇವರು ಒಳ್ಳೆಯ ಆರೋಗ್ಯ ಸಂತೋಷ ನೆಮ್ಮದಿ ಕೊಡಲಿ. ದುಃಖದಿಂದ ಹೊರಬರಲಿ ಎಂದು ಸರ್ಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ’ ಎಂದರು.

ಅಮಿತ್‌ ಶಾ ಆಶೀರ್ವಾದ ಇರಬಹುದು: ಪ್ರಿಯಾಂಕ್‌ ಖರ್ಗೆ

‘ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೊಗಳುಳ್ಳ ಪೆನ್‌ ಡ್ರೈವ್‌ ಬಹಿರಂಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಶೀರ್ವಾದ ಇರಬಹುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ಪೆನ್‌ ಡ್ರೈವ್‌ ಪ್ರಕರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಲು ಡಿ.ಕೆ. ಶಿವಕುಮಾರ್‌ ಪ್ರಿಯಾಂಕ್‌ ಖರ್ಗೆ ಕೃಷ್ಣ ಬೈರೇಗೌಡ ಮತ್ತು ಎನ್. ಚಲುವರಾಯಸ್ವಾಮಿ ಆಮಿಷ ಒಡ್ಡಿದ್ದರು’ ಎಂಬ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು. ‘ದೇವರಾಜೇಗೌಡ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದವರು. ಅವರು ನೇರವಾಗಿ ಅಮಿತ್‌ ಶಾ ಜತೆ ಸಂಪರ್ಕ ಹೊಂದಿದ್ದರು. ಅಮಿತ್‌ ಶಾ ಆಶೀರ್ವಾದದಿಂದಲೇ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹಿಂದೆ ಹೇಳಿಕೊಂಡಿದ್ದರು. ಪೆನ್‌ ಡ್ರೈವ್‌ ಬಹಿರಂಗಕ್ಕೂ ಅಮಿತ್‌ ಶಾ ಆಶೀರ್ವಾದ ಇದ್ದಿರಬಹುದು’ ಎಂದರು. ‘₹ 100 ಕೋಟಿ ಆಮಿಷ ಒಡ್ಡಿ ₹ 5 ಕೋಟಿ ಮುಂಗಡ ನೀಡಲಾಗಿತ್ತು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಅದು ನಿಜವೇ ಆಗಿದ್ದರೆ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಿ ಆದಾಯ ತೆರಿಗೆ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕಿತ್ತು. ವಕೀಲರಾಗಿರುವ ಅವರು ನ್ಯಾಯಾಧೀಶರ ಮುಂದಾದರೂ ಮಾಹಿತಿ ನೀಡಬೇಕಿತ್ತು’ ಎಂದು ಹೇಳಿದರು. ರಾಜೀನಾಮೆ ನೀಡಬೇಕಿತ್ತು: ‘ಎಚ್.ಡಿ. ದೇವೇಗೌಡರ ಕುಟುಂಬದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಹೊಂದಿದ್ದಾರೆ. ಪ್ರಜ್ವಲ್ ರೇವಣ್ಣ ನಡೆಸಿದ ಹೀನ ಕೃತ್ಯದ ನೈತಿಕ ಹೊಣೆ ಹೊತ್ತು ಅವರ ಕುಟುಂಬದವರೆಲ್ಲರೂ ರಾಜೀನಾಮೆ ನೀಡಬೇಕಿತ್ತು. ಆತನ ಕೃತ್ಯಕ್ಕಾಗಿ ರಾಜ್ಯದ ಜನರ ಕ್ಷಮೆ ಯಾಚಿಸಬೇಕಿತ್ತು. ಆದರೆ ಅವರಿಗೆ ಕುಟುಂಬ ಮತ್ತು ಪಕ್ಷವೇ ಮುಖ್ಯವಾಗಿದೆ’ ಎಂದು ವಾಗ್ದಾಳಿ ನಡೆಸಿದರು. ‘ಮಹಾನಾಯಕ ಷಡ್ಯಂತ್ರ ತಿಮಿಂಗಿಲ ಎಂದೆಲ್ಲ ಹೇಳಿಕೆ ನೀಡಿ ಜನರ ದಿಕ್ಕುತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರು ಸರಿಯಾಗಿ ಆತ್ಮಾವಲೋಕನ ಮಾಡಿಕೊಂಡು ಮನೆಯೊಳಕ್ಕೆ ಒಮ್ಮೆ ಶೋಧಿಸಲಿ. ಇವರ ಮನೆಯೊಳಗೆ ಎಷ್ಟು ತಿಮಿಂಗಿಲಗಳಿವೆ ಎಂಬುದು ಗೊತ್ತಾಗುತ್ತದೆ’ ಎಂದರು.

ಸಿಬಿಐ ತನಿಖೆಗೆ ವಿಜಯೇಂದ್ರ ಆಗ್ರಹ: ಹಾಸನದ ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ವೈ.ವಿಜಯೇಂದ್ರ ಆಗ್ರಹಿಸಿದರು. ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ಪೆನ್‌ಡ್ರೈವ್‌ ಪ್ರಕರಣ ಕುರಿತು ನಿತ್ಯವೂ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಸರ್ಕಾರದ ಘಟಾನುಘಟಿಗಳ ಹೆಸರು ತಳುಕು ಹಾಕಿಕೊಳ್ಳುತ್ತಿವೆ. ಎಸ್‍ಐಟಿಯಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಹಾಗಾಗಿ ಪ್ರಜ್ವಲ್‌ ರೇವಣ್ಣ ಪ್ರಕರಣ ಹಾಗೂ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯಾರು ಏನೇ ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಆರೋಪಿಗಳಲ್ಲಿದೆ. ಬಿಗಿ ಕ್ರಮ ಕೈಗೊಳ್ಳದೇ ಕೊಲೆ ಪ್ರಕರಣಗಳು ಹೆಚ್ಚಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಬಿಜೆಪಿ ಧ್ವನಿ ಎತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT