ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ರೇಬಿಸ್‌ ರೋಗನಿರೋಧಕ: 43 ಸಾವಿರ ಲಸಿಕೆ

Published : 24 ಸೆಪ್ಟೆಂಬರ್ 2024, 16:17 IST
Last Updated : 24 ಸೆಪ್ಟೆಂಬರ್ 2024, 16:17 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ರೇಬಿಸ್‌ ರೋಗವನ್ನು ನಿರ್ಮೂಲನೆಗೊಳಿಸಲು ಬಿಬಿಎಂಪಿಯ ಪಶುಸಂಗೋಪನಾ ವಿಭಾಗ ವಿವಿಧ ಅಭಿಯಾನಗಳನ್ನು ನಡೆಸುತ್ತಿದ್ದು, ಏಪ್ರಿಲ್‌ನಿಂದ ಈವರೆಗೆ 43 ಸಾವಿರ ರೋಗನಿರೋಧಕ ಲಸಿಕೆಗಳನ್ನು ಹಾಕಿದೆ.

ರೇಬಿಸ್ ಮಾರಣಾಂತಿಕ ರೋಗವಾಗಿದ್ದರೂ ಅದನ್ನು ಶೇಕಡ 100ರಷ್ಟು ತಡೆಗಟ್ಟಬಹುದಾಗಿರುತ್ತದೆ. ಕೇಂದ್ರ ಸರ್ಕಾರವು 2021ರಲ್ಲಿ ಅನಾವರಣಗೊಳಿಸಿದ ‘ನಾಯಿಗಳಿಂದ ಉಂಟಾಗುವ ರೇಬಿಸ್‌ ನಿರ್ಮೂಲನೆಗೆ ರಾಷ್ಟ್ರೀಯ ಕ್ರಿಯಾಯೋಜನೆ’ (ಎನ್‌ಎಪಿಆರ್‌ಇ) ಅಡಿಯಲ್ಲಿ 2030ರೊಳಗೆ ಭಾರತವನ್ನು ರೇಬೀಸ್ ಮುಕ್ತ ರಾಷ್ಟವನ್ನಾಗಿ ರೂಪಿಸುವ ಉದ್ದೇಶವಿದೆ.

ಈ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬಿಸ್ ನಿಯಂತ್ರಣಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಜಾಗೃತಿ ಜೊತೆಗೆ ಹುಚ್ಚುನಾಯಿ ರೋಗದ ವಿರುದ್ಧ ಲಸಿಕಾ ಅಭಿಯಾನದಂತಹ ವಿಸ್ತೃತವಾದ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಪಾಲಿಕೆಯ ಪಶು ಸಂಗೋಪನೆ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ರೇಬಿಸ್ ತಡೆಗಟ್ಟುವಿಕೆ ಮತ್ತು ಪ್ರಾಣಿಗಳೊಂದಿಗೆ ಸಹಬಾಳ್ವೆಯ ಕುರಿತು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಪೌರಕಾರ್ಮಿಕರು, ನಗರದ ಕೊಳೆಗೇರಿಗಳಲ್ಲಿನ ನಿವಾಸಿಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿವೆ.

ಸಹಾಯವಾಣಿ: ಸಂಶಯಾತ್ಮಕ ರೇಬಿಸ್ ಪ್ರಕರಣಗಳನ್ನು ದಾಖಲಿಸಲು ಪ್ರತ್ಯೇಕ ರೇಬಿಸ್ ಸಹಾಯವಾಣಿಯನ್ನು (6364893322) ಬಿಬಿಎಂಪಿ ಕಾರ್ಯಾಚರಣೆ ಮಾಡುತ್ತಿದೆ. ನಾಯಿ ಕಡಿತಕ್ಕೊಳಗಾದ ಸಂತ್ರಸ್ತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದೆ.

ವಾರ್ಡ್‌ವಾರು ಹುಚ್ಚುನಾಯಿ ರೋಗದ ವಿರುದ್ದ ಲಸಿಕಾ ಅಭಿಯಾನ, ಬೀದಿನಾಯಿಗಳ ಸಂಪರ್ಕಕ್ಕೆ ಒಳಪಡುವ ವ್ಯಕ್ತಿಗಳಿಗೆ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಬೀದಿನಾಯಿ ಕಡಿತಕ್ಕೊಳಗಾದ ಸಂತ್ರಸ್ತರಿಗೆ ಚಿಕಿತ್ಸಾ ವೆಚ್ಚವನ್ನು ಪಾಲಿಕೆ ವತಿಯಿಂದ ಭರಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT