ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸುಗೊಂಡ ಮುಂಗಾರು ಮಳೆ

Last Updated 12 ಜೂನ್ 2018, 12:08 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ಮಳೆ ಮುಂದುವರೆದಿದ್ದು, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹಲವು ಸ್ಥಳಗಳಲ್ಲಿ ಹಾನಿಯಾದ ವರದಿಯಾಗಿದೆ.

ಅತಿ ಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯಲ್ಲಿ ವಿದ್ಯುತ್‌ ತಂತಿ ಮೇಲೆ ಮರದ ರೆಂಬೆ ಬಿದ್ದಿರುವುದರಿಂದ ದುರಸ್ತಿ ನಡೆಯುತ್ತಿದ್ದರೂ, ತಕ್ಷಣಕ್ಕೆ ವಿದ್ಯುತ್‌ ಸಂಪರ್ಕ ನೀಡಲು ಸಾಧ್ಯ ವಾಗಿಲ್ಲ. ಅತಿ ಹೆಚ್ಚು ಮಳೆ ಬೀಳುವ ಪುಷ್ಪಗಿರಿ ತಪ್ಪಲು ಗ್ರಾಮಗಳಲ್ಲಿ ನದಿ ತೊರೆಗಳು ತುಂಬಿ ಹರಿದು ಗದ್ದೆಗಳೂ ಜಲಾವೃತವಾಗಿವೆ.

ಬಜೆಗುಂಡಿ ಗ್ರಾಮದ ಹಲವೆಡೆ ಗಳಲ್ಲಿ ಮನೆ ಬದಿಯ ಬರೆ ಕುಸಿದ ಹಾಗೂ ಮನೆಗಳಿಗೆ ಹಾನಿಯಾದ ಘಟನೆಗಳು ಹೆಚ್ಚಾಗಿ ನಡೆದಿವೆ. ಗೌಡಳ್ಳಿ ಗ್ರಾಮ ಪಂಚಾಯಿತಿಯ ಹಿರಿಕರ ಗ್ರಾಮದ ಜಿ.ಡಿ.ದಾಮೋಧರ್ ಎಂಬುವವರ ಮನೆಯ ವಾಹನ ನಿಲ್ಲಿಸುವ ಶೆಡ್ ಮೇಲೆ ಬೈನೆ ಮರ ಬಿದ್ದ ಪರಿಣಾಮ ಒಂದು ಕಾರು ಹಾಗೂ ಜೀಪು ಜಖಂಗೊಂಡಿದೆ.

ಹಾನಗಲ್ ಬಾಣೆಯ ಅನಿತಾ, ಗರಗಂದೂರಿನ ಕಮಲ, ಕೂತಿ ಗ್ರಾಮದ ದೇವಮ್ಮ, ಕಲ್ಕಂದೂರಿನ ಜೀನತ್, ಚೌಡ್ಲು ಗ್ರಾಮದ ವರಲಕ್ಷ್ಮಿ ಸಿದ್ದೇಶ್ವರ ಎಂಬುವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಸಿದ್ದಾರ್ಥ ಬಡಾವಣೆಯ ಎಚ್.ಎಂ.ರವಿ, ಗರ್ವಾಲೆ ಗ್ರಾಮದ ಟಿ.ಎಂ.ಬೇಬಿ, ಹರಗ ಗ್ರಾಮದ ಬೋಜಮ್ಮ ಅಣ್ಣಯ್ಯ ಎಂಬುವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.

ಯಡೂರು ಗ್ರಾಮದ ಲೋಕೇಶ್ ಎಂಬುವರಿಗೆ ಸೇರಿದ ಎತ್ತುಗಳು ಗದ್ದೆಯಲ್ಲಿ ಮೇಯುತ್ತಿದ್ದ ಸಂದರ್ಭ, ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದು ಎತ್ತು ಸಾವಿಗೀಡಾದ ಘಟನೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು, ಚೆಸ್ಕಾಂ ಹಾಗೂ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಲ್ಲೂಕಿನ ಹಲವೆಡೆಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಶಾಸಕ ಅಪ್ಪಚ್ಚು ರಂಜನ್‌ ಭೇಟಿ ನೀಡಿ ಮಾಹಿತಿ ಪಡೆದರು.
ಕಳೆದ 24 ಗಂಟೆ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ 196 ಮಿ.ಮೀ. ಸೋಮವಾರಪೇಟೆ ಕಸಬ ಹೋಬಳಿಗೆ 138.8, ಶನಿ ವಾರಸಂತೆ 101.4, ಕೊಡ್ಲಿಪೇಟೆ 135.5, ಸುಂಟಿಕೊಪ್ಪ 42 ಹಾಗೂ ಕುಶಾಲನಗರ ಹೋಬಳಿಗೆ 11ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT