ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರ ಕ್ಷೇತ್ರ: ಪಟಾಕಿ ಸಿಡಿಸಿ ಸಂಭ್ರಮಿಸುವಂತಿಲ್ಲ

ಮತ ಎಣಿಕೆಗೆ ಸಿದ್ಧತೆ ಪೂರ್ಣ
Last Updated 9 ನವೆಂಬರ್ 2020, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪ ಚುನಾವಣೆ ನಡೆದ ಆರ್‌. ಆರ್‌. ನಗರ ಕ್ಷೇತ್ರದ ಮತ ಎಣಿಕೆ, ಕ್ಷೇತ್ರ ವ್ಯಾಪ್ತಿಯ ಜ್ಞಾನಾಕ್ಷಿ ವಿದ್ಯಾನಿಕೇತನ್ ಶಾಲೆಯಲ್ಲಿ ಮಂಗಳವಾರ ನಡೆಯಲಿದ್ದು, ಫಲಿತಾಂಶ ಪ್ರಕಟವಾದ ಬಳಿಕ ಗೆದ್ದ ಅಭ್ಯರ್ಥಿ ಪರ ಬಳಿಕ ಪಟಾಕಿ ಸಿಡಿಸಿ, ಸಂಭ್ರಮಿಸಲು ಅವಕಾಶ ಇಲ್ಲ. ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‌ ಜೊತೆ ಮತ ಎಣಿಕೆ ಕೇಂದ್ರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮತ ಎಣಿಕೆ ಕೇಂದ್ರದ ಮುಂದಿನ ರಸ್ತೆಯಲ್ಲಿ‌ ಸಂಚಾರ ನಿಷೇಧಿಸಲಾಗುವುದು. ವಾಹನ‌ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯದಲ್ಲಿ ಪಟಾಕಿ‌ ನಿಷೇಧವಿದ್ದು, ಪಟಾಕಿ ಹೊಡೆದರೆ ಕ್ರಮ ಕೈಗೊಳ್ಳುವುದು ಖಚಿತ’ ಎಂದು ಎಚ್ಚರಿಕೆ ನೀಡಿದರು.

‘ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗುವುದು. ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ಕೂಡಾ ನಿಷೇಧಿಸಲಾಗುವುದು’ ಎಂದೂ ಅವರು ಹೇಳಿದರು.

ಸಿದ್ಧತೆ ಪೂರ್ಣ: ‘ಮತ ಎಣಿಕೆಗೆ ಅಗತ್ಯವಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಗೆ ಎಣಿಕೆ ಕಾರ್ಯ ಆರಂಭವಾಗಲಿದೆ. 16 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 4,62,236 ಮತದಾರರಲ್ಲಿ 2,09,828 (ಶೇ 45.48) ಮಂದಿ ಮತದಾನ ಮಾಡಿದ್ದಾರೆ’ ಎಂದು ಮಂಜುನಾಥ್ ಪ್ರಸಾದ್‌ ತಿಳಿಸಿದರು.

‘ಎಣಿಕೆಗೆ ನಾಲ್ಕು ಕೊಠಡಿಗಳಲ್ಲಿ ತಲಾ ಏಳು ಟೇಬಲ್‌ಗಳ ಒಟ್ಟು 28 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ಮೂವರು ಸಹಾಯಕ ಚುನಾವಣಾಧಿಕಾರಿಗಳನ್ನು ಎಣಿಕಾ ಕಾರ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಎಣಿಕೆ ಕಾರ್ಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟರು ಬೆಳಿಗ್ಗೆ 7 ಗಂಟೆಗೆ ಬರುವಂತೆ ತಿಳಿಸಲಾಗಿದೆ. ಗುರುತಿನ ಚೀಟಿ ಹೊಂದಿದವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುವುದು’ ಎಂದರು.

‘ಮತಯಂತ್ರಗಳಿರುವ ಭದ್ರತಾ ಕೊಠಡಿಯನ್ನು (ಸ್ಟ್ರಾಂಗ್ ರೂಂ) ಬೆಳಿಗ್ಗೆ 7.45ಕ್ಕೆ ತೆರೆಯಲಾಗುತ್ತದೆ. 25 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಯಂತ್ರಗಳ ಎಣಿಕೆ ಮುಗಿದ ಬಳಿಕ ಒಂದು ಮತಗಟ್ಟೆಯ ವಿ.ವಿ. ಪ್ಯಾಟ್ ಅನ್ನು ಚುನಾವಣಾ ವೀಕ್ಷಕರು ಆರಿಸಲಿದ್ದು, ನಾಲ್ಕು ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳನ್ನು ಅಭ್ಯರ್ಥಿಗಳು ಆರಿಸಲಿದ್ದಾರೆ. ಈ ಐದು ಮತಗಟ್ಟೆಗಳ ವಿ.ವಿ.ಪ್ಯಾಟ್‌ಗಳಲ್ಲಿರುವ ಸ್ಲಿಪ್ ಎಣಿಕೆ ಮಾಡಲಾಗುವುದು’ ಎಂದರು.

ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆ

‘ಮತ ಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂ ಪರಿಶೀಲಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಲಾಗುವುದು. ಕೇಂದ್ರದ ಮುಖ್ಯ ದ್ವಾರದಲ್ಲಿ ಹೆಚ್ಚು ಪೊಲೀಸ್ ಭದ್ರತೆ ಇರಲಿದ್ದು, ಗುರುತಿನ ಚೀಟಿ ಪರಿಶೀಲನೆ ಮಾಡಿದ ಬಳಿಕ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುವುದು’ ಎಂದು ಕಮಲ್‌ ಪಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT