ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ದೇಶದ ಗಡಿ, ಸಾರ್ವಭೌಮತೆ ಗೌರವಿಸಿ

Last Updated 10 ಜೂನ್ 2018, 19:30 IST
ಅಕ್ಷರ ಗಾತ್ರ

ಕಿಂಗ್ಡಾವೋ (ಚೀನಾ): ‘ದೇಶ–ದೇಶಗಳ ಮಧ್ಯೆ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆಗಳು ನೆರೆಯ ದೇಶಗಳ ಗಡಿ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಾದು ಹೋಗುವ ಒಂದು ವಲಯ ಒಂದು ರಸ್ತೆ ಯೋಜನೆಯನ್ನು ಭಾರತದ ಪ್ರಬಲ ವಿರೋಧದ ನಡುವೆಯೂ ಅನುಷ್ಠಾನಕ್ಕೆ ತಂದಿರುವ ಚೀನಾಕ್ಕೆ ಈ ಮೂಲಕ ಅವರು ತಿರುಗೇಟು ನೀಡಿದರು. ಭಾರತವನ್ನು ಹೊರತುಪಡಿಸಿ ಎಸ್‌ಸಿಒದ ಇತರ ಏಳೂ ಸದಸ್ಯ ರಾಷ್ಟ್ರಗಳು ಯೋಜನೆಯನ್ನು ಬೆಂಬಲಿಸಿವೆ.

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 18ನೇ ವಾರ್ಷಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಬಾರಿಯ ಶೃಂಗಸಭೆಯನ್ನು ಚೀನಾ ಆಯೋಜಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಸಮ್ಮುಖದಲ್ಲೇ ಮೋದಿ ಈ ಮಾತು ಹೇಳಿದ್ದಾರೆ.

‘ದೇಶಗಳ ಮಧ್ಯೆ ಮುಕ್ತ ಸಂಪರ್ಕ ಇರಬೇಕು ಎಂಬುದು ಭಾರತದ ನಿಲುವು. ನೆರೆ ದೇಶಗಳ ಸಾರ್ವಭೌಮತೆಯನ್ನು ಗೌರವಿಸುವ, ಕಾರ್ಯಸಾಧುವಾದ ಮತ್ತು ಸುಸ್ಥಿರವಾದ ಸಂಪರ್ಕ ಯೋಜನೆಗಳಿಗೆ ಭಾರತ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತದೆ’ ಎಂದು ಮೋದಿ ಘೋಷಿಸಿದರು.

‘ಇಂತಹ ಯೋಜನೆಗಳು ‘SECURE’ ಆಗಿರಬೇಕು. ಎಸ್‌–ನಾಗರಿಕರ ಭದ್ರತೆ (ಸೆಕ್ಯುರಿಟಿ ಆಫ್ ಸಿಟಿಜನ್ಸ್), ಇ–ಆರ್ಥಿಕ ಅಭಿವೃದ್ಧಿ (ಎಕನಾಮಿಕ್ ಡೆವಲಪ್‌ಮೆಂಟ್), ಸಿ–ಪ್ರಾದೇಶಿಕ ಸಂಪರ್ಕ (ರೀಜನಲ್ ಕನೆಕ್ಟಿವಿಟಿ), ಯು–ಒಗ್ಗಟ್ಟು (ಯುನಿಟಿ), ಆರ್‌– ಸಾರ್ವಭೌಮತೆಗೆ ಗೌರವ (ರೆಸ್ಪೆಕ್ಟಿಂಗ್ ಸಾವರೆಂಟಿ) ಮತ್ತು ಇ–ಪರಿಸರ ಸಂರಕ್ಷಣೆ (ಎನ್ವಿರಾನ್‌ಮೆಂಟ್‌ ಕನ್ಸರ್ವೇಷನ್)’ ಎಂದು ಸೆಕ್ಯೂರ್ ಎಂಬುದನ್ನು ಮೋದಿ ವಿವರಿಸಿದರು.

ಜಿನ್‌ಪಿಂಗ್ ಕರೆ

‘ಎಸ್‌ಸಿಒಗೆ ಭಾರತ ಮತ್ತು ಪಾಕಿಸ್ತಾನಗಳ ಪ್ರವೇಶದಿಂದ ಸಂಘಟನೆಯ ಶಕ್ತಿ ವೃದ್ಧಿಸಿದೆ. ನಾವೀಗ ಶೀತಲ ಸಮರದ ಮನಸ್ಥಿತಿಯನ್ನು ಕಿತ್ತೊಗೆಯಬೇಕು’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಕರೆ ನೀಡಿದರು.

**

ಸೌರ ಒಕ್ಕೂಟ ಸೇರಿ

‘ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಚಿಸಲಾಗಿರುವ ‘ಅಂತರರಾಷ್ಟ್ರೀಯ ಸೌರ ಒಕ್ಕೂಟ’ವನ್ನು ನೀವು ಸೇರಬೇಕು’ ಎಂದು ಕಜಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು.

**

ಮೋದಿ ಕರೆ

ಎಸ್‌ಸಿಒದ 25ನೇ ಶೃಂಗಸಭೆ ವೇಳೆಗೆ ಕೆಲವಾದರೂ ಗುರಿಗಳನ್ನು ನಾವು ಹಾಕಿಕೊಳ್ಳಬೇಕಾಗುತ್ತದೆ. ಅವುಗಳನ್ನು ಸಾಧಿಸಲು ಸಮಿತಿಗಳನ್ನು ರಚಿಸಿಕೊಂಡು ದುಡಿಯಬೇಕು ಎಂದು ನರೇಂದ್ರ ಮೋದಿ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.

**

ಅಭೂತಪೂರ್ವ ಚರ್ಚೆ

‘ಶೃಂಗಸಭೆಯಲ್ಲಿ ವಿಶ್ವದ ಹಲವು ನಾಯಕರನ್ನು ಭೇಟಿ ಮಾಡುವ ಅವಕಾಶ ದೊರೆತಿತ್ತು. ಅವರೊಂದಿಗೆ ನಡೆಸಿದ ಮಾತುಕತೆ ಅಭೂತಪೂರ್ವವಾಗಿತ್ತು. ಅವೆಲ್ಲವೂ ಫಲಪ್ರದವಾಗಲಿವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

**

ಒಕ್ಕೂಟದ ಬ್ಯಾಂಕ್‌ಗೆ ನಿಧಿ

4.7 ಬಿಲಿಯನ್ ಡಾಲರ್: (ಸುಮಾರು ₹ 31,750 ಕೋಟಿ) ಶಾಂಘೈ ಒಕ್ಕೂಟ ಬ್ಯಾಂಕ್‌ಗೆ ಚೀನಾ ತೆಗೆದಿರಿಸಿದ ಹಣ

8 ಶಾಂಘೈ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT