ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವಾರ್ಷಿಕ ಹಣಕಾಸು ಪರಿಶೀಲನಾ ವರದಿ ಮಂಡನೆ: ಎಫ್‌ಡಿಐ ಶೇ 46ರಷ್ಟು ಕುಸಿತ

Published 14 ಡಿಸೆಂಬರ್ 2023, 15:46 IST
Last Updated 14 ಡಿಸೆಂಬರ್ 2023, 15:46 IST
ಅಕ್ಷರ ಗಾತ್ರ

ವಿಧಾನಸಭೆ: ರಾಜ್ಯದಲ್ಲಿ ವಿದೇಶಿ ನೇರ ಹೂಡಿಕೆಯು (ಎಫ್‌ಡಿಐ) ಕಳೆದ ಆರ್ಥಿಕ ವರ್ಷದ ಮೊದಲ ಆರು ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಮೊದಲ ಆರು ತಿಂಗಳಲ್ಲಿ ಶೇಕಡ 46ರಷ್ಟು ಕುಸಿತವಾಗಿದೆ ಎಂದು ಹಣಕಾಸು ಇಲಾಖೆಯು ಮಂಡಿಸಿರುವ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ ಹೇಳಿದೆ.

ವರದಿಯನ್ನು ಗುರುವಾರ ಸದನದಲ್ಲಿ ಮಂಡಿಸಿದ್ದು, ‘2022–23ರ ಮೊದಲ ಆರು ತಿಂಗಳಲ್ಲಿ 5.3 ಶತಕೋಟಿ ಡಾಲರ್‌ಗಳಷ್ಟು ಎಫ್‌ಡಿಐ ರಾಜ್ಯಕ್ಕೆ ಬಂದಿತ್ತು. ಆದರೆ, 2023–24ರ ಮೊದಲ ಆರು ತಿಂಗಳಲ್ಲಿ 2.8 ಶತ ಕೋಟಿ ಡಾಲರ್‌ ಮಾತ್ರ ಹೂಡಿಕೆ ಹರಿದುಬಂದಿದೆ. 2.5 ಶತ ಕೋಟಿ ಡಾಲರ್‌ನಷ್ಟು ಕುಸಿತ ಕಂಡುಬಂದಿದೆ’ ಎಂಬ ಅಂಶ ಅದರದಲ್ಲಿದೆ.

ಮುಂದುವರಿದ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದೇ ಎಫ್‌ಡಿಐ ಹರಿವು ಕುಸಿಯಲು ಕಾರಣ. ದೇಶದ ನವೋದ್ಯಮಗಳ ರಾಜಧಾನಿ ಎಂದು ಹೆಸರಾಗಿರುವ ಬೆಂಗಳೂರಿಗೆ ಇದರಿಂದ ತೊಂದರೆಯಾಗಲಿದೆ. ಮೊದಲ ಆರು ತಿಂಗಳ ಅವಧಿಯಲ್ಲಿ ನವೋದ್ಯಮಗಳಿಗೆ ಹರಿದುಬಂದ ಎಫ್‌ಡಿಐ ಪ್ರಮಾಣದಲ್ಲಿ ಶೇ 80ರಷ್ಟು ಕುಸಿತವಾಗಿದೆ. ಜಗತ್ತಿನ ಪ್ರಮುಖ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳನ್ನು ಹೊಂದಿರುವ ರಾಜ್ಯದ ಮೇಲೆ ಆರ್ಥಿಕ ಕುಸಿತದ ಪರಿಣಾಮಗಳಾಗಲಿವೆ ಎಂದು ವರದಿ ತಿಳಿಸಿದೆ.

ಶೇ 44.9ರಷ್ಟು ಗುರಿ ಸಾಧನೆ: ಆರ್ಥಿಕ ವರ್ಷದ ಮೊದಲ ಅರ್ಧ ಭಾಗದಲ್ಲಿ ₹ 1.05 ಲಕ್ಷ ಕೋಟಿ ರಾಜಸ್ವ ಸಂಗ್ರಹವಾಗಿದೆ. ಇದರಲ್ಲಿ ₹ 76,885 ಕೋಟಿ ಸ್ವಂತ ತೆರಿಗೆ ರಾಜಸ್ವ ಮತ್ತು ₹ 6,519 ಕೋಟಿ ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹವಾಗಿದೆ. ಸ್ವಂತ ತೆರಿಗೆ ರಾಜಸ್ವ ಸಂಗ್ರಹದಲ್ಲಿ ಗುರಿಗೆ ಹೋಲಿಸಿದರೆ ಶೇಕಡ 44.9ರಷ್ಟು ಸಾಧನೆಯಾಗಿದೆ ಎಂಬ ಅಂಶ ವರದಿಯಲ್ಲಿದೆ.

ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ₹ 98,070 ಕೋಟಿ ರಾಜಸ್ವ ವೆಚ್ಚ ಮಾಡಲಾಗಿದೆ. ಬಂಡವಾಳ ವೆಚ್ಚವೂ ಸೇರಿದರೆ ₹ 1,08,362 ಕೋಟಿ ವಿನಿಯೋಗಿಸಲಾಗಿದೆ. ಸಾರ್ವಜನಿಕ ಸಾಲದ ಮೇಲಿನ ವೆಚ್ಚವೂ ಸೇರಿದರೆ ಒಟ್ಟು ವೆಚ್ಚದ ಮೊತ್ತ ₹ 1,13,716 ಕೋಟಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT