ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಿಝೋಫ್ರೇನಿಯದೊಂದಿಗೆ ಸಾಮರಸ್ಯದ ಬದುಕು

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಮನುಕುಲದ ಇತಿಹಾಸದಲ್ಲಿ ಅತ್ಯಂತ ಭಯಾನಕ ವ್ಯಾಧಿಗಳಲ್ಲಿ, ‘ಸ್ಕಿಝೋಫ್ರೇನಿಯ’ ಕೂಡ ಒಂದು. ಅದನ್ನು ‘ಮನಸ್ಸಿನ ಕಾನ್ಸರ್’ ಎಂದೂ ಸಂಬೋಧಿಸಲಾಗುತ್ತದೆ. ಈ ರೋಗದಿಂದ ಬಳಲುವವರು, ವಿಚಿತ್ರ ವರ್ತನೆ, ಸ್ವಕಾಳಜಿಯ ಅಲಕ್ಷ್ಯ, ಅನವಶ್ಯಕ ಹಾಗೂ ವಿಪರೀತ ಸಂಶಯ, ಕಲ್ಪಿತ ಅಥವಾ ಭ್ರಮಿಸಿಕೊಂಡ ವ್ಯಕ್ತಿಗಳೊಡನೆ ಸಂಭಾಷಣೆಯನ್ನು ಮಾಡುತ್ತಿರುವುದನ್ನು ಕಾಣಬಹುದು.

1911ರಲ್ಲಿ, ಸ್ವಿಝರ್‌ಲ್ಯಾಂಡ್‌ನ ಮನೋರೋಗ ತಜ್ಞ, ಯೂಜಿನ್ ಬ್ಲೂಲರ್ ‘ಸ್ಕಿಝೋಫ್ರೇನಿಯ’ ಎಂಬ ಪದದ ಬಳಕೆಯನ್ನು ಮೊದಲ ಬಾರಿಗೆ ಮಾಡಿದರೂ 1887 ರಲ್ಲಿಯೇ ಎಮಿಲ್ ಕ್ರೆಪಲೀನ್ ಎಂಬ ನರರೋಗ ತಜ್ಞ ಇದರ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದರು. ಗ್ರೀಕ್ ಭಾಷೆಯಲ್ಲಿ ‘ಸ್ಕಿಝೋ’ ಎಂದರೆ ಛಿದ್ರ ಹಾಗೂ ‘ಫ್ರೆನ್’ ಎಂದರೆ ಮನಸ್ಸು ಎಂದರ್ಥ.

ಸಾಮಾನ್ಯ ಜನರಲ್ಲಿ ಇರುವ ಕಲ್ಪನೆಯಂತೆ ಇದು ಬಹು ವ್ಯಕ್ತಿತ್ವ ರೋಗವಲ್ಲ. ಸ್ಕಿಝೋಫ್ರೇನಿಯ ತನ್ನದೇ ಆದ ವಿಶಿಷ್ಟ ಹಾಗೂ ವಿಚಿತ್ರ ರೋಗ ಲಕ್ಷಣಗಳನ್ನು ಹೊಂದಿದೆ. ಈ ಕಾಯಿಲೆಯು ಲಿಂಗ, ಜನಾಂಗ, ಸಾಮಾಜಿಕ, ಆರ್ಥಿಕ ಸ್ಥಿತಿ ಹಾಗೂ ಭೌಗೋಳಿಕ ಪ್ರದೇಶಗಳ ಭೇದವಿಲ್ಲದೇ ಯಾರಲ್ಲಾದರೂ ಕಾಣಿಸಿಕೊಳ್ಳಬಹುದು. ಇತ್ತೀಚೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) ನಡೆಸಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸಾವಿರಕ್ಕೆ ನಾಲ್ಕು (ಶೇ 0.4) ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ.

ಕಾರಣಗಳು
ಅನುವಂಶೀಯತೆ, ಜನನದ ಸಮಯದಲ್ಲಿ ಉಂಟಾಗುವ ತೊಂದರೆಗಳು, ನರಮಂಡಲದ ನಂಜು, ಮಾದಕ ವಸ್ತುಗಳ ಉಪಯೋಗ (ಗಾಂಜಾ, ಮದ್ಯಪಾನ, ಕೊಕೇನ್ ಇತ್ಯಾದಿ), ಜೆನೆಟಿಕ್ ಕಾರಣಗಳಿಂದ ಈ ರೋಗವು ಉಂಟಾಗಬಹುದೆಂದು ಸಂಶೋಧನೆಗಳು ತಿಳಿಸಿವೆ. ಸ್ಕಿಝೋಫ್ರೇನಿಯ ರೋಗದಲ್ಲಿ, ಮಿದುಳಿನಲ್ಲಿ ಡೋಪಮಿನ್ ಎಂಬ ರಾಸಾಯನಿಕದ ಪ್ರಮಾಣ ಹೆಚ್ಚಾಗುತ್ತದೆ. ಸೆರೊಟೊನಿನ್ ಹಾಗೂ ಇನ್ನಿತರ ರಾಸಾಯನಿಕಗಳ ಮಟ್ಟದಲ್ಲಿ ಏರುಪೇರು ಕಂಡು ಬರುತ್ತದೆ.

ರೋಗ ಲಕ್ಷಣಗಳು
ಸ್ಕಿಝೋಫ್ರೇನಿಯವು ವ್ಯಕ್ತಿಯ ಗ್ರಹಿಕೆ, ಚಿಂತನೆ, ಮಾತು ಹಾಗೂ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿಗೆ ಅತಿಮಾನುಷ ಅನುಭವಗಳಾಗುತ್ತವೆ. ವ್ಯಕ್ತಿ, ವಸ್ತುಗಳು ಅಗೋಚರವಾಗಿದ್ದರೂ ಸಹ ಅವರ/ಅವುಗಳ ಧ್ವನಿ, ಶಬ್ದಗಳು ಕೇಳಿಸುವುದು, ಧ್ವನಿಗಳು ತಮ್ಮೊಳಗೆ ವ್ಯಕ್ತಿಯ ಬಗ್ಗೆ ಚರ್ಚಿಸುವುದು, ಆತನನ್ನು ನಿಂದಿಸುವುದು, ಕುಚೋದ್ಯ ಮಾಡುವುದು ಸಹ ಕೇಳಿಸಬಹುದು. ಕೆಲವೊಮ್ಮೆ ಅಗೋಚರ ಮನುಷ್ಯರ ಜೊತೆ ಸಂಭಾಷಣೆಯನ್ನೂ ನಡೆಸಬಹುದು.

ಈ ಕಾಯಿಲೆಯಲ್ಲಿ, ರೋಗಿಯು ತನ್ನನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸುತ್ತಿದ್ದು, ತನ್ನೆಲ್ಲ ಮಾತು, ಚಟುವಟಿಕೆಗಳಿಗೆ ಬಾಹ್ಯ ಶಕ್ತಿಯೇ ಕಾರಣ ಎಂದು ಭಾವಿಸುತ್ತಾನೆ. ವ್ಯಕ್ತಿಯ ಯೋಚನೆಯ ಹರಿವಿನಲ್ಲಿ ಅಡೆತಡೆಗಳುಂಟಾಗಿ, ಮಾತು ಅರ್ಥಹೀನವಾಗುತ್ತದೆ ಅಥವಾ ಆತ ಸಂಪೂರ್ಣ ಸ್ತಬ್ಧನಾಗಬಹುದು. ಇಂತಹ ವಿಚಿತ್ರ ಅನುಭವಗಳು, ನಿಂದಿಸುತ್ತಿರುವ ಅಗೋಚರ ಮನುಷ್ಯರ ಧ್ವನಿಗಳು ಹಾಗೂ ಕಲ್ಪಿತ ಪ್ರಾಣಭಯಗಳಿಂದ, ಕೆಲವೊಮ್ಮೆ ವ್ಯಕ್ತಿಯು ಆಕ್ರಮಣಶೀಲ ಹಾಗೂ ಹಿಂಸಾತ್ಮಕನಾಗಬಹುದು. ಕೆಲವೊಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಬಹುದು.

ಚಿಕಿತ್ಸೆ
1952ಕ್ಕಿಂತ ಮುಂಚೆ, ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆಯಿರಲಿಲ್ಲ. ಕ್ಲೋರ್‌ಪ್ರೋಮಾಜಿನ್ ಎಂಬ ಔಷಧಿಯ ಆವಿಷ್ಕಾರದ ನಂತರ, ಮನೋರೋಗಗಳಿಗೆ ಸಂಬಂಧಿಸಿದ ಅನೇಕ ಔಷಧಿಗಳ ಆವಿಷ್ಕಾರವಾಗಿದ್ದು, ಇದರಿಂದ ಸ್ಕಿಝೋಫ್ರೇನಿಯಾದ ಚಿಕಿತ್ಸೆ ಪರಿಣಾಮಕಾರಿ ಹಾಗೂ ತೃಪ್ತಿದಾಯಕವಾಗಿದೆ. ಇತ್ತೀಚೆಗೆ ವಾರ ಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ನೀಡುವಂತಹ ಚುಚ್ಚುಮದ್ದುಗಳ ಆವಿಷ್ಕಾರವಾದಾಗಿನಿಂದ, ದಿನನಿತ್ಯ ಮಾತ್ರೆಗಳ ಸೇವನೆಯ ತೊಂದರೆ ತಪ್ಪುತ್ತಿದೆ. ಅರಿವಳಿಕೆಯೊಂದಿಗೆ ನೀಡುವ ವಿದ್ಯುತ್ ಕಂಪನ ಚಿಕಿತ್ಸೆಯು ಉಲ್ಬಣ ಗೊಂಡಿರುವ ಹಾಗೂ ದೀರ್ಘಾವಧಿಯ ರೋಗ ನಿಯಂತ್ರಣಕ್ಕೆ ನೆರವಾಗುತ್ತದೆ. ನಿಯಮಿತ ಔಷಧೋಪಚಾರದೊಂದಿಗೆ, ಸೂಕ್ತವಾದ ಸಾಮಾಜಿಕ ಹಾಗೂ ಔದ್ಯೋಗಿಕ ಪುನರ್ವಸತಿ ಒದಗಿಸುವುದರಿಂದ, ಈ ರೋಗವು ನಿಯಂತ್ರಣದಲ್ಲಿದ್ದು, ವ್ಯಕ್ತಿಯು ಬಹುತೇಕ ಇತರರಂತೆ ಸಾಮಾನ್ಯ ಜೀವನ ನಡೆಸಬಹುದಾಗಿದೆ.

ಕುಟುಂಬದ ಪಾತ್ರ
ದೀರ್ಘಾವಧಿಯ ಮತ್ತು ಅವಲಂಬನೆ ಉಂಟು ಮಾಡುವ ರೋಗವಾಗಿರುವ ಸ್ಕಿಝೋಫ್ರೇನಿಯವು, ವ್ಯಕ್ತಿಯ ಕುಟುಂಬದ ಮೇಲೆ ಅತೀವ ಒತ್ತಡ ಬೀರುತ್ತದೆ. ರೋಗಿಯ ಕಾಳಜಿಗಾಗಿ ಒಬ್ಬಿಬ್ಬರು ಸತತವಾಗಿ ಜೊತೆಗಿರಲೇಬೇಕಾಗುತ್ತದೆ. ಕೆಲವೊಮ್ಮೆ, ವ್ಯಕ್ತಿಯ ಹಿಂಸಾತ್ಮಕ ಹಾಗೂ ಸಾಮಾಜಿಕವಾಗಿ ಅಸೂಕ್ತವಾದ ನಡೆವಳಿಕೆಯಿಂದ, ಕುಟುಂಬದ ಸದಸ್ಯರಿಗೆ ಮುಜುಗರವಾಗಬಹುದು. ಕುಟುಂಬವು ಒಬ್ಬ ಸದಸ್ಯನನ್ನು ಭಾಗಶಃ ಕಳೆದುಕೊಂಡಂತಾಗುತ್ತದೆ ಆದರೆ, ನಮ್ಮ ದೇಶದಲ್ಲಿ ಕುಟುಂಬ ವ್ಯವಸ್ಥೆ ಹಾಗೂ ಸದಸ್ಯರ ನಡುವಿನ ಪ್ರೀತಿ, ಬಾಂಧವ್ಯಗಳು ಈ ರೋಗದ ನಿರ್ವಹಣೆಯಲ್ಲಿ ಸಹಕಾರಿಯಾಗಿವೆ.

ಈ ಹಿಂದೆ ಚರ್ಚಿಸಿದಂತೆ, ಸ್ಕಿಝೋಫ್ರೇನಿಯವು ದುಬಾರಿ ರೋಗವಾಗಿದ್ದು, ಇದುವರೆಗೆ ಯಾವುದೇ ಆರೋಗ್ಯ ವಿಮಾ ಸಂಸ್ಥೆಗಳು, ಮನೋರೋಗಗಳಿಗೆ ವಿಮೆ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಭಾರತ ಸರ್ಕಾರವು ಜಾರಿಗೆ ತಂದಿರುವಂತಹ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾಳಜಿ ಕಾಯಿದೆಯ ಪ್ರಕಾರ ಎಲ್ಲ ಮನೋರೋಗಗಳನ್ನು ಆರೋಗ್ಯ ವಿಮೆಯಡಿ ತರಲಾಗಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ನೆರವು ಸಿಕ್ಕಿದೆ.

ಈ ಕಾಯಿಲೆಯು ಯಾರಿಗಾದರೂ ಬರಬಹುದು. ನಾವು ಮನೋರೋಗಿಗಳನ್ನು ಕಂಡಾಗ ಕುಚೋದ್ಯ ಮಾಡದೇ, ನಿರ್ಲಕ್ಷಿಸದೇ ಸಹಾನುಭೂತಿ ವ್ಯಕ್ತಪಡಿಸಿ ಅವರಿಗೆ ಸಹಾಯ ಹಸ್ತ ನೀಡಬೇಕು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದರಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ.

ಇತಿಹಾಸದಲ್ಲಿ ಅನೇಕ ಕಲಾವಿದರು, ವಿಜ್ಞಾನಿಗಳು ಹಾಗೂ ವಿದ್ವಾಂಸರು ಈ ರೋಗದಿಂದ ಬಳಲುತ್ತಿದ್ದರೂ ಸಾಧನೆಯ ಉತ್ತುಂಗಕ್ಕೇರಿದ್ದರು. ಇತ್ತೀಚೆಗೆ ನಿಧನರಾದ ಮಹಾನ್ ಗಣಿತ ಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ, ಜಾನ್ ನ್ಯಾಶ್ ಇದಕ್ಕೆ ಉದಾಹರಣೆ. ನಿಯಮಿತ ಔಷಧೋಪಚಾರ, ಮನೋರೋಗತಜ್ಞರೊಂದಿಗೆ ಸಮಾಲೋಚನೆ ಹಾಗೂ ಚಟುವಟಿಕೆಯುಕ್ತ ಜೀವನದಿಂದ ರೋಗಿಗಳು ಇತರರಂತೆ ಸಾಮಾನ್ಯ ಜೀವನ ನಡೆಸಬಹುದು.
-ಡಾ.ಶಿವಾನಂದ ಬಿ. ಹಿರೇಮಠ, ಮನೋರೋಗ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT